






ಬೆಳ್ತಂಗಡಿ: ರಾಜ್ಯಪಾಲರ ಸಮ್ಮುಖದಲ್ಲಿ ಲೋಕಭವನದಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ರ್ಯಾಂಕ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿಯ ಎಸ್ಡಿಎಂ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾಧುರ್ಯ ಕೂಡ ಆಯ್ಕೆಯಾಗಿದ್ದರು.
ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮಾಧುರ್ಯ ಅವರ ಕುಟುಂಬಕ್ಕೆ ಸುಮಾರು ಒಂದು ತಿಂಗಳ ಹಿಂದೆಯೇ ಕಳುಹಿಸಲಾಗಿತ್ತು. ಆದರೆ ಪಿನ್ಕೋಡ್ ಬದಲಾವಣೆಯ ಕಾರಣದಿಂದಾಗಿ ಪತ್ರ ಬಂಟ್ವಾಳಕ್ಕೆ ತೆರಳಿ, ಬಳಿಕ ವಾಪಸ್ ಹೋಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಶಾಲೆಯ ಮುಖ್ಯಶಿಕ್ಷಕಿ ಪರಿಮಳ ಅವರ ಸಂಪರ್ಕ ಸಂಖ್ಯೆಯಿದ್ದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.


ನಂತರ ಇತರ ವಿದ್ಯಾರ್ಥಿಗಳ ಕಾರ್ಯಕ್ರಮದ ಮಾಹಿತಿಯನ್ನು ಗಮನಿಸಿದ ಮುಖ್ಯಶಿಕ್ಷಕಿ ಪರಿಮಳ ಅವರು ಮಾಧುರ್ಯಾ ಅವರಿಗೆ ಆಹ್ವಾನ ಏಕೆ ಬಂದಿಲ್ಲ ಎಂಬುದರ ಕುರಿತು ವಿಚಾರಿಸಿ, ಸಂಬಂಧಪಟ್ಟವರನ್ನು ಸಂಪರ್ಕಿಸಿದಾಗ ಆಹ್ವಾನ ಪತ್ರ ಬಂಟ್ವಾಳಕ್ಕೆ ತೆರಳಿರುವುದು ತಿಳಿದುಬಂದಿತು. ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಅವರ ಸಹಕಾರದೊಂದಿಗೆ ಪೋಸ್ಟ್ಮ್ಯಾನ್ರನ್ನು ಸಂಪರ್ಕಿಸಿ, ಬಂಟ್ವಾಳದ ಬಿ.ಸಿ.ರೋಡ್ನಿಂದ ಆಹ್ವಾನ ಪತ್ರವನ್ನು ಪಡೆದುಕೊಳ್ಳಲಾಯಿತು.
ಆಗಸ್ಟ್ 14ರ ರಾತ್ರಿ ಆಹ್ವಾನ ಪತ್ರಿಕೆ ಕೈಗೆ ಸಿಕ್ಕಿದ್ದು, ಮರುದಿನವೇ ಕಾರ್ಯಕ್ರಮವಿದ್ದ ಕಾರಣ ಮಧುರಾ ತಕ್ಷಣ ಬೆಂಗಳೂರಿಗೆ ತೆರಳಿ ರಾಜ್ಯಪಾಲರ ಸಮ್ಮುಖದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೊನೆಯ ಕ್ಷಣದವರೆಗೂ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಎಸ್ ಡಿ ಎಂ ಹೈಸ್ಕೂಲು ಮುಖ್ಯ ಶಿಕ್ಷಕಿ ಪರಿಮಳ ನಡೆಸಿದ ಪ್ರಯತ್ನದಿಂದಾಗಿ ಮಾಧುರ್ಯಾ ಅವರಿಗೆ ರಾಜ್ಯಪಾಲರ ಸನ್ಮಾನ ಪಡೆಯುವ ಅವಕಾಶ ದೊರೆತಂತಾಗಿದೆ.









