






ಕಲ್ಮಂಜ: ಸರಳತೆ, ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆಯೇ ಬದುಕಿನ ಮೂಲಮಂತ್ರವಾಗಿಸಿಕೊಂಡಿದ್ದ ಕಲ್ಮಂಜ ಗ್ರಾಮದ ಹಿರಿಯ ವ್ಯಕ್ತಿ, ಧರ್ಮಸ್ಥಳದ ವ್ಯಾಪಾರಿ ನಾರಾಯಣ ಗೌಡ ಬಜಿಲ ಅವರ ಶ್ರದ್ಧಾಂಜಲಿ ಸಭೆ ಆಗಸ್ಟ್ 5 ಬಜಿಲ ಮನೆಯಲ್ಲಿ ಭಾವಪೂರ್ಣವಾಗಿ ನಡೆಯಿತು.

ಬಂಧು-ಬಳಗ, ಊರಿನ ಗಣ್ಯರು, ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಆಗಮಿಸಿ ಅಗಲಿದ ಆತ್ಮಕ್ಕೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.ಕಷ್ಟಪಟ್ಟು ಬೆಳೆದ ಬದುಕುಯೌವನದಲ್ಲಿಯೇ ಕೃಷಿಯಲ್ಲಿ ತೊಡಗಿಸಿಕೊಂಡ ನಾರಾಯಣ ಗೌಡರು, ಕುಟುಂಬದ ಜವಾಬ್ದಾರಿಯನ್ನು ಹೊತ್ತು ಧರ್ಮಸ್ಥಳದಲ್ಲಿ ಪಾನ್ ಅಂಗಡಿ ಆರಂಭಿಸಿದರು. ಕಷ್ಟಪಟ್ಟು ದುಡಿದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಿದರು.
ತಮ್ಮ ಮಕ್ಕಳಷ್ಟೇ ಅಲ್ಲದೆ ಕಿರಿಯ ಸಹೋದರನ ಮಕ್ಕಳ ಜವಾಬ್ದಾರಿಯನ್ನು ಸಹ ತಮ್ಮದೆಂದು ಭಾವಿಸಿ ಸಾಕಿ ಬೆಳೆಸಿದರು. ಮಾನವೀಯತೆಗೆ ಮೆಚ್ಚುಗೆಎಲ್ಲರೊಂದಿಗೂ ಪ್ರೀತಿ, ಗೌರವದಿಂದ ನಡೆದುಕೊಳ್ಳುತ್ತಿದ್ದ ಅವರು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ವಿಶೇಷವಾಗಿ ಮೂಕ ಜೀವಿಗಳ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಪ್ರತಿದಿನ ಬೀದಿ ನಾಯಿಗಳು, ಹಸುಗಳು ಹಾಗೂ ಕೋತಿಗಳಿಗೆ ಆಹಾರ ನೀಡಿ ತಮ್ಮ ಕರುಣಾ ಮನೋಭಾವವನ್ನು ತೋರಿಸುತ್ತಿದ್ದರು. “ಜೀವವಿರುವುದೆಲ್ಲವೂ ದೇವರ ರೂಪ” ಎಂಬ ನಂಬಿಕೆ ಅವರದಾಗಿತ್ತು.


ಕಾರ್ಯಕ್ರಮವನ್ನು ಬಂಧು ಮೊನಪ್ಪ ಗೌಡ ಸುರತ್ಕಲ್ ಅವರು ನಾರಾಯಣ ಗೌಡರ ಸರಳ ಬದುಕು ಮತ್ತು ತ್ಯಾಗವನ್ನು ಸ್ಮರಿಸಿದರು. ಹಿರಿಯ ಪುತ್ರ ಜಯಾನಂದ ಗೌಡ ದೀಪ ಬೆಳಗಿಸಿದರು. ಪತ್ನಿ ಡೀಕಮ್ಮ ಅವರು ತಿಲಕಧಾರಣೆ ನೆರವೇರಿಸಿದರು.
ಪುತ್ರರಾದ ಪ್ರಭಾಕರ ಗೌಡ, ಲೋಕೇಶ್ ಗೌಡ, ಗಣೇಶ್ ಗೌಡ ಅವರು ಪುಷ್ಪಮಾಲಾರ್ಪಣೆ ಮಾಡಿದರು. ಗಿರೀಶ್ ಗೌಡ ಅವರು ಧೂಪಾರಾಧನೆ ಸಲ್ಲಿಸಿದರು. ಬಳಿಕ ಸಭಿಕರೆಲ್ಲರೂ ಎರಡು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಸುಂದರ ಗೌಡ ಬಜಿಲ ಅವರು ಮಾತನಾಡಿ, “ಚಿಕ್ಕಪ್ಪ ನವರು ನಮಗೆಲ್ಲರಿಗೂ ಆದರ್ಶ. ಶಿಸ್ತುಬದ್ಧ ಬದುಕು, ಯಾರಿಗೂ ತೊಂದರೆ ಕೊಡದ ಸ್ವಭಾವ, ಎಲ್ಲರಿಗೂ ಸಹಾಯ ಮಾಡುವ ಗುಣ ಅವರನ್ನು ವಿಶಿಷ್ಟರನ್ನಾಗಿ ಮಾಡಿತ್ತು” ಎಂದು ನೆನೆಪಿಸಿಕೊಂಡರು.ಕಾರ್ಯಕ್ರಮದಲ್ಲಿ ಸೊಸೆಯಂದಿರಾದ ಜಯಂತಿ, ವನಿತಾ, ಪುಷ್ಪಲತಾ, ಶ್ವೇತಾ, ತೃಪ್ತಿ ಮೊಮ್ಮಕ್ಕಳಾದ ಶ್ರೇಯ, ಶ್ರಾವ್ಯ, ಶ್ರವಣ್, ಪವನ್, ಪ್ರಣಮ್ಯ, ಮೌಲ್ಯ, ಮಾನ್ಯ, ಮನೀಶ್, ಸ್ಪಸ್ತಿಕ್, ಶ್ಲೋಕ, ಶಾರ್ವಿ, ಪದ್ಮಾವತಿ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು, ಹಿತೈಷಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿದರು.
ನಾರಾಯಣ ಗೌಡರ ಅಗಲಿಕೆಯು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕಲ್ಮಂಜ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟರು.









