







ಬೆಳ್ತಂಗಡಿ: ಗೃಹರಕ್ಷಕ ದಳದಲ್ಲಿ ವಿವಾದವೊಂದು ಉಂಟಾಗಿ ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ. ಘಟಕಾಧಿಕಾರಿಯಾಗಿರುವ ಜಯಾನಂದ ಲಾಲ ಅವರನ್ನು ಯಾವುದೇ ನೋಟೀಸ್ ನೀಡದೆ ಏಕಾಏಕಿ ಬದಲಾವಣೆ ಮಾಡಿ ಡೆನ್ನಿಸ್ ಡಿಸೋಜಾ ಅವರನ್ನು ಹೊಸ ನೇಮಕ ಮಾಡಿರುವುದಕ್ಕೆ ಸಿಬ್ಬಂದಿಗಳಿಂದ ವಿರೋಧ ವ್ಯಕ್ತವಾಗಿದೆ. ಈ ವಿಚಾರ ಪರ ವಿರೋಧ ಚರ್ಚೆಗೆ ಗ್ರಾಸ ಒದಗಿಸಿದೆ.
ಸಿಬ್ಬಂದಿಗಳ ವಿರೋಧ: ತಾಲೂಕಿನಲ್ಲಿ ಗೃಹರಕ್ಷಕ ದಳದ ಗೃಹರಕ್ಷಕ ಸದಸ್ಯರಾಗಿ ಕಳೆದ ೩೫ ವರ್ಷಗಳಿಂದ ಸುದೀರ್ಘವಾಗಿ ಪ್ರಾಮಾಣಿಕವಾಗಿ ಶ್ರದ್ಧೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ನಮ್ಮ ಪ್ರಭಾರ ಘಟಕಾಧಿಕಾರಿಯವರನ್ನು ಬದಲಾವಣೆ ಮಾಡುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆದರೆ ನಮ್ಮ ಘಟಕವನ್ನು ಅತ್ಯುತ್ತಮವಾಗಿ ನಡೆಸುತ್ತಾ ವಾರದ ಕವಾಯತನ್ನು ಕೂಡ ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಇವತ್ತಿನವರೆಗೆ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಯನ್ನು ಉಂಟು ಮಾಡಲಿಲ್ಲ. ಅವರಿಂದ ಸಾಧ್ಯವಾದಷ್ಟು ಸಹಕಾರವನ್ನು ಮಾಡುತ್ತಾ ಬರುತ್ತಿದ್ದಾರೆ. ಅವರು ನಮಗೆ ಅತ್ಯುತ್ತಮವಾದ ಕಚೇರಿ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿರುತ್ತಾರೆ. ಅಲ್ಲದೆ ಅವರು ಮಾಡಿದ ಸೇವೆಗೆ ಸರಕಾರ ಅಂದರೆ ನಮ್ಮ ಗೃಹರಕ್ಷಕ ಇಲಾಖೆ ೨೦೨೧-೨೦೨೨ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ನೀಡಿ ಗೌರವಿಸಿದೆ. ಅಲ್ಲದೆ ೨೦೨೪ರಲ್ಲಿ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ. ಅಷ್ಟು ಉತ್ತಮವಾಗಿ ಅವರ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಆದರೆ ನಮ್ಮ ಘಟಕದಲ್ಲಿ ಕೆಲವರು ಅವರು ಹೇಳಿದ ಹಾಗೆ ಡ್ಯೂಟಿ ಕೊಡಬೇಕು. ಅವರು ಹೇಳಿದ ಸ್ಟೇಷನ್ ಹಾಕಬೇಕು ಎಂದು ಹೇಳಿದಾಗ ಅವರು ವಾರದ ಕವಾಯತನ್ನು ಠಾಣಾ ಕರ್ತವ್ಯ ಇತರ ಕರ್ತವ್ಯದ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿ ತದನಂತರವೇ ಡ್ಯೂಟಿ ಲಿಸ್ಟನ್ನು ಮಾಡಿ ಜಿಲ್ಲಾ ಕಚೇರಿಗೆ ಕಳುಹಿಸಿ ಕೊಡುತ್ತಿದ್ದಾರೆ. ಅವರು ಹೇಳಿದ ಹಾಗೆ ಡ್ಯೂಟಿ ಹಾಕಿಲ್ಲ ಎಂದು ನಮ್ಮ ಘಟಕದ ಕೆಲವು ಸದಸ್ಯರು ಅವರ ಮೇಲೆ ದೂರು ಅರ್ಜಿ ಹಾಕಿದ್ದಾರೆ. ಆದರೆ ಅವರ ದೂರು ಅರ್ಜಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಈ ಬಗ್ಗೆ ಹಲವು ಕವಾಯತು ಪೆರೇಡ್ನಲ್ಲಿ ಬೋಧಕರು ಬಂದು ವಿಚಾರಿಸಿದಾಗ ಯಾರು ಕೂಡಾ ನಮ್ಮ ಘಟಕಾಧಿಕಾರಿಯವರ ವಿರುದ್ಧ ಯಾವುದೇ ದೂರು ನೀಡಿಲ್ಲ. ವಿಚಾರ ಕೂಡ ಹೇಳಿಲ್ಲ. ಆದರೂ ಅವರು ಮೇಲಾಧಿಕಾರಿಗಳಿಗೆ ಇಲ್ಲಸಲ್ಲದ ದೂರು ನೀಡಿದ್ದಾರೆ. ಆದರೆ ನಮ್ಮ ಘಟಕಾಧಿಕಾರಿಗಳು ಯಾರಿಗೂ ಇಲ್ಲಿಯವರೆಗೆ ತೊಂದರೆಯನ್ನು ಮಾಡಿಲ್ಲ. ಆದ್ದರಿಂದ ಬೆಳ್ತಂಗಡಿ ಗೃಹರಕ್ಷಕ ದಳದ ಹಿತದೃಷ್ಟಿಯಿಂದ ಹಾಗೂ ಇಲ್ಲಿಯವರೆಗೆ ನಮ್ಮ ಘಟಕವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿರುವ ನಮ್ಮ ಘಟಕಾಧಿಕಾರಿಯಾದ ಜಯಾನಂದ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದಾಗಿ ತಮ್ಮಲ್ಲಿ ಈ ಮೂಲಕ ಕೇಳಿಕೊಳ್ಳುತ್ತೇವೆ. ಅಲ್ಲದೆ ಜಿಲ್ಲಾ ಕಚೇರಿಯಿಂದ ಯಾವುದೇ ಆದೇಶ ಬಂದರೂ ಅದಕ್ಕೆ ತಕ್ಷಣ ಸ್ಪಂದಿಸುತ್ತಾರೆ. ಜಿಲ್ಲಾ ಕಚೇರಿ ಆದೇಶಕ್ಕನುಗುಣವಾಗಿ ಎಲ್ಲಾ ಬಂದೋಬಸ್ತ್ ಕರ್ತವ್ಯಕ್ಕೆ ಜಿಲ್ಲೆಯಲ್ಲಿ ನಡೆದ ಚುನಾವಣಾ ಸಂದರ್ಭದಲ್ಲಿ, ಹೊರ ರಾಜ್ಯದಲ್ಲಿ ನಡೆದ ಚುನಾವಣಾ ಕರ್ತವ್ಯಕ್ಕೆ, ರೇಡಿಯೋ ಸಂದೇಶ ಬಂದಾಗ ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿರುತ್ತಾರೆ. ಎಲ್ಲಿಯೂ ಕೂಡಾ ತಪ್ಪನ್ನು ಮಾಡಿರುವುದಿಲ್ಲ. ಈ ಎಲ್ಲಾ ವಿಚಾರ ಜಿಲ್ಲಾ ಕಚೇರಿಯ ಅಧಿಕಾರಿಗಳಿಗೆ ಹಾಗೂ ಈ ಹಿಂದೆ ಇದ್ದ ಸಮಾದೇಷ್ಟರರಿಗೆ, ಡೆಪ್ಯುಟಿ ಕಮಾಂಡೆಂಟ್ರವರಿಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ಜೊತೆಗೆ ಪರಿಸರ ದಿನಾಚರಣೆ, ರಕ್ತದಾನ ಶಿಬಿರ, ಆಯುಧ ಪೂಜೆ. ಸ್ವಚ್ಛತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಇನ್ನಿತರ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಬಂದಿರುತ್ತಾರೆ. ಅಂತಹ ಒಳ್ಳೆಯ ಒಬ್ಬ ಘಟಕಾಧಿಕಾರಿಯವರನ್ನು ಯಾರೋ ದೂರು ಕೊಟ್ಟ ಹಿನ್ನೆಲೆಯಲ್ಲಿ ಬದಲಾವಣೆ ಮಾಡುವುದು ಎಷ್ಟು ಸರಿ ಎಂದು ನಮ್ಮೆಲ್ಲ ಅಭಿಪ್ರಾಯವಾಗಿರುತ್ತದೆ. ಆದ್ದರಿಂದ ತಾವುಗಳು ನಮ್ಮೆಲ್ಲರ ಈ ಮನವಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಮ್ಮ ಘಟಕಕ್ಕೆ ಖುದ್ದಾಗಿ ಭೇಟಿ ಮಾಡಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ವಿಚಾರಿಸಿ ತದ ನಂತರವೇ ತೀರ್ಮಾನ ಕೈಗೊಂಡು ಈಗ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರ ಘಟಕಾಧಿಕಾರಿಯವರಾದ ಜಯಾನಂದ ಅವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಬೆಳ್ತಂಗಡಿ ಗೃಹರಕ್ಷಕ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಪ್ರಭಾರ ಸಮಾದೇಷ್ಟರಾದ ದ.ಕ. ಜಿಲ್ಲಾ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.
ಜಯಾನಂದ ಲಾಯಿಲರಿಂದ ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಿಗೆ ಮನವಿ: ಯಾವುದೇ ಮಾಹಿತಿ ನೀಡದೆ, ನೋಟೀಸು ನೀಡದೆ, ಯಾವುದೇ ಕಾರಣವಿಲ್ಲದೆ ಏಕಾಏಕಿ ಬೆಳ್ತಂಗಡಿ ತಾಲೂಕು ಗೃಹರಕ್ಷಕದಳದ ಘಟಕಾಧಿಕಾರಿಯನ್ನು ಬದಲಾವಣೆ ಮಾಡಿ ಬೇರೆಯವರನ್ನು ನೇಮಿಸಿರುವುದು ಸರಿಯಲ್ಲ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ. ಆದ್ದರಿಂದ ನಮ್ಮ ಘಟಕಕ್ಕೆ ಭೇಟಿ ನೀಡಿ ನಮ್ಮ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಸತತ ೩೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನಗೆ ನ್ಯಾಯ ಒದಗಿಸಬೇಕು ಎಂದು ಜಯಾನಂದ ಲಾಯಿಲ ಅವರು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಿಗೆ ಮನವಿ ಸಲ್ಲಿಸಿದ್ದಾರೆ. ೧೯೮೯ರಿಂದ ನಾನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಘಟಕವನ್ನು ಮುನ್ನಡೆಸುತ್ತಾ ಬರುತ್ತಿzನೆ. ಜಿಲ್ಲಾ ಕಚೇರಿಯ ಎಲ್ಲಾ ಆದೇಶಗಳನ್ನು ಚಾಚೂತಪ್ಪದೇ ಪಾಲಿಸುತ್ತಾ ಬಂದಿzನೆ. ತಾಲೂಕು, ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಲ್ಲಿ ನಡೆದ ಚುನಾವಣಾ ಕರ್ತವ್ಯಕ್ಕೆ ಜಿಲ್ಲಾ ಕಚೇರಿಯ ಆದೇಶದಂತೆ ಸಿಬಂದಿಗಳನ್ನು ನಿಯೋಜಿಸುತ್ತಾ ಬಂದಿರುವ ನನ್ನನ್ನು ಯಾವುದೇ ಕಾರಣ ನೀಡದೆ, ನೋಟೀಸು ನೀಡದೆ, ನಮ್ಮ ಘಟಕದ ಯಾವ ಸಿಬ್ಬಂದಿಗಳಿಗೂ ಗೊತ್ತಿಲ್ಲದೆ ಇಲ್ಲಿಯವರೆಗೆ ಯಾವುದೇ ಚುನಾವಣಾ ಕರ್ತವ್ಯಕ್ಕೆ ಅಥವಾ ಬಂದೋಬಸ್ತ್ ಕರ್ತವ್ಯಕ್ಕೆ ಬಾರದ ಓರ್ವ ಸಿಬಂದಿಗೆ ತಾವುಗಳು ಪ್ರಭಾರ ಘಟಕಾಧಿಕಾರಿಯನ್ನಾಗಿ ನೇಮಿಸಿರುವುದು ಯಾವ ನ್ಯಾಯ ಎಂದು ಜಯಾನಂದ ಅವರು ಮನವಿಯಲ್ಲಿ ಪ್ರಶ್ನಿಸಿದ್ದಾರೆ. ಅವರಿಗಿಂತ ನಮ್ಮ ಘಟಕದಲ್ಲಿ ಬಹಳಷ್ಟು ಸಿನಿಯರ್ ಅಫೀಸರ್ಸ್ ತರಬೇತಿ ಆದ ಸಿಬ್ಬಂದಿಗಳು ಇದ್ದಾರೆ. ಘಟಕಕ್ಕೆ ಬಾರದೆ ಯಾವ ಆಧಾರದಲ್ಲಿ ಅವರನ್ನು ಆಯ್ಕೆ ಮಾಡಿದ್ದೀರಿ ಎಂಬುದರ ಬಗ್ಗೆ ನನಗೆ ಸ್ವಷ್ಟವಾದ ಮಾಹಿತಿಯನ್ನು ನೀಡುವಂತೆ ವಿನಂತಿಸಿಕೊಳ್ಳುತ್ತಿzನೆ. ಅಲ್ಲದೆ ಆಸಕ್ತಿ ಇದ್ದವರು ೭ ದಿವಸದ ಒಳಗೆ ಅರ್ಜಿ ಹಾಕಲು ಅವಕಾಶ ನೀಡಿ ಆದೇಶ ಮಾಡಿ ತಾವು ೭ ದಿವಸಗಳ ಮುಂಚಿತವಾಗಿ ಅವರೊಬ್ಬರಿಂದ ಅರ್ಜಿಯನ್ನು ತರಿಸಿ ಅವರಿಗೆ ಆದೇಶವನ್ನು ಮಾಡಿದ್ದೀರಿ. ಇದು ಕಾನೂನು ಬಾಹಿರವಲ್ಲವೇ. ಜು.೭ರಂದು ವಾರದ ಕವಾಯಿತಿಗೆ ಬಂದು ಅವರ ಬ್ಯಾಗ್ನಿಂದ ಆದೇಶವನ್ನು ಭೋದಕರು ತೆಗೆದುಕೊಂಡು ನನಗೆ ಹೇಳುತ್ತಾರೆ. ಅದು ಯಾವ ನ್ಯಾಯ, ನಮ್ಮ ಘಟಕದ ೨೫ ಮಂದಿ ಸಿಬಂದಿಗಳು ಬದಲಾವಣೆ ಮಾಡದಂತೆ ಮನವಿ ನೀಡಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಮತ್ತೊಮ್ಮೆ ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಬೇಕು ಎಂದು ಜಯಾನಂದ ಲಾಯಿಲ ಅವರು ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.


ನಾನು ಯಾವುದೇ ತಪ್ಪು ಮಾಡಿಲ್ಲ: ನನಗೆ ಯಾವುದೇ ಮಾಹಿತಿ ನೀಡದೆ, ನೋಟೀಸು ನೀಡದೇ, ಯಾವುದೇ ಕಾರಣವಿಲ್ಲದೆ ಏಕಾಏಕಿ ನನ್ನನ್ನು ಬದಲಾವಣೆ ಮಾಡಿದ್ದಾರೆ. ೧೯೮೯ರಿಂದ ನಾನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಘಟಕವನ್ನು ಮುನ್ನಡೆಸುತ್ತಾ ಬರುತ್ತಿzನೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಜಿಲ್ಲೆಯ ಆದೇಶವನ್ನು ದುರುಪಯೋಗ ಮಾಡಿಲ್ಲ. ಜಿಲ್ಲಾ ಕಚೇರಿಯ ಎಲ್ಲಾ ಆದೇಶಗಳನ್ನು ಚಾಚೂತಪ್ಪದೇ ಪಾಲಿಸುತ್ತಾ ಬಂದಿzನೆ. ತಾಲೂಕು, ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯಗಳಲ್ಲಿ ನಡೆದ ಚುನಾವಣಾ ಕರ್ತವ್ಯಕ್ಕೆ ಜಿಲ್ಲಾ ಕಚೇರಿಯ ಆದೇಶದಂತೆ ಸಿಬಂದಿಗಳನ್ನು ನಿಯೋಜಿಸುತ್ತಾ ಬಂದಿzನೆ. ಆದರೆ ನನ್ನನ್ನು ಯಾವುದೇ ಕಾರಣ ನೀಡದೆ, ನೋಟೀಸು ನೀಡದೆ ಬದಲಾವಣೆ ಮಾಡಿದ್ದಾರೆ. ಇದರ ಬಗ್ಗೆ ನ್ಯಾಯ ಒದಗಿಸಬೇಕು ಎಂದು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಿಗೆ ಮನವಿ ಸಲ್ಲಿಸಿzನೆ.
-ಜಯಾನಂದ ಲಾಯಿಲ
ಪ್ರಭಾರ ಘಟಕಾಧಿಕಾರಿಯಾಗಿ ಡೇನಿಸ್ ಡಿಸೋಜ ನೇಮಕ: ಅಳದಂಗಡಿಯ ಡೇನಿಸ್ ಡಿಸೋಜ ಅವರನ್ನು ಗೃಹರಕ್ಷಕದಳದ ಘಟಕಕ್ಕೆ ನೂತನ ಪ್ರಭಾರ ಘಟಕಾಧಿಕಾರಿಯಾಗಿ ಜು.೩ರಂದು ನೇಮಿಸಲಾಗಿದೆ. ಡೇನಿಸ್ ಡಿಸೋಜಾ ಅವರು ಮಂಗಳೂರು ವಿಶ್ವವಿದ್ಯಾಲದಿಂದ ವಾಣಿಜ್ಯ ಪದವಿ ಪಡೆದಿದ್ದಾರೆ. ಇಲಾಖೆಯಲ್ಲಿ ೧೫ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಸೆಕ್ಷನ್ ಲೀಡರ್ ಶ್ರೇಣ ಹೊಂದಿದ್ದಾರೆ.
ಇಲಾಖೆ ನಡೆಸುವ ಗೃಹರಕ್ಷಕ ಅಧಿಕಾರಿಗಳ ತರಬೇತಿಯನ್ನು ಒಳಗೊಂಡಂತೆ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ ಮತ್ತು ಲಘು ರಕ್ಷಣಾ ಇತ್ಯಾದಿ ಮೂರು ತರಬೇತಿಗಳನ್ನು ಪಡೆದಿದ್ದು ಈ ಮೂರು ತರಬೇತಿಗಳಲ್ಲಿ ಇವರು ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ವಾರದ ಕವಾಯತಿನಲ್ಲಿ ತರಬೇತಿ ನೀಡುತ್ತಿದ್ದಾರೆ. ಪ್ರತಿ ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವದ ವಿಶೇಷ ಕವಾಯತುಗಳಲ್ಲಿ ಘಟಕವನ್ನು ಮುನ್ನಡೆಸುತ್ತಿದ್ದಾರೆ.
ಸಮಸ್ಯೆ ಬಗೆ ಹರಿಯುತ್ತದೆ: ನನ್ನನು ಮುಂದಿನ ಆದೇಶದವರೆಗೆ ಪ್ರಭಾರ ಘಟಕಾಧಿಕಾರಿಯಾಗಿ ನೇಮಿಸಿರುವುದು. ಇಲಾಖೆಯ ಒಳಗೆ ಕೆಲವೊಂದು ಸಮಸ್ಯೆ ಇದೆ. ಅದನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಸಮಸ್ಯೆ ಬಗೆಹರಿಯುವ ತನಕ ಈ ಸಮಸ್ಯೆ ಇರುತ್ತದೆ. ದೊಡ್ಡ ಸಮಸ್ಯೆ ಏನೂ ಅಲ್ಲ. ಬಗೆಹರಿಯುತ್ತದೆ.
-ಡೆನ್ನಿಸ್ ಡಿಸೋಜ









