







ಬೆಳ್ತಂಗಡಿ: ದೇಶ ವಿದೇಶಾದ್ಯಂತ ಭಾರೀ ಸಂಚಲನ ಸೃಷ್ಟಿರುವ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆ ಮುಕ್ತಾಯಗೊಳಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಜು.೧೫ರಂದು ೭೦೦೫ ಪುಟಗಳ ಅಂತಿಮ ವರದಿ ಸಲ್ಲಿಸಿದ್ದಾರೆ. ಈ ವೇಳೆ ಎಸ್ಐಟಿ ಪರ ವಕೀಲರಾಗಿರುವ ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಪ್ರಾಥಮಿಕ ವಾದ ಮಂಡಿಸಿದ್ದಾರೆ. ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರು ಮುಂದಿನ ವಿಚಾರಣೆಯನ್ನು ಆಗಸ್ಟ್ ೨೯ಕ್ಕೆ ಮುಂದೂಡಿದ್ದಾರೆ.
ಮಧ್ಯಂತರ ವರದಿ ಸಲ್ಲಿಸಿದ್ದ ಎಸ್ಐಟಿ:
ಧರ್ಮಸ್ಥಳ ಮತ್ತು ಆಸುಪಾಸಿನ ಪರಿಸರದಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಡಡಿಯಾದವರ ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ. ನನಗೆ ಬೆದರಿಕೆ ಒಡ್ಡಿ ಈ ಕೃತ್ಯ ಎಸಗಲಾಗಿದೆ. ಇದೀಗ ಪಶ್ಚಾತ್ತಾಪ ಪಟ್ಟು ನಾನು ದೂರು ನೀಡುತ್ತಿzನೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅನಾಮಧೇಯ ವ್ಯಕ್ತಿ ನೀಡಿzದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೩೯/೨೦೨೫ರಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಅನಾಮಧೇಯ ವ್ಯಕ್ತಿಯನ್ನು ಸಾಕ್ಷಿ ದೂರುದಾರ ಎಂದು ಗುರುತಿಸಲಾಗಿತ್ತು. ಆತನಿಗೆ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ರಕ್ಷಣೆ ನೀಡಲಾಗಿತ್ತು. ಬೆಳ್ತಂಗಡಿ ನ್ಯಾಯಾಲಯಕ್ಕೆ ಮುಸುಕು ಧರಿಸಿಕೊಂಡು ಆಗಮಿಸಿದ್ದ ಸಾಕ್ಷಿ ದೂರುದಾರ ನ್ಯಾಯಾಧೀಶರ ಎದುರು ಗುಪ್ತ ಹೇಳಿಕೆ ದಾಖಲಿಸಿದ್ದರು. ನ್ಯಾಯಾಲಯಕ್ಕೆ ಆಗಮಿಸುವ ವೇಳೆ ತಂದಿದ್ದ ಬುರುಡೆಯನ್ನು ಅವರು ಧರ್ಮಸ್ಥಳ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು. ಆ ನಂತರ ತನಿಖೆ ಮುಂದುವರಿದಿತ್ತು. ಈ ಮಧ್ಯೆ ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಅಪಸ್ವರ ಕೇಳಿ ಬಂದಿತ್ತು. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದು ಪ್ರಕರಣದ ಸಮರ್ಪಕ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ಮನವಿ ಮಾಡಿದ್ದರು. ವಕೀಲರು, ಸಾಹಿತಿಗಳು, ವಿಚಾರವಾದಿಗಳು ಸೇರಿದಂತೆ ಹಲವರು ವಿಶೇಷ ತನಿಖಾ ತಂಡ ರಚಿಸಲು ಒತ್ತಾಯಿಸಿದ್ದರು. ಬಳಿಕ ರಾಜ್ಯ ಸರಕಾರ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಅಸಹಜ ಸಾವಿನ ಪ್ರಕರಣಗಳ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ರಚಿಸಿತ್ತು. ನಂತರ ಎಸ್ಐಟಿ ಅಧಿಕಾರಿಗಳು ಮಾಸ್ಕ್ಮ್ಯಾನ್ ಎಂದೇ ಪ್ರಸಿದ್ಧರಾದ ಸಾಕ್ಷಿ ದೂರುದಾರನ ಸಮ್ಮುಖದಲ್ಲಿ ಧರ್ಮಸ್ಥಳ ಗ್ರಾಮದ ೧೭ ಪಾಯಿಂಟ್ಗಳಲ್ಲಿ ಉತ್ಖನನ ನಡೆಸಿದ್ದರು. ಉತ್ಖನನ ನಡೆಸುವ ವೇಳೆ ಕೆಲವು ಕಡೆ ಮಾನವನ ಮೃತದೇಹದ ಭಾಗಗಳು ದೊರೆತಿದ್ದರಿಂದ ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ರಾಷ್ಟ್ರಮಟ್ಟದ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರು ಬೆಳ್ತಂಗಡಿ ತಾಲೂಕಿನಲ್ಲಿ ಬೀಡು ಬಿಟ್ಟಿದ್ದರು. ನಂತರದ ಬೆಳವಣಿಗೆಯಲ್ಲಿ ಕ್ಷಣ ಕ್ಷಣಕ್ಕೆ ಭಾರೀ ಕುತೂಹಲ ಕೆರಳಿಸುತ್ತಿದ್ದ ಈ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿರುವ ಮಾಸ್ಕ್ಮ್ಯಾನ್ನ ಗುರುತು ಬಹಿರಂಗವಾಗಿತ್ತು. ಮಂಡ್ಯ ಮೂಲದವನಾಗಿದ್ದು ಆರಂಭದಲ್ಲಿ ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಮತ್ತು ಆ ನಂತರ ಉಜಿರೆ ಗ್ರಾಮ ಪಂಚಾಯತ್ನಲ್ಲಿ ಕಾರ್ಮಿಕನಾಗಿದ್ದ ಚಿನ್ನಯ್ಯನೇ ಸಾಕ್ಷಿ ದೂರುದಾರ ಎಂಬುದು ಬೆಳಕಿಗೆ ಬಂದಿತ್ತು. ಚಿನ್ನಯ್ಯ ಮತ್ತಿತರರ ಮೂಲಕ ಮೃತದೇಹಗಳನ್ನು ಹೂತು ಹಾಕಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದ್ದ ಈ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದವರು ತನಿಖೆ ಮುಂದುವರಿಸುತ್ತಿದ್ದಂತೆಯೇ ಹಲವು ವಿಚಾರಗಳು ಬಹಿರಂಗವಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿ ಬುರುಡೆ ಪ್ರಕರಣವನ್ನು ಹೆಣೆಯಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಆ ನಂತರ ಸುಳ್ಳು ದೂರು ನೀಡಿ ಸುಳ್ಳು ಸಾಕ್ಷಿ ಸೃಷ್ಟಿಸಿ ಸರಕಾರವನ್ನು ವಂಚಿಸಿದ ಆರೋಪದಡಿ ಸಾಕ್ಷಿ ದೂರುದಾರನಾಗಿದ್ದ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಆರೋಪಿಯನ್ನಾಗಿ ಹೆಸರಿಸಿ ಆತನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಜತೆಗೆ ಷಡ್ಯಂತ್ರ ರೂಪಿಸುತ್ತಿರುವ ಆರೋಪದಡಿ ಎಸ್ಐಟಿ ಅಧಿಕಾರಿಗಳು ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟಗಾರರಾದ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್, ನೀತಿ ತಂಡದ ಮುಖ್ಯಸ್ಥ ಜಯಂತ್ ಟಿ, ಸೌಜನ್ಯ ಅವರ ಮಾವ ವಿಠಲ್ ಗೌಡ ಪಾಂಗಳ, ಸುಜಾತಾ ಭಟ್ ಮತ್ತಿತರರ ವಿರುದ್ಧ ೩,೯೨೩ ಪುಟಗಳ ಮಧ್ಯಂತರ ವರದಿ ಸಲ್ಲಿಕೆ ಮಾಡಿದ್ದರು. ಇದೀಗ ಒಟ್ಟು ೭೦೦೫ ಪುಟಗಳ ಅಂತಿಮ ವರದಿಯನ್ನು ೧೨ ಫೈಲ್ಗಳನ್ನು ಮಾಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಪೂರ್ಣ ವರದಿ ನೀಡಲು ನ್ಯಾಯಾಲಯ ಸೂಚಿಸಿತ್ತು: ಎಸ್ಐಟಿ ಸಲ್ಲಿಸಿರುವ ಮಧ್ಯಂತರ ವರದಿ ಕುರಿತು ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆದಿತ್ತು. ಈ ವೇಳೆ ನ್ಯಾಯಾಧೀಶರು ತನಿಖೆಯ ಸಂಪೂರ್ಣ ವರದಿ ನೀಡುವಂತೆ ಎಸ್ಐಟಿಗೆ ಸೂಚಿಸಿದ್ದರು. ಈ ಮಧ್ಯೆ ಈ ಪ್ರಕರಣದಲ್ಲಿ ವ್ಯಾಪಕ ಅಪಪ್ರಚಾರ ನಡೆದಿರುವುದರಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಹಳಷ್ಟು ತೊಂದರೆ ಉಂಟಾಗಿದೆ. ಆದ್ದರಿಂದ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಸಂತ್ರಸ್ತ ಎಂದು ಪರಿಗಣಿಸಬೇಕು ಎಂದು ಖ್ಯಾತ ನ್ಯಾಯವಾದಿ ಸಿ.ವಿ.ನಾಗೇಶ್ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ವಾದ ಮಂಡನೆಯಾಗಿತ್ತು. ಇದಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಪರ ಆಕ್ಷೇಪಣೆ ಸಲ್ಲಿಸಿ ಖ್ಯಾತ ವಕೀಲ ದೊರೆರಾಜು ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆಯ ಈ ಹಂತದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವನ್ನು ಸಂತ್ರಸ್ತ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಎಸ್ಐಟಿ ಪರ ವಕೀಲರಾಗಿರುವ ಎಪಿಪಿ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಆಕ್ಷೇಪ ಸಲ್ಲಿಸಿ ವಾದ ಮಂಡಿಸಿದ್ದರು. ಸಿ.ವಿ.ನಾಗೇಶ್ ಮತ್ತು ದಿವ್ಯರಾಜ್ ಹೆಗ್ಡೆ ಅವರ ವಾದ ಪೂರ್ಣಗೊಂಡಿದ್ದು ದೊರೆರಾಜು ತಂಡದಿಂದ ಆಗಮಿಸಿದ್ದ ವಕೀಲ ವಿಜಯ ವಾಸು ಪೂಜಾರಿ ಅವರ ವಾದ ಮಂಡನೆ ನಡೆದಿರಲಿಲ್ಲ. ಇದೇ ಸಂದರ್ಭದಲ್ಲಿ ಬೆಳ್ತಂಗಡಿಯ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ತರಬೇತಿಗಾಗಿ ಬೆಂಗಳೂರಿಗೆ ತೆರಳಿದ್ದರಿಂದ ಪ್ರಕರಣದ ವಿಚಾರಣೆ ಬಂಟ್ವಾಳ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ನ್ಯಾಯಾಧೀಶ ವಿಜಯೇಂದ್ರ ಅವರು ತರಬೇತಿ ಮುಗಿಸಿ ಪುನಃ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದರಾದರೂ ಅವರು ವರ್ಗಾವಣೆಗೊಂಡು ತೆರಳಿರುವ ಹಿನ್ನೆಲೆಯಲ್ಲಿ ಹೊಸ ನ್ಯಾಯಾಧೀಶರು ಆಗಮಿಸಿರುವುದರಿಂದ ಇನ್ನು ಆರಂಭದಿಂದಲೇ ಮೂರು ಕಡೆಯಿಂದ ವಾದ ಮಂಡನೆ ನಡೆಯಬೇಕಿದೆ. ಈ ಮಧ್ಯೆ ಬುರುಡೆ ಪ್ರಕರಣದ ತನಿಖೆ ಸ್ಥಗಿತವಾಯಿತು ಎಂದೇ ಹೇಳಲಾಗುತ್ತಿತ್ತು. ಆದರೆ ಇದೀಗ ತನಿಖೆ ಪೂರ್ಣಗೊಳಿಸಿ ವಿಶೇಷ ತನಿಖಾ ತಂಡದವರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ತಮ್ಮ ಅಂತಿಮ ವರದಿಯಲ್ಲಿ ಎಸ್ಐಟಿ ಅಧಿಕಾರಿಗಳು ಸುಧೀರ್ಘವಾದ ವಿವರಗಳನ್ನು ದಾಖಲಿಸಿದ್ದಾರೆ, ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದ್ದ ವಿಚಾರಗಳಿಗೆ ಇನ್ನಷ್ಟು ಅಂಶಗಳನ್ನು ಸೇರಿಸಿ ಷಡ್ಯಂತ್ರ ರೂಪಿಸಿದವರ ಹೆಸರಿನೊಂದಿಗೆ ಸಾಕ್ಷಿಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.


ಅಂತಿಮ ವರದಿಯೊಂದಿಗೆ ಸಾಕ್ಷಿ ಸಲ್ಲಿಕೆ: ವಿಶೇಷ ತನಿಖಾ ತಂಡದಲ್ಲಿರುವ ಎಸ್ಪಿ ಸೈಮನ್ ಸಿ.ಎ. ಅವರ ನೇತೃತ್ವದ ತಂಡ ಜು.೧೫ರಂದು ನ್ಯಾಯಾಲಯಕ್ಕೆ ಆಗಮಿಸಿ ತನಿಖೆಯ ಅಂತಿಮ ವರದಿ ಸಲ್ಲಿಸಿದೆ. ಈ ವೇಳೆ ತನಿಖೆ ವೇಳೆ ಸಿಕ್ಕ ಮಾನವನ ದೇಹದ ಭಾಗಗಳು, ತನಿಖಾ ಪರಿಕರ, ಸೀರh ಮಾಡಲಾದ ವಸ್ತುಗಳನ್ನು ಕೂಡ ಕೋರ್ಟ್ಗೆ ಅಧಿಕಾರಿಗಳು ಒಪ್ಪಿಸಿದ್ದಾರೆ. ಇನ್ಸ್ಪೆಕ್ಟರ್ಗಳಾದ ಕುಸುಮಾಧರ್ ಮತ್ತು ಮಂಜುನಾಥ್ ಈ ವೇಳೆ ಉಪಸ್ಥಿತರಿದ್ದರು. ಪ್ರಕರಣದ ಆರೋಪಿ ಚಿನ್ನಯ್ಯ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವುದು ದೋಷಾರೋಪಣಾ ಪಟ್ಟಿ(ಚಾರ್ಜ್ಶೀಟ್) ಅಲ್ಲ. ಇದು ತನಿಖೆಯ ಅಂತಿವ ವರದಿ ಎಂದು ಎಸ್ಐಟಿ ಮೂಲಗಳಿಂದ ತಿಳಿದು ಬಂದಿದೆ.









