ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಲಯ ಮಟ್ಟದ ಖೋ-ಖೋ ಪಂದ್ಯಾವಳಿ

0

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಲಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆ. 28ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಸಂಚಾಲಕ ಫಾ. ಎಲಿಯಾಸ್ ಡಿ’ಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾರಾವಿ ಕಾಲೇಜಿನ ಉಪನ್ಯಾಸಕ ಸಂತೋಷ್ ಸಾಲ್ಡಾನಾ ನಾರಾವಿ, ಪೆರೋಡಿತಾಯಕಟ್ಟೆ ಹಾಗೂ ಅಂಡಿಂಜೆ ಕ್ಲಸ್ಟರ್‌ಗಳ ಸಿ.ಆರ್.ಪಿ. ಚೇತನಾ, ನಾರಾವಿ ಕ್ರೀಡಾ ಮೇಲ್ವಿಚಾರಕ ಲೋಕಯ್ಯ, ಪಿ.ಟಿ.ಎ. ಉಪಾಧ್ಯಕ್ಷ ಕುಶಾಲಪ್ಪ ಗೌಡ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಅಲ್ಫೋನ್ಸ್ ರೊಡ್ರಿಗಸ್, ಆಡಳಿತ ಮಂಡಳಿ ಸದಸ್ಯರಾದ ಜೆರೋಮ್ ಲೋಬೊ ಹಾಗೂ ಸಿಪ್ರಿಯನ್ ಫೆರ್ನಾಂಡಿಸ್, ಮುಖ್ಯ ಶಿಕ್ಷಕಿ ಸಿಸ್ಟರ್ ಮೋಳಿ ಇಲ್ಲಿಕ್ಕ್ಯಲ್ ಹಾಗೂ ಉದ್ಯಮಿ ಜನಾರ್ಧನಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕ್ರೀಡಾ ಮೇಲ್ವಿಚಾರಕ ಲೋಕಯ್ಯ ಅವರು ಕ್ರೀಡೆಯ ಮಹತ್ವ ಹಾಗೂ ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಯ ಪಾತ್ರದ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾದ ಸಂತೋಷ್ ಸಾಲ್ಡಾನಾ ಅವರು, “ಗೆಲುವು ಟ್ರೋಫಿಯನ್ನು ನೀಡಬಹುದು, ಆದರೆ ಸೋಲು ನಮಗೆ ಇನ್ನಷ್ಟು ಕಲಿಯುವ ಅವಕಾಶವನ್ನು ನೀಡುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಅಧ್ಯಕ್ಷರಾದ ವಂ. ಫಾ. ಎಲಿಯಾಸ್ ಡಿ’ಸೋಜಾ ಅವರು ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ಪಿ.ಟಿ.ಎ. ಸದಸ್ಯರು, ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ವೀಣಾ ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಲೀಲಾ ನೆರವೇರಿಸಿದರು. ಹಾಗೂ ಪ್ರೀತಿ ವಂದನಾರ್ಪಣೆ ಸಲ್ಲಿಸಿದರು.

ಸಮಾರೋಪ ಸಮಾರಂಭ: ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ಹಾಗೂ ರನ್ನರ್-ಅಪ್ ತಂಡಗಳ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ, ಅವರ ಸಾಧನೆಯನ್ನು ಅಭಿನಂದಿಸಲಾಯಿತು. ಬಾಲಕರ ವಿಭಾಗದಲ್ಲಿ ಸರ್ಕಾರಿ ಪ್ರೌಢಶಾಲೆ, ಅಳದಂಗಡಿ ಪ್ರಥಮ ಸ್ಥಾನ ಪಡೆದರೆ, ಸರ್ಕಾರಿ ಪ್ರೌಢಶಾಲೆ, ವೇಣೂರು ದ್ವಿತೀಯ ಸ್ಥಾನ ಗಳಿಸಿತು. ಬಾಲಕಿಯರ ವಿಭಾಗದಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆ, ಅಳದಂಗಡಿ ಪ್ರಥಮ ಸ್ಥಾನ ಪಡೆದರೆ, ಸರ್ಕಾರಿ ಪ್ರೌಢಶಾಲೆ, ಅಳದಂಗಡಿ ದ್ವಿತೀಯ ಸ್ಥಾನ ಗಳಿಸಿತು. ಸಮಾರೋಪ ಸಮಾರಂಭದ ಸ್ವಾಗತ ಭಾಷಣವನ್ನು ರಾಜೇಶ್ವರಿ ನೆರವೇರಿಸಿದರು ಹಾಗೂ ಕೇವನ್ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here