ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರಿನಲ್ಲಿ ಗ್ರಾಹಕ ಜಾಗೃತಿ ಪ್ರಮಾಣಪತ್ರ ಕೋರ್ಸ್ ಉದ್ಘಾಟನೆ ಹಾಗೂ ಒಡಂಬಡಿಕೆ ಪತ್ರಕ್ಕೆ ಸಹಿ

0

ಮಡಂತ್ಯಾರು, ಆಗಸ್ಟ್ 21: ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರು ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಮಂಗಳೂರು ಇವರ ಸಹಯೋಗದಲ್ಲಿ ಗ್ರಾಹಕ ಜಾಗೃತಿ ಪ್ರಮಾಣಪತ್ರ ಕೋರ್ಸ್‌ನ ಉದ್ಘಾಟನೆ ಹಾಗೂ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ ಆಗಸ್ಟ್ 21ರಂದು ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾರವರು ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ (ರಿ.) ಇದರ ಅಧ್ಯಕ್ಷರಾದ ಸುನಂದ ಕೆ. ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸುನಂದ ದಂಬೇಕೋಡಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡುವ ಮೂಲಕ ಗ್ರಾಹಕ ಜಾಗೃತಿ ಪ್ರಮಾಣಪತ್ರ ಕೋರ್ಸ್‌ಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ (ರಿ.) ಇವುಗಳ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

ಸುನಂದ ಕೆ. ಮಾತನಾಡಿ, ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತರಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಈ ಪ್ರಮಾಣಪತ್ರ ಕೋರ್ಸ್ ಮೂಲಕ ಗ್ರಾಹಕ ಜಾಗೃತಿಗೆ ಸಂಬಂಧಿಸಿದ ವಿಷಯಗಳ ಕುರಿತು ಜ್ಞಾನವನ್ನು ಪಡೆದು ಅದನ್ನು ಸಮಾಜದ ಇತರರಿಗೂ ತಲುಪಿಸುವಂತೆ ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿಗಳಾದ ಸುನಂದ ದಂಬೇಕೋಡಿ ರವರು ಮಾತನಾಡಿ, ವಿದ್ಯಾರ್ಥಿಗಳು ಜಾಗೃತರಾಗಿ ಕೋರ್ಸ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಅವರು ಪ್ರಸಕ್ತ ವರ್ಷದ ಕೋರ್ಸ್‌ನ ರೂಪರೇಖೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.ಅಧ್ಯಕ್ಷೀಯ ನುಡಿಗಳಲ್ಲಿ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ರವರು, ಕಾಲೇಜಿನಲ್ಲಿ ಈ ಕೋರ್ಸ್ ಆರಂಭಿಸಲು ಸಹಕರಿಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟಕ್ಕೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೋರ್ಸ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿ ಗ್ರಾಹಕ ಜಾಗೃತಿ ಪ್ರಮಾಣಪತ್ರ ಕೋರ್ಸ್‌ಗೆ ನೋಂದಾಯಿಸಿಕೊಂಡರು.ಐಕ್ಯೂಎಸಿ ಸಂಯೋಜಕರು ಹಾಗೂ ಕೋರ್ಸ್ ಸಂಯೋಜಕ ರೋಬಿನ್ ಜೋಸೆಫ್ ಸೆರಾರವರು ಅತಿಥಿಗಳನ್ನು ಸ್ವಾಗತಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಐಶ್ವರ್ಯ ಎಂ.ಜೆ. ವಂದನಾರ್ಪಣೆ ಸಲ್ಲಿಸಿದರು. ರೈನಾ ಜೊತೆ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here