







ಬೆಳ್ತಂಗಡಿ: ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬಂತಡ್ಕದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ದಿನನಿತ್ಯ ಓಡಾಡುವ ಶಾಲಾ ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳು ಕೆಸರಿನಲ್ಲಿ ಒದ್ದಾಡಿಕೊಂಡು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ದುರಸ್ತಿಗಾಗಿ ಸ್ಥಳೀಯರಿಂದ ಹಲವು ಬಾರಿ ಗ್ರಾಮ ಪಂಚಾಯತ್‌ಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಸರಿ ಸುಮಾರು ನೂರಕ್ಕೂ ಅಧಿಕ ಮನೆಗಳಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ರಕ್ಷಿತ್ ಶಿವರಾಂ ಭೇಟಿ ಮತ್ತು ಪರಿಶೀಲನೆ ಸ್ಥಳೀಯರ ಗೋಳು ಹಾಗೂ ತೀವ್ರ ಮಳೆಯಿಂದ ಉಂಟಾದ ಬಂತಡ್ಕ ರಸ್ತೆ ಹಾನಿಯನ್ನು ಪರಿಶೀಲಿಸಲು ಕೊನೆಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ಬಂತಡ್ಕ ಪ್ರದೇಶದ ಮೂಲಭೂತ ಸೌಲಭ್ಯಗಳ ಕಲ್ಪನೆಗಾಗಿ ಮನವಿ ಸಲ್ಲಿಸಿದರು.
ಸಮಸ್ಯೆಗಳನ್ನು ಆಲಿಸಿದ ರಕ್ಷಿತ್ ಶಿವರಾಂ ಅವರು, ವಿಪರೀತ ಮಳೆಯಿಂದ ಹಾನಿಗೊಳಗಾದ ಬಂತಡ್ಕ ಪ್ರದೇಶಕ್ಕೆ ಅಗತ್ಯ ನೆರವು ತಲುಪಿಸುವ ನಿಟ್ಟಿನಲ್ಲಿ ತಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕರ್ನಾಡಿಸ್, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ, ಸಾಫಿ, ನವೀನ್ ಗೌಡ, ಆನಂದ್, ಅಸೈನರ್, ಇಸಾಕ್, ಗಣೇಶ್, ಲಕ್ಷ್ಮಿ ಹಾಗೂ ಶಿರ್ಲಾಲ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಎಂ.ಕೆ., ಅಲ್ ಉಮ್ಮ ಹೆಲ್ಪ್‌ಲೈನ್ ಸದಸ್ಯರಾದ ಸಿದ್ದೀಕ್ ಬಂತಡ್ಕ, ಮೊಹಮ್ಮದ್, ಪುತ್ತು ಮೋನು, ಅಶ್ರಫ್, ಅಝೀಮ್, ಉಮೇಶ್, ದಿನೇಶ್ ಬಂತಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.









