ಮಧ್ವಜ್ಞಾನ ಮತ್ತು ಪ್ರತಿಭಾ ಸಮ್ಮಿಲನ ಸಮಾರಂಭ ವಿಜೃಂಭಣೆಯಿಂದ ಸಂಪನ್ನಧರ್ಮ, ಸಂಸ್ಕೃತಿ, ಶಿಕ್ಷಣದ ಮಹತ್ವ ಸಾರಿದ ಗಣ್ಯರು

0

ಧರ್ಮಸ್ಥಳ, ಆ.15: ತುಳು ಶಿವಳ್ಳಿ ಸಭಾ (ರಿ.) ಬೆಳ್ತಂಗಡಿ–ಧರ್ಮಸ್ಥಳ ವಲಯದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಧ್ವಜ್ಞಾನ ಮತ್ತು ಪ್ರತಿಭಾ ಸಮ್ಮಿಲನ ಕಾರ್ಯಕ್ರಮವು ಕನ್ಯಾಡಿಯ ಹರಿಹರಾನುಗ್ರಹ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಸಮಾರಂಭವು ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಹಾಗೂ ಪ್ರತಿಭೆಗಳ ಪ್ರೋತ್ಸಾಹಕ್ಕೆ ವೇದಿಕೆಯಾಯಿತು.ಶ್ರೀಯುತ ಶ್ರೀಪತಿ ಭಟ್ ಗಂಟಾಲ್‌ಕಟ್ಟೆ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾತನಾಡಿದ ಅವರು, ಮಕ್ಕಳಲ್ಲಿ ಸಂಸ್ಕೃತಿ, ಜ್ಞಾನ, ಶಿಸ್ತು ಹಾಗೂ ಸೇವಾಭಾವ ಬೆಳೆಸುವಲ್ಲಿ ಸಮಾಜ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಧರ್ಮಸ್ಥಳ ಕ್ಷೇತ್ರದ ಮನೋಳಿತಾಯರಾದ ವೇದಮೂರ್ತಿ ಶ್ರೀ ಹರಿಪ್ರಸಾದ್ ಅಂಬುಡತ್ತಾಯ ಅವರು ಮಧ್ವಾಚಾರ್ಯರ ದ್ವೈತ ತತ್ವ, ಭಕ್ತಿ, ಜ್ಞಾನ ಮತ್ತು ಧರ್ಮಾಚರಣೆಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಧ್ವ ತತ್ವಜ್ಞಾನವು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿದೆ ಎಂದು ಅವರು ತಿಳಿಸಿದರು.ಸಭಾಧ್ಯಕ್ಷರಾದ ಡಾ. ಶ್ರೀಪತಿ ಅಂಬುಡತ್ತಾಯ ಮಾತನಾಡಿ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ದೇಶ-ವಿದೇಶಗಳಿಗೆ ತೆರಳುವ ಯುವಜನತೆ ತಮ್ಮ ಸಾಂಸ್ಕೃತಿಕ ಗುರುತನ್ನು ಮರೆಯದೆ ಉಳಿಸಿಕೊಳ್ಳಬೇಕು. ಆಧುನಿಕತೆ ಮತ್ತು ಪರಂಪರೆಯ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸೌತಡ್ಕ ಗಣಪತಿ ದೇವಸ್ಥಾನದ ಮುಖ್ಯ ಅರ್ಚಕರಾದ ವೇದಮೂರ್ತಿ ಸತ್ಯಪ್ರಿಯ ಕಲ್ಲುರಾಯ ಅವರು ತಲಾ ರೂ.10,000 ಪ್ರೋತ್ಸಾಹಧನ ವಿತರಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಅರ್ಚಕರಾದ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಮುಂದಿನ ದಿನಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಿದರು.ಸಮಾಜಸೇವೆ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ವಲಯದ ಹಿರಿಯ ಸದಸ್ಯರಾದ ಶ್ರೀ ರಮೇಶ್ ರಾವ್ ಮುಳಿಮಜಲು ಅವರನ್ನು ಸನ್ಮಾನಿಸಲಾಯಿತು.ನೂತನ ಪದಾಧಿಕಾರಿಗಳ ಆಯ್ಕೆವಲಯದ ನೂತನ ಅಧ್ಯಕ್ಷರಾಗಿ ಪಜಿರಡ್ಕದ ರವಿಕುಮಾರ್ ಭಟ್ ಹಾಗೂ ಕಾರ್ಯದರ್ಶಿಯಾಗಿ ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಭಿಕರು ಅಭಿನಂದಿಸಿದರು.ಮಹಿಳಾ ಘಟಕದ ಸದಸ್ಯೆಯರು ಪ್ರದರ್ಶಿಸಿದ ವಿಶೇಷ ತಿರುವಾದಿ ನೃತ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಪ್ರಸಾದ ಪೊಳ್ನ್ನಾಯ, ಮಾಜಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಯ ಅಂಬುಡತ್ತಾಯ, ವಲಯದ ಗೌರವಾಧ್ಯಕ್ಷ ಗಿರೀಶ್ ಕುದುರೆಂತ್ತಾಯ ವಸಂತ ಮಂಜಿತ್ತಾಯ, ಹರೀಶ್ ರಾವ್ ಮುಂಡ್ರುಪ್ಪಾಡಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಮುರಳಿ ಕೃಷ್ಣ ಆಚಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ವಲಯದ ಕಾರ್ಯದರ್ಶಿ ಪ್ರಶಾಂತ್ ಹೆಬ್ಬಾರ್ ವಾರ್ಷಿಕ ವರದಿ ಮಂಡಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಮಂಜಿತ್ತಾಯ ಸ್ವಾಗತಿಸಿದರು. ಸೌಮ್ಯ ಅಂಬುಡತ್ತಾಯ ವಂದನಾರ್ಪಣೆ ಸಲ್ಲಿಸಿದರು. ರಮಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.ಆಟಿಯ ವೈವಿಧ್ಯಮಯ ಉಪಹಾರದ ವ್ಯವಸ್ಥೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಮಾಜದ ಒಗ್ಗಟ್ಟು, ಸಂಸ್ಕೃತಿ ಸಂರಕ್ಷಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಡೆದ ಸಮಾರಂಭವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

LEAVE A REPLY

Please enter your comment!
Please enter your name here