







ಉಜಿರೆ : ಅಭ್ಯಾಸ್ ಪಿ.ಯು ಕಾಲೇಜಿನ ಸಭಾಂಗಣದಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ಕಾಯ್ದೆ – *POCSO Act, 2012* ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭ್ಯಾಸ್ ಪಿ.ಯು ಕಾಲೇಜಿನ ಅಧ್ಯಕ್ಷ ಕಾರ್ತಿಕೇಯ ಎಂ.ಎಸ್ ಅವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರದ್ಧಾ ಶೆಟ್ಟಿ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಮಂಗಳೂರಿನ ತತ್ವಸಿದ್ಧ ಸಂಸ್ಥೆಯ ಸ್ಥಾಪಕಿ ಹಾಗೂ ಹಿರಿಯ ವಕೀಲರಾದ ಶ್ರದ್ಧಾ ಶೆಟ್ಟಿ ಅವರು, POCSO ಕಾಯ್ದೆಯ ಮಹತ್ವವನ್ನು ವಿವರಿಸಿದರು. “18 ವರ್ಷದೊಳಗಿನ ಪ್ರತಿಯೊಬ್ಬ ಮಗು POCSO ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ. ಮಗುವಿನ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ, ಕಿರುಕುಳ ಅಥವಾ ಅಶ್ಲೀಲ ಚಿತ್ರಣವು ಗಂಭೀರ ಅಪರಾಧ. ಈ ಕಾಯ್ದೆಯಡಿ ಕಠಿಣ ಶಿಕ್ಷೆಗಳಿವೆ. ‘Good Touch, Bad Touch’ ಬಗ್ಗೆ ಅರಿವು ಮೂಡಿಸಿಕೊಂಡು, ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಇರಬೇಕು” ಎಂದು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು.


ಕಾರ್ಯಕ್ರಮದ ಅಧ್ಯಕ್ಷರಾದ ಕಾರ್ತಿಕೇಯ ಎಂ.ಎಸ್ ಅವರು ಮಾತನಾಡಿ, “ಮಕ್ಕಳ ಸುರಕ್ಷತೆ ಎಂಬುದು ಶಾಲೆ, ಮನೆ ಮತ್ತು ಸಮಾಜದ ಜಂಟಿ ಜವಾಬ್ದಾರಿ. ನಿಮ್ಮ ದೇಹ, ನಿಮ್ಮ ಮಿತಿ ಬಗ್ಗೆ ಅರಿವು ಇರಬೇಕು. ಯಾವುದೇ ರೀತಿಯ ಅನುಮಾನ ಅಥವಾ ಭಯವಿದ್ದರೆ ಶಿಕ್ಷಕರು, ಪೋಷಕರು ಅಥವಾ ಪೊಲೀಸರ ಬಳಿ ನಿರ್ಭಯವಾಗಿ ಹೇಳಬೇಕು. ಮೌನವಾಗಿರುವುದೇ ದೊಡ್ಡ ಅಪಾಯ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಭ್ಯಾಸ್ ಸಂಸ್ಥೆಯ ಕಾರ್ಯದರ್ಶಿ ಶಿಲ್ಪಾ ಆರ್ ಮತ್ತು ಆಡಳಿತ ಅಧಿಕಾರಿ ಪ್ರಮೋದ್ ಗೌಡ ಹಾಗೂ ಪ್ರಾಂಶುಪಾಲರಾದ ದೀಪಕ್ ಕೆ. ಎಸ್ , ಪಿ. ಆರ್.ಒ ಆದ ಧನಂಜಯ ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ಸಹಾಯಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾದ ಸುಧೀರ್ ನಿರೂಪಿಸಿದರು. ಹಿಂದಿ ವಿಭಾಗದ ಉಪನ್ಯಾಸಕಿ ಜೋಸೆಫಿನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸ್ವಸ್ತಿ ಹೆಬ್ಬಾರ್ ಪ್ರಾರ್ಥನೆಗೈದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಚೆನ್ನಬಸವ ವಂದನಾರ್ಪಣೆ ಮಾಡಿದರು.









