






ಉಜಿರೆ :ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ.30 ರಂದು ಜರಗಿತು.
ಮುಖ್ಯ ಅತಿಥಿ, ಬೆಳ್ತಂಗಡಿಯ ವಕೀಲ ಕೃಷ್ಣ ಶೆಣೈ, ವಿವಿಧ ಸಂಘಗಳನ್ನು ನವಿಲು ಗರಿ ಅರಳಿಸಿ ಪೆಟ್ಟಿಗೆ ಒಳಗಿನ ತಾವರೆಯನ್ನು ಅರಳಿಸುವ ಮೂಲಕ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ನಾನು ಈ ಶಾಲೆಯ ಹಳೆ ವಿದ್ಯಾರ್ಥಿ. ಇಲ್ಲಿ ಕಲಿತ ಮೌಲ್ಯಗಳು ನನ್ನ ಜೀವನದಲ್ಲಿ ಕೈ ಹಿಡಿದವು. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಿ. ನಿಮ್ಮ ಜೀವನದಲ್ಲಿ ಅಳವಡಿಸಿ. ನಾಯಕತ್ವ ಗುಣವನ್ನು ರೂಢಿಸಿಕೊಳ್ಳಿ” ಎಂದರು.


ಉಜಿರೆ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಮಾತನಾಡಿ, ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕಠಿಣ ಶ್ರಮ ಪ್ರಯತ್ನ ಮತ್ತು ಒಳ್ಳೆಯ ಸಂಸ್ಕಾರಯುತ ಜೀವನವನ್ನು ರೂಢಿಸಿಕೊಳ್ಳಿ ಮತ್ತು ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾ ಕಿರಣ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವಿವಿಧ ಸಂಘಗಳ ವರದಿಗಳನ್ನು ವಿದ್ಯಾರ್ಥಿಗಳು ವಾಚಿಸಿದರು.ವಿದ್ಯಾರ್ಥಿ ಸರಕಾರದ ಪ್ರಮಾಣವಚನ ನೆರವೇರಿತು. ಅಣಕು ಸಂಸತ್ ಕಲಾಪ ನಡೆಯಿತು.ರತ್ನ ಮಾನಸದ ಉಪ ನಿಲಯ ಪಾಲಕ ರವಿಚಂದ್ರ, ಯಕ್ಷಗಾನ ತರಬೇತುದಾರ ಲಕ್ಷ್ಮಣಗೌಡ, ಕಲಾ ಕೇಂದ್ರದ ನಿರ್ದೇಶಕ ಯಶವಂತ್, ಸಂಗೀತ ಶಿಕ್ಷಕಿ ಶ್ರೀದೇವಿ, ಶಾಲಾ ನಾಯಕಿ ರಂಸೀನ ಬಾನು, ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕನಕಶ್ರೀ ಸ್ವಾಗತಿಸಿ, ಅನನ್ಯ ವಂದಿಸಿ, ನಿಶಾನ್ಯ ಮತ್ತು ಅಮೂಲ್ಯ ಭಾಗ್ಯಶ್ರೀ ನಿರೂಪಿಸಿದರು.









