






ನೆಲ್ಯಾಡಿ, ಆ.2: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಕಾಡಾನೆ ದಾಳಿಗೆ ದಿನಗೂಲಿ ಕಾರ್ಮಿಕರೊಬ್ಬರು ಬಲಿಯಾದ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಅವರು ರಾತ್ರಿ ವೇಳೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದರು.
ಹುಡುಕಾಟದ ವೇಳೆ ಬಾಲಕೃಷ್ಣ ಗೌಡ ಅವರ ಬಳಿಯಿದ್ದ ಪ್ಲಾಸ್ಟಿಕ್ ರೈನ್ಕೋಟ್ ಹಾಗೂ ಟೋಪಿ ಸಂಪೂರ್ಣ ಹರಿದ ಸ್ಥಿತಿಯಲ್ಲಿ ದಾರಿಯ ಮಧ್ಯೆ ಬಿದ್ದಿರುವುದು ಕಂಡುಬಂದಿದ್ದು, ಅದರ ಸಮೀಪದಲ್ಲೇ ಕಾಡಾನೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಇದರಿಂದ ಕಾಡಾನೆ ದಾಳಿ ನಡೆಸಿರುವುದು ದೃಢಪಟ್ಟಿತು. ಬಳಿಕ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದಾಗ ಸಮೀಪದ ಕಣಿಯೊಂದರಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಯಿತು.


ಭಾನುವಾರ ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ., ಉಪವಲಯ ಅರಣ್ಯಾಧಿಕಾರಿಗಳು, ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಮರ್ಥ ಗಾಣಿಗೇರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಸಿನಮಕ್ಕಿ–ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ ಹಾಗೂ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರು ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದರು.ಮೃತದೇಹವನ್ನು ಸ್ಥಳದಲ್ಲೇ ಮಹಜರು ನಡೆಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು. ಘಟನೆ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬಳಿಕ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಮೃತ ಬಾಲಕೃಷ್ಣ ಗೌಡ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಡಿಎಫ್ಒ ರವಿಶಂಕರ್, ಎಸಿಎಫ್ ಸುಬ್ಬಯ್ಯ ನಾಯ್ಕ, ಆರ್ಎಫ್ಒ ರಾಘವೇಂದ್ರ, ಫಾರೆಸ್ಟರ್ ಯತೀಂದ್ರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಮುಖಂಡರಾದ ಬೇಬಿ ಕಿರಣ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ರೆಖ್ಯ, ಚೇತನ್ ಕೊಳೆಚ್ಚಾವು, ತಹಸೀಲ್ದಾರ್ ಎಸ್.ಎನ್. ನರಗುಂದ, ಗ್ರಾಮ ಆಡಳಿತಾಧಿಕಾರಿ ವಿಜೇತ್ ಹಾಗೂ ಪಿಡಿಒ ರಾಘವೇಂದ್ರ ಗೌಡ ಉಪಸ್ಥಿತರಿದ್ದರು.ಅರಣ್ಯ ಇಲಾಖೆ ವತಿಯಿಂದ ಸರ್ಕಾರದಿಂದ ಮಂಜೂರಾಗಿರುವ ₹20 ಲಕ್ಷ ಪರಿಹಾರ ಧನದಲ್ಲಿ ಮೊದಲ ಕಂತಾಗಿ ₹5 ಲಕ್ಷ ಮೊತ್ತದ ಚೆಕ್ ಅನ್ನು ಮೃತರ ಕುಟುಂಬಕ್ಕೆ ವಿತರಿಸಲಾಯಿತು.
ಉಳಿದ ₹15 ಲಕ್ಷ ಪರಿಹಾರವನ್ನು ಶೀಘ್ರದಲ್ಲೇ ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದು ಎಂದು ಶಾಸಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.ಈ ವೇಳೆ ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿದ ಶಾಸಕರು, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆ ತಕ್ಷಣವೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಕಾಡಾನೆಗಳನ್ನು ಸೂಕ್ತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಬೇಕು. ಆನೆ ಕಾರಿಡಾರ್ ನಿರ್ಮಾಣ, ಕಾಡಂಚಿನ ಪ್ರದೇಶಗಳಲ್ಲಿ ಹೈಮಾಸ್ಟ್ ಸೇರಿದಂತೆ ಸಮರ್ಪಕ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.”
ಈ ಸಮಸ್ಯೆಯ ಕುರಿತು ನಾನು ಈ ಹಿಂದೆ ವಿಧಾನಸಭೆಯ ಸದನದಲ್ಲಿಯೇ ಪ್ರಸ್ತಾಪಿಸಿದ್ದೆ. ಆದರೆ ಆಗ ಕೆಲವರು ನನ್ನ ಮಾತನ್ನು ಅಪಹಾಸ್ಯ ಮಾಡಿದ್ದರು. ಇಂದು ಅಮಾಯಕ ಜೀವಗಳು ಬಲಿಯಾಗುತ್ತಿರುವ ದುಃಸ್ಥಿತಿ ಎದುರಾಗಿದೆ. ಈಗಲಾದರೂ ಈ ಸಮಸ್ಯೆಯ ಗಂಭೀರತೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗೂ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು,” ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.









