







ಬೆಳ್ತಂಗಡಿ: ದಕ್ಷಿಣದ ಅಯೋಧ್ಯೆ ಎಂದೇ ಕರೆಯಲ್ಪಡುವ ಕನ್ಯಾಡಿಯ ಶ್ರೀ ರಾಮ ಕ್ಷೇತ್ರದ ನಿರ್ಮಾತೃ ಸದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರು ರಾಮಕ್ಯರಾಗಿ ೧೭ ವರ್ಷಗಳಾಗಿದೆ. ಈ ಸಂದರ್ಭದಲ್ಲಿ ಅವರನ್ನು ಭಕ್ತರು ಭಕ್ತಿ, ಶ್ರದ್ಧೆಯಿಂದ ಸ್ಮರಿಸಿಕೊಳ್ಳುತ್ತಿದ್ದಾರೆ.
ವಿಭೂತಿ ಪುರುಷ: ಪುಣ್ಯ ಪುರುಷರಾದ ಸದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ತಪಸ್ಸನ್ನೆಲ್ಲ ಧಾರೆಯೆರೆದು ಹಗಲಿರುಳೆನ್ನದೆ, ಮಳೆ ಬಿಸಿಲೆನ್ನದೆ ಏಕ ವ್ಯಕ್ತಿಯ ಸಾಧನೆಯಿಂದ ಕನ್ಯಾಡಿಯಲ್ಲಿ ಶ್ರೀರಾಮನ ಭವ್ಯ ಮಂದಿರ ಎದ್ದು ನಿಲ್ಲುವಂತೆ ಮಾಡಿದವರು. ದೇವಸ್ಥಾನದ ನಿರ್ಮಾಣದ ಪ್ರತಿಯೊಂದು ಹಂತದಲ್ಲಿಯೂ ಭಕ್ತರನ್ನು ಸಂಘಟಿಸಿ ದೇಶ ದೇಶಗಳನ್ನು ಸುತ್ತಿ ಬೇಕಾದ ದ್ರವ್ಯಗಳನ್ನು ಒಗ್ಗೂಡಿಸಿ ದೇವಾಲಯ ಹೀಗೆಯೇ ಇರಬೇಕು ಎಂಬ ರಚನಾ ವಿಧಾನ ರೂಪಿಸಿದ್ದರು. ತಾವೇ ಜಯಪುರಕ್ಕೆ ಹೋಗಿ ಅಲ್ಲಿಯ ಶಿಲ್ಪಿಗಳಿಗೆ ಮಾರ್ಗದರ್ಶನ ಮಾಡಿ ಅವರು ಪಟ್ಟಿರುವ ಶ್ರಮ, ಕಾರ್ಯ ದಕ್ಷತೆ, ತಾಳ್ಮೆಯ ಪ್ರತಿಫಲವಾಗಿ ಮಂದಿರ ಮೂಡಿ ಬಂದಿದೆ. ಆತ್ಮಾನಂದ ಸರಸ್ವತಿ ಸ್ವಾಮೀಜಿ ಕನ್ನಡ ನಾಡಿನ ವಿಭೂತಿ ಪುರುಷರಲ್ಲಿ ಒಬ್ಬರು. ಇವರ ತಪಸ್ಸಿನ ಪ್ರಭಾವದಿಂದ, ಪುಣ್ಯದ ಫಲದಿಂದ ರಾಮ ಭಕ್ತಿಯ ಬಲದಿಂದ ನಿರ್ಮಿಸಿರುವ ಶ್ರೀ ರಾಮ ಕ್ಷೇತ್ರ ಕನ್ನಡ ನಾಡಿನಲ್ಲಿ ಬೆಳೆದು ನಿಂತಿದೆ.
ಭಗವಾನ್ ನಿತ್ಯಾನಂದ ಸ್ವಾಮಿ ಭೇಟಿ: ಭಗವಾನ್ ನಿತ್ಯಾನಂದ ಸ್ವಾಮಿ ಮುಂಬಯಿಯ ಗಣೇಶಪುರಿಯಲ್ಲಿ ನೆಲೆಸಿದ್ದ ಸಂದರ್ಭ ೧೯೩೭ರ ಸುಮಾರಿನಲ್ಲಿ ಆತ್ಮಾನಂದರು ಅವರನ್ನು ಭೇಟಿಯಾಗಿ ಅವರ ಶಿಷ್ಯರಾಗಿ ಸುಮಾರು ೧೫ ವರ್ಷ ಕಳೆದರು. ನಿತ್ಯಾನಂದ ಸ್ವಾಮೀಜಿಗಳಿಗೆ ಇವರ ಮೇಲೆ ಪ್ರೀತಿ ಮತ್ತು ವಿಶ್ವಾಸ ಬೆಳೆದಿತ್ತು. ನಿತ್ಯಾನಂದರು ದೇಶ ಸಂಚಾರ ಮಾಡುವ ಸಮಯ ಒಂದು ದಿನ ಧರ್ಮಸ್ಥಳ ಸಮೀಪದ ಕನ್ಯಾಡಿಯಲ್ಲಿ ನೆಲೆಸಿದ್ದರು. ಇಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆತ್ಮಾನಂದರು ಸರಿ ಎಂದು ಅವರು ಆ ವೇಳೆ ಆಶೀರ್ವಾದ ನೀಡಿದರು. ಆತ್ಮಾನಂದರು ಗುರುವಿನ ಆಜ್ಞೆಯನ್ನು ಅನುಸರಿಸಿ ಪುಣ್ಯ ಕ್ಷೇತ್ರಗಳ ಯಾತ್ರೆ ಕೈಗೊಂಡರು. ನಿತ್ಯಾನಂದ ಸ್ವಾಮಿಗಳು ಬ್ರಹ್ಮಕ್ಯರಾದಾಗ ಅವರ ಅಂತ್ಯಕ್ರಿಯೆಗಳನ್ನು ಇವರೇ ನೆರವೇರಿಸಿ ಅವರ ಸಮಾಧಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಕೆಲವು ವರ್ಷಗಳಲ್ಲಿ ಕೇರಳದ ಕಾಂಞಂಗಾಡ್ನಲ್ಲಿ ನೆಲೆಸಿ ಅಲ್ಲಿ ಸ್ವಾಮಿ ನಿತ್ಯಾನಂದ ಮಂದಿರ, ಗುರುವನ ಎಂಬ ಎರಡು ಗುಡಿಗಳನ್ನು ಭಕ್ತರ ನೆರವಿನಿಂದ ನಿರ್ಮಿಸಿದರು. ಸ್ವಾಮಿ ನಿತ್ಯಾನಂದ ವಿದ್ಯಾ ಕೇಂದ್ರ ಪ್ರಾರಂಭ ಮಾಡಿ ಒಂದು ಪಾಲಿಟೆಕ್ನಿಕ್ ಸಂಸ್ಥೆ ಪ್ರಾರಂಭ ಮಾಡಿದರು. ಅವೆಲ್ಲವೂ ಈಗ ಅಭಿವೃದ್ಧಿ ಪಥದಲ್ಲಿವೆ. ಕಾಂಞಂಗಾಡ್ನಲ್ಲಿ ವಿದ್ಯಾ ಸಂಸ್ಥೆಗಳನ್ನು ಕಟ್ಟಿ ತಾವೇ ತರಗತಿಗಳಿಗೆ ಹೋಗಿ ಪಾಠ ಹೇಳುವ ಸಂದರ್ಭವೂ ಇತ್ತು. ಹಿಂದುಳಿದ ವರ್ಗಗಳ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಸಂಕಲ್ಪ ಅವರದ್ದಾಗಿತ್ತು. ಕಾಂಞಂಗಾಡ್ನ ವಿದ್ಯಾಸಂಸ್ಥೆಯನ್ನು ಅವುಗಳ ಪಾಡಿಗೆ ಬೆಳೆಯಲು ಬಿಟ್ಟು ತಮ್ಮ ಗುರುವಿನ ಆಜ್ಞೆಯನ್ನು ನೆನೆದು ಕನ್ನಡ ನಾಡಿನತ್ತ ಆತ್ಮಾನಂದರು ಬಂದರು.
ಕನ್ಯಾಡಿಗೆ ಆಗಮನ: ೧೯೬೯ರಲ್ಲಿ ಧರ್ಮಸ್ಥಳ ಸಮೀಪದ ಕನ್ಯಾಡಿಗೆ ಆಗಮಿಸಿದ ಆತ್ಮಾನಂದರು ರಾಮ ಭಕ್ತಿಯ ಪ್ರಚಾರ ಮತ್ತು ವಿದ್ಯಾ ಪ್ರಚಾರಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡರು. ಇಲ್ಲಿ ಶ್ರೀ ರಾಮ ಭಾಗವಾನ್ ನಿತ್ಯಾನಂದ ಎಂಬ ಪುಟ್ಟದೊಂದು ಮಂದಿರ ನಿರ್ಮಿಸಿ ಶ್ರೀ ರಾಮ, ಸೀತಾ, ಲಕ್ಷ್ಮಣ, ಹನುಮಂತರ ಕಲಾತ್ಮಕ ಅಮೃತ ಶಿಲಾಮೂರ್ತಿಗಳನ್ನು ಗುಡಿಯಲ್ಲಿ ಸ್ಥಾಪನೆ ಮಾಡಿದರು. ರಾಮ ಭಕ್ತಿಯ ಪ್ರಚಾರಕ್ಕೆ ಭಕ್ತ ವೃಂದ ಬೆಳೆಯಿತು. ಆತ್ಮಾನಂದ ಸರಸ್ವತಿಗಳ ಅನನ್ಯ ರಾಮ ಭಕ್ತಿಯ ಕಾರಣ ನಿತ್ಯವೂ ರಾಮ ಭಜನೆಯಲ್ಲಿ ತನ್ಮಯರಾಗುತ್ತಿದ್ದರು.
ವಾರ್ಷಿಕವಾಗಿ ಶ್ರೀ ರಾಮ ನವಮಿ ಪರ್ವಕಾಲದಲ್ಲಿ ಏಳು ದಿನಗಳ ಅಹೋರಾತ್ರಿ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಎಂಬ ರಾಮ ತಾರಕ ಮಂತ್ರ ಸಪ್ತಾಹವನ್ನು ಪ್ರಾರಂಭ ಮಾಡಿದರು. ಈ ಭಜನಾ ಸಪ್ತಾಹದ ೫೦ನೇ ವರ್ಷದ ನೆನಪಿಗಾಗಿ ಕ್ಷೇತ್ರದ ಈಗಿನ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ೨೦೧೦ರಲ್ಲಿ ಶ್ರೀ ರಾಮ ತಾರಕ ಮಂತ್ರದ ಲೇಖನ ಯಜ್ಞ ನಡೆಸಲಾಗಿತ್ತು.
ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮೂಲ ಶಕ್ತಿಯಾಗಿ ನಿಂತಿದೆ. ೭ ದಿನ ನಡೆಯುವ ಈ ಭಜನಾ ಸಪ್ತಾಹದಲ್ಲಿ ದೇಶದ ಮೂಲೆ ಮೂಲೆಯಿಂದ ಭಕ್ತರು ಭಾಗವಹಿಸುತ್ತಿದ್ದಾರೆ. ೧೯೮೦ರಲ್ಲಿ ಕನ್ಯಾಡಿಗೆ ಸಮೀಪದ ಕಲ್ಮ೦ಜ ದೇವರ ಗುಡ್ಡೆಯಲ್ಲಿ ಸ್ವಲ್ಪ ಭೂಮಿಯನ್ನು ಪಡೆದುಕೊಂಡು ಗುರುದೇವ ಆಶ್ರಯ ಎಂಬ ಆಧ್ಯಾತ್ಮಿಕ ಕೇಂದ್ರ ಕಟ್ಟಿದರು. ಅಲ್ಲಿ ಆಶ್ರಯ ಶಾಲೆಯನ್ನು ಪ್ರಾರಂಭ ಮಾಡಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಪ್ರಾರಂಭ ಮಾಡಿದರು. ಇಲ್ಲಿಯ ದೇವರ ಗುಡ್ಡೆಯಲ್ಲಿ ದೇವಲಿಂಗೇಶ್ವರ ಶಿವ ದೇವಾಲಯದ ನಿರ್ಮಾಣ ಮಾಡಿದರು. ೧೯೭೮ರಲ್ಲಿ ಭವ್ಯ ರಾಮ ದೇವಾಲಯಕ್ಕೆ ಬೆಂಗಳೂರಿನ ಶ್ರೀ ಬಾಲ ಶಿವಯೋಗಿ ಮಹಾರಾಜರು ಶಂಕುಸ್ಥಾಪನೆ ನೆರವೇರಿಸಿದರು. ಪುರಾತನ ಕಾಲದಲ್ಲಿ ನಾಗಬನವಿದ್ದು ನಾಗಾರಾಧನೆ ನಡೆಯುತ್ತಿತ್ತು. ರಕ್ತೇಶ್ವರಿ ದೈವದ ಸ್ಥಾನ ಇದ್ದು ನೇಮಾದಿ ಆಚರಣೆಗಳು ಜಾರಿಯಲ್ಲಿದ್ದವು. ೨೦೦೩ರಲ್ಲಿ ನಾಗನಗುಡಿ ಮತ್ತು ರಕ್ತೇಶ್ವರಿ ಗುಡಿಯನ್ನು ನೂತನವಾಗಿ ನಿರ್ಮಿಸಿ ಪೂಜಾ ಕಾರ್ಯಗಳನ್ನು ವ್ಯವಸ್ಥೆಗೊಳಿಸಿದರು ಆ ಸಂದರ್ಭದಲ್ಲಿ ನಾಗದೇವರಿಗೆ ನಾಗಮಂಗಲ ಸೇವೆ ನಡೆಸಿದರು. ಅದೇ ವರ್ಷದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಕಾಶಿಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ಶ್ರೀ ರಾಮ ದೇವರ ಮತ್ತು ಕ್ಷೇತ್ರಪಾಲ ಗಣಪತಿ ದೇವರ ಪ್ರಾಣ ಪ್ರತಿಷ್ಠಾ ಕಾರ್ಯಗಳು ನಡೆಯಿತು. ೨೦೦೭ರಲ್ಲಿ ಶ್ರೀ ರಾಮ ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮ ರಥೋತ್ಸವಗಳು ನ ಭೂತೋ ನ ಭವಿಷ್ಯತಿ ಎಂಬಂತೆ ೫೪ ದಿನಗಳ ಧೀರ್ಘ ಕಾಲ ನಡೆದವು. ಉತ್ತರ ಭಾರತದ ದೇವಸ್ಥಾನಗಳ ಶೈಲಿಯಲ್ಲಿ ರಾಜಸ್ಥಾನ, ತಮಿಳುನಾಡು, ಅಂದ್ರಪ್ರದೇಶಗಳ ಸುಂದರ ಶಿಲೆಗಳಿಂದ ನಿರ್ಮಾಣಗೊಂಡು ಪ್ರಧಾನ ದೇವರು ಶ್ರೀ ರಾಮ ಜೊತೆಗೆ ಲಕ್ಷ್ಮಣ, ಸೀತಾ, ಹನುಮಂತ, ಕ್ಷೇತ್ರಪಾಲ ಗಣಪತಿ, ಸಿದ್ದಿವಿನಾಯಕ, ಶ್ರೀ ನಿತ್ಯಾನಂದ ಸ್ವಾಮೀಜಿ, ಗುರುನಾರಾಯಣ ಸ್ವಾಮಿ, ಶಿರ್ಡಿ ಸಾಯಿಬಾಬಾ, ನವ ದುರ್ಗೆಯರು, ನವಗ್ರಹ ಸೇರಿದಂತೆ ೩೬ ಗರ್ಭಗುಡಿಗಳಲ್ಲಿ ವಿಗ್ರಹಗಳು ಪ್ರತಿಷ್ಠಾಪನೆಗೊಂಡು ಮೂರ್ತಿಗಳಿಗೆ ಪ್ರಾಣಪ್ರತಿಷ್ಠೆ ನಡೆಯಿತು.
ನವಗ್ರಹ ಹವನ ಪ್ರತ್ಯೇಕವಾದ ಪೂಜಾ ಸ್ಥಾನ ಉದ್ಘಾಟನೆಗೊಂಡಿತು. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ವಸತಿ, ಭೋಜನಾ ವ್ಯವಸ್ಥೆಗೆ ನಾಲ್ಕು ಅಂತಸ್ತಿನ ಅನ್ನಪೂರ್ಣೇಶ್ವರಿ ಅನ್ನ ಛತ್ರ ನಿರ್ಮಾಣವಾಗಿದೆ.
ಇಲ್ಲಿ ನಿರಂತರ ಅನ್ನ ದಾಸೋಹ ನಡೆಯುತ್ತಿದೆ. ಕ್ಷೇತ್ರದಲ್ಲಿ ರಾಮ ದೇವರ ಪರಿವಾರಕ್ಕೆ ೭೨ ಅಡಿ ಎತ್ತರದ ಬ್ರಹ್ಮರಥ, ಆಂಜನೇಯ ಸ್ವಾಮಿಗೆ ೩೬ ಅಡಿ ಎತ್ತರದ ಹನುಮಾನ್ ರಥ, ೧೮ ಅಡಿ ಎತ್ತರದ ಬೆಳ್ಳಿ ರಥ, ಪುಷ್ಪ ರಥ, ಚಂದ್ರ ಮಂಡಲ ರಥ ನಿರ್ಮಾಣಗೊಂಡು ಉತ್ಸವ ನಡೆಯುತ್ತಿದೆ.
ರಾಷ್ಟ್ರೀಯ ಧರ್ಮ ಸಂಸದ್: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವದ ಅಂಗವಾಗಿ ೨೦೧೮ರಲ್ಲಿ ರಾಷ್ಟ್ರೀಯ ಧರ್ಮ ಸಂಸದ್ ಎಂಬ ಮಹಾ ಸಮ್ಮೇಳನ ನಡೆಸಿ ರಾಷ್ಟ್ರದ ಉದ್ದಗಲದಿಂದ ೫೦೦೦ಕ್ಕೂ ಮೇಲ್ಪಟ್ಟು ಸಂತರ ಕೂಡುವಿಕೆಯ ಧರ್ಮ ಸಮ್ಮೇಳನವಾಗಿತ್ತು.
ಇದೊಂದು ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಕೂಡಿಸುವ ಸಂತರ ಪ್ರಭಲ ಕೊಂಡಿಯಾಗಿ ಕಂಗೊಳಿಸಿತ್ತು. ಶ್ರೀ ರಾಮ ಕ್ಷೇತ್ರವನ್ನು ದಕ್ಷಿಣದ ಅಯೋಧ್ಯೆ ಎಂಬಂತೆ ಕಟ್ಟಿ ಬೆಳೆಸುವಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಕರ್ಮಯೋಗಿಯಾಗಿ ತಮ್ಮ ದೇಹ ಶ್ರಮವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸಿದವರು. ದೇಶದಾದ್ಯಂತ ಭಕ್ತ ಜನರಿಂದ ಗೌರವಿಸಲ್ಪಟ್ಟು ಪೂಜಿಸಲ್ಪಡುವ ಒಂದು ಗುರು ಪೀಠ ಸ್ಥಾಪನೆಯ ಒಂದು ಪರಂಪರೆಯ ಸ್ಥಾಪನೆಗೆ ಕಾರಣೀಭೂತರದವರು.
ರಾಮೈಕ್ಯರಾದರು: ಯುಗಪುರುಷರಾಲೊಬ್ಬರಾದ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ೨೦೦೯ರ ಜುಲೈ ೧೮ರಂದು ರಾಮೈಕ್ಯರಾದರು. ಭಗವಾನ್ ನಿತ್ಯಾನಂದ ಮಂದಿರರದ ಸಮೀಪದಲ್ಲಿ ಅವರ ಸಮಾಧಿ ನೆರವೇರಿಸಲಾಯಿತು. ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ರಾಮಕ್ಯರಾಗಿ ೧೭ ವರ್ಷಗಳಾದರೂ ಅವರ ಸ್ಮರಣೆ ಪ್ರತಿ ಕ್ಷಣ ನಡೆಯುತ್ತಿದೆ.
ಕನ್ಯಾಡಿ ಶ್ರೀ ರಾಮಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಅವರ ದಿವ್ಯ ಸ್ಮರಣೆಯೊಂದಿಗೆ ನಡೆಯುತ್ತಿದೆ.


ಸದ್ಗುರು ಪಟ್ಟಾಭಿಷೇಕ: ಆತ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಕನ್ನಡ ನಾಡಿನ ಬಿಲ್ಲವ, ನಾಮಧಾರಿ, ದೀವರ, ಮಲಯಾಳಿ ಬಿಲ್ಲವ ಮುಂತಾದ ಹತ್ತಾರು ಹಿಂದುಳಿದ ವರ್ಗದವರು ಇವರ ಸೇವಾ ಕಾರ್ಯಗಳನ್ನು ಮೆಚ್ಚಿ ಪ್ರೀತಿ ಗೌರವದಿಂದ ಸದ್ಗುರು ಎಂದು ಸ್ವೀಕರಿಸಿದರು. ೨೦೦೮ರ ಜನವರಿಯಲ್ಲಿ ಸದ್ಗುರು ಪಟ್ಟಾಭಿಷೇಕ ಯಶಸ್ವಿಯಾಗಿ ನಡೆಯಿತು. ಸದ್ಗುರು ಪಟ್ಟಾಭಿಷೇಕದ ನಂತರ ಮಂಗಳೂರಿನಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ಗುರು ಪೂಜಾ ಸಮಾರಂಭ ನಡೆಯಿತು. ಕನ್ಯಾಡಿ ಶ್ರೀ ರಾಮ ಕ್ಷೇತ್ರದಿಂದ ಭವ್ಯ ಮೆರವಣಿಗೆಯಲ್ಲಿ ದಿಗ್ವಿಜಯ ಯಾತ್ರೆಯ ಮೂಲಕ ಮಂಗಳೂರಿಗೆ ಪುರ ಪ್ರವೇಶವಾಗಿ ಎಲ್ಲಾ ಜನಾಂಗದ ಮುಖಂಡರು, ವಿವಿಧ ಪಕ್ಷದ ರಾಜಕೀಯ ನಾಯಕರು ಭಾಗವಹಿಸಿದ್ದರು.
ರಾಮ ಕ್ಷೇತ್ರದಲ್ಲಿ ೯ ಅಂಕೆಗೆ ವಿಶೇಷ ಮಹತ್ವವಾಗಿದ್ದು ಗೋಪುರದ ಎತ್ತರ ೧೨೬ ಅಡಿಗಳು ೧+ ೨+ ೬ ಒಟ್ಟು ೯, ನೆಲದ ಮಟ್ಟದಿಂದ ೧೧೭ ಅಡಿಗಳು, ಭೂ ಮಟ್ಟದಿಂದ ಮೆಟ್ಟಲುಗಳು ೫೪, ಆತ್ಮಾನಂದರ ಪಟ್ಟಾಭಿಷೇಕ ಮಹೋತ್ಸವಕ್ಕೆ ೫೪ ಮಂದಿ ಯತಿವರ್ಯರು, ೫೪ ದಿನಗಳ ಬ್ರಹ್ಮಕಲಶೋತ್ಸವ, ೩೬ ಗರ್ಭಗುಡಿಗಳು. ೭೨, ೩೬, ೧೮ ಅಡಿ ಎತ್ತರದ ರಥಗಳು, ೯ ಶಾಖಾ ಮಠಗಳ ನಿರ್ಮಾಣದ ಉzಶ ಇವರದ್ದು. ಆಗಿದ್ದು ಈಗಿನ ಯತಿವರ್ಯ ಮಹಾಮಂಡಲೇಶ್ವರ ೧೦೦೮ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಈ ಬಗ್ಗೆ ಕ್ರಮ ವಹಿಸಿ ಭಟ್ಕಳದ ಕರಿಕಲ್ ಸಮುದ್ರ ಕಿನಾರೆಯಲ್ಲಿ ಶಾಖಾ ಮಠ, ಉತ್ತರಾಖಂಡ ಹರಿದ್ವಾರ ಗಂಗಾ ನದಿ ಕಿನಾರೆಯಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸಾಧನಾ ಕುಟೀರ, ಉಡುಪಿ ಬಿಲ್ಲಾಡಿಯಲ್ಲಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ, ಭಟ್ಕಳ ಅರಸಕೇರಿ, ಹೊನ್ನಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶಾಖಾ ಮಠದ ನಿರ್ಮಾಣ ಕಾರ್ಯ ಪ್ರಾರಂಭ ಆಗಿದೆ. ತಿರುಪತಿ, ಶಬರಿಮಲೆ ಕಡೆ ಮಠಗಳ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ.









