ಇಡೀ ದೇಶದಲ್ಲಿ ರಶೀದಿ ನೀಡದೆ ದೇಣಿಗೆ ಸಂಗ್ರಹಿಸುವ ಏಕೈಕ ಸಂಸ್ಥೆ ಆರ್‌ಎಸ್‌ಎಸ್: ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪ

0

ಬೆಳ್ತಂಗಡಿ: ಇಂದು ಇಡೀ ಭಾರತ ದೇಶದಲ್ಲಿ ನೊಂದಾವಣೆಯಾಗದ ಯಾವುದಾದರೂ ಒಂದು ದೊಡ್ಡ ಸಂಸ್ಥೆ ಇದೆ ಎಂದಾದರೆ ಅದು ಆರ್.ಎಸ್.ಎಸ್. ಮಾತ್ರ. ಆರ್.ಎಸ್.ಎಸ್. ಒಂದು ಎಡ್ರಸ್ ಇಲ್ಲದ ಸಂಸ್ಥೆಯಾಗಿದೆ. ಇಂದು ಇಡೀ ದೇಶದಲ್ಲಿ ರಶೀದಿ ನೀಡದೆ ದೇಣಿಗೆಯನ್ನು ಸಂಗ್ರಹಿಸುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ಆರ್.ಎಸ್.ಎಸ್. ಇಡೀ ದೇಶದಲ್ಲಿ ತಾವು ಸಂಗ್ರಹಿಸಿದ ದೇಣಿಗೆ ಹಣಕ್ಕೆ ಲೆಕ್ಕಾಚಾರವನ್ನು ನೀಡದ ಸಂಘಟನೆಯೆಂದರೆ ಅದು ಆರ್.ಎಸ್.ಎಸ್. ಮಾತ್ರ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಅಮಳ ರಾಮಚಂದ್ರ ಹೇಳಿದರು. ಅವರು ಜೂ.೨೯ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದರು.

ಕೋಟಿ ಕೋಟಿ ರೂಪಾಯಿ ದೇಣಿಗೆಗಳಿಗೆ ಯಾವುದೇ ರೀತಿಯ ಲೆಕ್ಕ ಪತ್ರ ಪ್ರದರ್ಶಿಸಲಿಲ್ಲ: ನೂರು ವರ್ಷಗಳ ಹಿಂದೆ ಸ್ಥಾಪನೆಯಾದ ಆರ್.ಎಸ್.ಎಸ್. ಪ್ರತಿ ವರ್ಷ ಗುರು ಕಾಣಿಕೆಯ ಹೆಸರಿನಲ್ಲಿ ಜನರಿಂದ ಕಾನೂನಿನ ಮಾನ್ಯತೆಯಿಲ್ಲದೆ ಸಂಗ್ರಹಿಸುತ್ತಿರುವ ಕೋಟಿ ಕೋಟಿ ರೂಪಾಯಿ ದೇಣಿಗೆಗಳಿಗೆ ಯಾವುದೇ ರೀತಿಯ ಲೆಕ್ಕಪತ್ರವನ್ನಾಗಲಿ ಪಾರದರ್ಶಕತೆಯನ್ನಾಗಲಿ ಪ್ರದರ್ಶಿಸದೇ ಪ್ರಶ್ನಿಸಿದವನನ್ನೇ ನನ್ನನ್ನು ಪ್ರಶ್ನಿಸುವುದಕ್ಕೆ ನೀನು ಯಾರು’ ಎಂದು ಕೇಳುತ್ತಿದೆ. ಆರ್.ಎಸ್.ಎಸ್. ಎಂದಿಗೂ ಟೀಕೆಗಳನ್ನು ಸಹಿಸಿದ ಇತಿಹಾಸವೇ ಇಲ್ಲ. ಅವರ ಕಾರ್ಯವೈಖರಿ, ಸಿದ್ಧಾಂತ, ಭಾರತದ ಸಂವಿಧಾನ ಮತ್ತು ಕಾನೂನಿನ ಮೇಲಿನ ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸಬಾರದು ಎಂಬುದೇ ಅವರ ಮನೋಧರ್ಮ. ಹೀಗೊಂದು ಸರ್ವಾಧಿಕಾರೀ ಮನೋಭಾವನೆಯನ್ನೇ ರೂಢಿಸಿಕೊಂಡು ಬಂದ ಸಂಘದ ಒಳಗೂ ಪ್ರಜಾಪ್ರಭುತ್ವ ಇಲ್ಲ. ಹೊರಗೂ ಅದು ಪ್ರಜಾಪ್ರಭುತ್ವವನ್ನು ಸಹಿಸುವುದಿಲ್ಲ.

ಅವರನ್ನು ಯಾರಾದರೂ ಟೀಕಿಸಿದರೆ, ಆಕ್ಷೇಪಿಸಿದರೆ, ಅವರ ದೋಷಗಳನ್ನು ಬೊಟ್ಟು ಮಾಡಿದರೆ ಆರ್.ಎಸ್.ಎಸ್. ಮತ್ತು ಅದರ ಇಡೀ ಪರಿವಾರ ಅವರ ಮೇಲೆ ಮುಗಿಬಿದ್ದು ದೇಶದ್ರೋಹಿ, ಧರ್ಮದ್ರೋಹಿ ಎಂಬ ಪಟ್ಟ ಕಟ್ಟಿ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತದೆ ಎಂದು ಹೇಳಿದ ಅಮಳ ರಾಮಚಂದ್ರ ಅವರು ಕರ್ನಾಟಕ ಸರಕಾರದ ಗೃಹ ಸಚಿವರಾದ ಪ್ರಿಯಾಂಕಾ ಖರ್ಗೆಯವರು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತರಿಗೆ ಆರ್.ಎಸ್.ಎಸ್.ನ ನೋಂದಾವಣೆಯ ಕುರಿತು ಬರೆದ ಪತ್ರ ಮತ್ತು ಆ ಪತ್ರಕ್ಕೆ ಆರ್.ಎಸ್.ಎಸ್.ನ ಜನ ನೀಡಿದ ಪ್ರತಿಕ್ರಿಯೆ ಅವರ ಈ ಎಲ್ಲ ಕೊಳಕುಗಳನ್ನು ಅನಾವರಣಗೊಳಿಸಿದೆ ಎಂದು ಹೇಳಿದರು. ಪ್ರಶ್ನೆಗೆ ಉತ್ತರಿಸುತ್ತಿಲ್ಲ: ಪ್ರಿಯಾಂಕ್ ಖರ್ಗೆಯವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿಯವರು ಪ್ರಧಾನವಾಗಿ ಎರಡು ವಿಚಾರಗಳನ್ನು ಎತ್ತಿದ್ದಾರೆ.ಆರ್.ಎಸ್.ಎಸ್.ಗೆ ಸವಾಲು ಹಾಕಿದವರು ಯಾರು ಬದುಕಿಲ್ಲ’ ಎಂದು ಹೇಳುವ ಮೂಲಕ ಖರ್ಗೆಯವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ದಲಿತರಿಗೆ ಏಕೆ ಆರ್.ಎಸ್.ಎಸ್. ಕಾಳಜಿ ಎಂದು ಕೇಳುವುದರ ಮೂಲಕ ದಲಿತರಿಗೂ ಆರ್.ಎಸ್.ಎಸ್.ಗೂ ಸಂಬಂಧವಿಲ್ಲ. ದಲಿತರು ಯಾರನ್ನೂ ಪ್ರಶ್ನಿಸುವ ಅಧಿಕಾರವಿಲ್ಲದವರು ಎಂಬ ದಲಿತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ.

ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ರಾಜಕೀಯ ಗಿಮಿಕ್ ಎಂದು ಹೇಳಿಕೆ ನೀಡಿರುವ ವಿಜಯೇಂದ್ರ ಅವರ ಮಾತು, ಖರ್ಗೆಗೆ ಆರ್‌ಎಸ್‌ಎಸ್ ಫೋಬಿಯ ಇದೆ, ಖರ್ಗೆಯವರು ಜೆಹಾದಿ ಮಾನಸಿಕತೆಯ ಬೆಂಬಲಿಗರು ಎಂದು ಹೇಳಿರುವ ಸಿ.ಟಿ. ರವಿಯವರ ಮಾತು ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮಾತು ಎಲ್ಲಿಯೂ ಖರ್ಗೆಯವರು ಎತ್ತಿದ್ದ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಬದಲಿಗೆ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಾಗದ ಪಲಾಯನವಾದ, ನಮ್ಮನ್ನು ಪ್ರಶ್ನಿಸಲು ನೀನು ಯಾರು’, ನಾವು ಪ್ರಶ್ನಾತೀತರು ಎಂಬ ಸರ್ವಾಧಿಕಾರಿ ಧೋರಣೆ ಅವರ ಮಾತುಗಳಲ್ಲಿ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪದೆ, ಜನರ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡು ಅವರನ್ನು ಗುಲಾಮಗಿರಿಗೆ ತಳ್ಳುವ ಮನೋಭಾವನೆ ಇವರ ಮಾತುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು. ಆರ್.ಎಸ್.ಎಸ್.ಗೆ ವಿಳಾಸ ಇಲ್ಲ: ೧೦೦ ವರ್ಷಗಳ ಹಿಂದೆ ಅದು ಸ್ಥಾಪನೆಯಾದ ನಂತರ ಇಂದಿನವರೆಗೆ ಆರ್‌ಎಸ್‌ಎಸ್‌ಗೆ ಸರಿಯಾದ ವಿಳಾಸವೇ ಇಲ್ಲ.

ಬೇರೆ ಯಾರದೋ ಹೆಸರಿನಲ್ಲಿರುವ ಕಟ್ಟಡಗಳ ಒಳಗೆ ಪರಾವಲಂಬಿಯಾಗಿ ಕಚೇರಿ ನಡೆಸುತ್ತಿರುವ ಇವರ ಮಹರಾಷ್ಟ್ರದ ನಾಗಪುರದಲ್ಲಿರುವ ಆರ್.ಎಸ್.ಎಸ್.ನ ಕೇಂದ್ರ ಕಚೇರಿ ಕೂಡಾ ಅದರ ಹೆಸರಿನಲ್ಲಿ ಇಲ್ಲ. ಕಾರ್ಯಕ್ರಮಗಳನ್ನು ನಡೆಸುವಾಗ, ಪಥ ಸಂಚಲನ ಮಾಡುವಾಗ ಬೇರೆ ಯಾರದೋ ಹೆಸರಿನಲ್ಲಿ ಅನುಮತಿ ಪಡೆಯುವ, ತಮ್ಮವರು ಅಪರಾಧ ಕೃತ್ಯ ಎಸಗಿದಾಗ, ಆತ ತಮ್ಮವನೇ ಅಲ್ಲ ಎಂದು ನುಣುಚಿಕೊಳ್ಳುವ ವಂಚನೆಯ ಎಲ್ಲಾ ಕಲೆಗಳನ್ನು ಆರ್.ಎಸ್.ಎಸ್. ಕರಗತ ಮಾಡಿಕೊಂಡಿದೆ. ನೊಂದಣಿಯಾಗದ ಆರ್.ಎಸ್.ಎಸ್. ಒಂದು ಬೇನಾಮೀ ಸಂಸ್ಥೆಯಾಗಿದ್ದು ಒಂದು ಭೂಗತ ಸಂಸ್ಥೆಯಂತೆ ಕಾರ್ಯಾಚರಿಸುತ್ತಿದೆ ಎಂದು ಅವರು ಆರೋಪಿಸಿದರು. ತಾವೊಂದು ಬಾಡಿ ಆಫ್ ಇಂಡಿವಿಜುಯಲ್ಸ್. ಬಯಲಿನಲ್ಲಿ ನಿಂತು ನಾವು ವ್ಯವಹರಿಸುತ್ತೇವೆ. ನಮ್ಮ ಶಾಖೆಗಳಲ್ಲಿ ದೇಶಭಕ್ತಿಯನ್ನು ಕಲಿಸುತ್ತೇವೆ. ನಾವು ವ್ಯಕ್ತಿ ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಆರ್.ಎಸ್.ಎಸ್. ಎಂತೆಂತಹ ದೇಶಭಕ್ತರನ್ನು ನಿರ್ಮಾಣ ಮಾಡಿದೆ, ಎಂತೆಂತಹ ವ್ಯಕ್ತಿತ್ವಗಳನ್ನು ಸೃಷ್ಟಿ ಮಾಡಿದೆ ಎಂಬುದಕ್ಕೆ ಇತ್ತೀಚೆಗೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ಭಕ್ತರ ಕಾಣಿಕೆಯ ಕೋಟ್ಯಂತರ ರೂಪಾಯಿಗಳನ್ನು ನುಂಗಿ ನೀರು ಕುಡಿದ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ.

೧೯೮೦ರಲ್ಲಿ ಆರ್.ಎಸ್.ಎಸ್. ನಡೆಸಿದ ರಾಮ ಶಿಲಾ ಅಭಿಯಾನದಲ್ಲಿ ಸಂಗ್ರಹಿಸಿದ ಎಂಟು ಕೋಟಿ ರೂಪಾಯಿಗಳಿಗೂ ಅಧಿಕ ಹಣದಿಂದ ತೊಡಗಿ ಪ್ರಾಣ ಪ್ರತಿಷ್ಠೆ ನಡೆದ ನಂತರ ಇಂದಿನವರೆಗೆ ಕಾಣಿಕೆಯಾಗಿ ಬಂದ ಕೋಟ್ಯಂತರ ರೂಪಾಯಿ ಹಣವನ್ನು ಇದೇ ಆರ್.ಎಸ್.ಎಸ್‌ನ ಗರಡಿಯಲ್ಲಿ ಬೆಳೆದ ನಾಯಕರು ಲೂಟಿ ಹೊಡೆದಿದ್ದಾರೆಂದರೆ ಇವರನ್ನು ತಯಾರು ಮಾಡಿದ ಆರ್.ಎಸ್.ಎಸ್.ನ ನೈತಿಕತೆ ಏನು ಅನ್ನುವುದು ಅರ್ಥವಾಗುತ್ತದೆ. ೨೦೨೦ರಲ್ಲಿನಾ ಖಾವೂಂಗಾ ನಾ ಖಾನೇ ದೂಂಗ’ ಎಂದು ಘೋಷಿಸಿಕೊಂಡ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಂದ ಸ್ಥಾಪಿತವಾದ ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಅಧ್ಯಕ್ಷರು ಮಹಾಂತ ನೃತ್ಯ ಗೋಪಾಲ ದಾಸ್ ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್ತಿನ ಬಹಳ ದೊಡ್ಡ ನಾಯಕರು. ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅನೇಕ ವರ್ಷದ ಕಾಲ ಆರ್.ಎಸ್.ಎಸ್. ಪ್ರಚಾರಕರಾಗಿ ಕೆಲಸ ಮಾಡಿದ ಪ್ರಭಾವೀ ನಾಯಕರು, ಟ್ರಸ್ಟ್ ಎಲ್ಲಾ ನಡವಳಿಕೆಯ ನೀತಿ ನಿರ್ಧಾರಕರು.

ಇದರ ಜೊತೆಗೆ ಟ್ರಸ್ಟಿನ ಸದಸ್ಯರೆಲ್ಲರೂ ಆರ್.ಎಸ್.ಎಸ್.ನಾಯಕರು ಅಥವಾ ಅದರ ಪರಿವಾರದ ನಾಯಕರು. ಇವರೆಲ್ಲರೂ ಇದ್ದು ಒಂದು ದೇವಾಲಯವನ್ನು ವ್ಯವಸ್ಥಿತವಾಗಿ ಮತ್ತು ಪ್ರಾಮಾಣಿಕವಾಗಿ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಾದರೆ ಮತ್ತು ದೇವಾಲಯಕ್ಕೆ ಕಾಣಿಕೆಯಾಗಿ ಬಂದ ಚಿನ್ನದ ಮೂರ್ತಿ, ಬೆಳ್ಳಿಯ ಇಟ್ಟಿಗೆಗಳು ಮತ್ತು ಕೋಟ್ಯಾಂತರ ರೂಪಾಯಿ ಹಣವನ್ನು ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಲೂಟಿ ಹೊಡೆಯಲಾಗಿದೆ ಎಂದಾದರೆ ಇವರನ್ನು ಸೃಷ್ಟಿ ಮಾಡಿದ ಆರ್.ಎಸ್.ಎಸ್. ಇವರಿಗೆ ಕಲಿಸಿದ ದೇಶಭಕ್ತಿ ಯಾವ ರೀತಿಯದ್ದು, ಆರ್.ಎಸ್.ಎಸ್. ಇವರಲ್ಲಿ ನಿರ್ಮಾಣ ಮಾಡಿದ ವ್ಯಕ್ತಿತ್ವ ಎಂತಹದ್ದು ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ನವೀನ್ ಮತ್ತು ಅಳದಂಗಡಿ ಸಿ.ಎ., ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಸಾಧ್ಯವಾಗದ ಮಂತ್ರಿಗಳು: ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಭಾರತೀಯರನ್ನು ಸತತವಾಗಿ ಅವಮಾನಿಸಿದಾಗಲೂ ಬಾಯಿ ಮುಚ್ಚಿ `ನನ್ನ ಗೆಳೆಯ’ ಎಂದು ಹಪಹಪಿಸುವ ನಾಯಕರು, ಒಂದು ನೀಟ್ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಸಾಧ್ಯವಾಗದ ಮಂತ್ರಿಗಳು, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿ ಅವರ ಕ್ರೀಡಾ ಬದುಕನ್ನು ನಾಶಪಡಿಸಿದ ವ್ಯಕ್ತಿಗಳು, ಬೆದರಿಕೆ ಮತ್ತು ಹಣದ ಆಮಿಷದ ಮೂಲಕ ವಿರೋಧ ಪಕ್ಷವನ್ನು ವಶಪಡಿಸಿಕೊಂಡು ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿರುವ ನಾಯಕರು, ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಅಕ್ರಮವಾಗಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ಇಡೀ ವ್ಯವಸ್ಥೆಯನ್ನು ನಾಶ ಮಾಡುತ್ತಿರುವವರು, ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು, ದೇಶದ ಸೌಹಾರ್ದತೆಯನ್ನು ಕದಡಿ ಹಿಂದೂಗಳನ್ನು ಮುಸಲ್ಮಾನರ ಮೇಲೆ ಮುಸಲ್ಮಾನರನ್ನು ಹಿಂದುಗಳ ಮೇಲೆ ಛೂ ಬಿಟ್ಟು ಮತ ದ್ರುವೀಕರಣ ಮಾಡುವವರು, ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಅತ್ತಕಡೆ ಕಣ್ಣೆತ್ತಿಯೂ ನೋಡದವರು, ಇವರ ಆಡಳಿತವನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳೆಂದು ಬಿಂಬಿಸುವವರು, ಇವರೆಲ್ಲರೂ ಆರ್.ಎಸ್.ಎಸ್.ಸ ನೂರು ವರ್ಷಗಳ ಕಾಲ ಬೆವರು ಹರಿಸಿ ನಿರ್ಮಿಸಿದ ವ್ಯಕ್ತಿತ್ವಗಳು ಎಂದಾದರೆ ಇವರದ್ದು ಎಂಥ ದೇಶಪ್ರೇಮ ಎಂದು ಅಮಳ ರಾಮಚಂದ್ರ ಹೇಳಿದರು.

ಜನರಿಂದ ಕೋಟಿ ಕೋಟಿ ರೂಪಾಯಿ ಬಾಚುವ ಗುರುದಕ್ಷಿಣೆಗೆ ರಶೀದಿ ಇಲ್ಲ: ಆರ್.ಎಸ್.ಎಸ್. ಪ್ರಚಾರಕರು ಮದುವೆಯಾಗುವುದಿಲ್ಲ. ಅವರಿಗೆ ಸ್ವಂತ ಮನೆ ಆಸ್ತಿ ಎಂಬುದೂ ಇಲ್ಲ. ಸ್ವಂತ ಉದ್ಯೋಗವೂ ಇಲ್ಲ. ವರಮಾನವೂ ಇಲ್ಲ. ಕುಟುಂಬವೂ ಇಲ್ಲ. ಹೀಗಿದ್ದರೂ ಈ ಪ್ರಚಾರಕರು ಐಷಾರಾಮಿ ಜೀವನವನ್ನು ಹೇಗೆ ನಡೆಸುತ್ತಾರೆ. ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಾ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡು ಭೋಗದ ಜೀವನ ನಡೆಸುವ ಇವರ ಆದಾಯದ ಮೂಲ ಯಾವುದು? ಜನರಿಂದ ಕೋಟಿ ಕೋಟಿ ರೂಪಾಯಿ ಬಾಚುವ ಗುರುದಕ್ಷಿಣೆಗೆ ರಶೀದಿಯೂ ಇಲ್ಲ. ಲೆಕ್ಕಪತ್ರವೂ ಇಲ್ಲ. ಪಾರದರ್ಶಕತೆಯೂ ಇಲ್ಲ. ಎಲ್ಲವೂ ನಿಗೂಢ. ಒಟ್ಟಿನಲ್ಲಿ ಹಣ-ಅಧಿಕಾರ-ಸ್ವೇಚ್ಛಾಚಾರ. ಇದೇ ಇವರ ಪರಮ ವೈಭವದ ಸ್ಥಿತಿ ಎಂದು ಅಮಳ ರಾಮಚಂದ್ರ ಹೇಳಿದರು.

LEAVE A REPLY

Please enter your comment!
Please enter your name here