ಕನ್ನಡ ಪ್ರಭ ಸಂಪಾದಕರಾಗಿ ಜೋಗಿ

0

ಬೆಳ್ತಂಗಡಿ: ಭಾರತದ ಅತ್ಯಂತ ದೊಡ್ಡ ಪತ್ರಿಕಾ ಸಮೂಹವನ್ನು ನಿರ್ವಹಿಸುತ್ತಿರುವ ಇಂಡಿಯನ್ ಎಕ್ಸ್‌ಪ್ರೆಸ್ ಸಂಸ್ಥೆಯ ಅಂಗವಾದ ಕನ್ನಡ ಪ್ರಭ ದಿನ ಪತ್ರಿಕೆಯ ಸಂಪಾದಕರಾಗಿ ಜೋಗಿ ಎಂದೇ ಖ್ಯಾತರಾಗಿರುವ ಪ್ರಸಿದ್ಧ ಸಾಹಿತಿ, ಬರಹಗಾರ, ವಿಮರ್ಶಕ, ಅಂಕಣಕಾರರಾಗಿರುವ ಹಿರಿಯ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ನೇಮಕಗೊಂಡಿದ್ದಾರೆ.

ಮೂಲತಃ ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಅವರು ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಯಲ್ಲಿ. 18ನೇ ವಯಸ್ಸಿಗೆ ಬರಹ ಆರಂಭಿಸಿದ್ದ ಜೋಗಿ ಬಿ.ಕಾಂ. ಪದವೀಧರರು. ಬೆಂಗಳೂರಿಗೆ 1989ರಲ್ಲಿ ಕಾಲಿಟ್ಟ ಗಿರೀಶ್ ರಾವ್ ಅವರು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಸಾರಥ್ಯದ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ಓದುಗರಿಗೆ ಪರಿಚಿತರಾದವರು.

ಕನ್ನಡಪ್ರಭ ಪತ್ರಿಕೆಗೆ `ಬಾಲಿವುಡ್ ಗಾಸಿಪ್’ ಎಂಬ ಅಂಕಣ ಬರೆಯುತ್ತಿದ್ದ ಜೋಗಿ ಅವರ `ಹಾಯ್ ಬೆಂಗಳೂರು’ ಪತ್ರಿಕೆಯ ರವಿ ಕಾಣದ್ದು ಅಂಕಣ ಹೆಸರುವಾಸಿಯಾಗಿತ್ತು. ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಜೋಗಿ ಅವರು `ಅಚ್ಚರಿ’ ಮಾಸ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಚಲನಚಿತ್ರ, ಪುಸ್ತಕಗಳ ವಿಮರ್ಶೆಗಳಿಂದ ಗಮನ ಸೆಳೆದ ಜೋಗಿ ಜೊತೆಗೆ ಕಥೆಗಾರನಾಗಿಯೂ ಹೊರ ಹೊಮ್ಮಿದವರು.

ಕ್ರಮೇಣ ಕಾದಂಬರಿಗಳ ರಚನೆಯಲ್ಲೂ ತೊಡಗಿಸಿಕೊಂಡರು. ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೆ ಜೋಗಿ ಕಿರುತೆರೆ ಧಾರಾವಾಹಿಗಳಿಗೆ ಸಂಭಾಷಣೆ, ಶೀರ್ಷಿಕೆ ಗೀತೆಗಳನ್ನು ಕೂಡಾ ಬರೆದಿದ್ದಾರೆ. ಇವರದ್ದೇ ಕಥೆ `ಕಾಡ ಬೆಳದಿಂಗಳು’ ಚಲನಚಿತ್ರವಾಗಿದ್ದು ಈ ಕಥೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯೂ ಲಭಿಸಿದೆ. ಪತ್ರಿಕೋದ್ಯಮದ ಸಾಧನೆಗಾಗಿ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ.`ನದಿಯ ನೆನಪಿನ ಹಂಗು’, ಯಾಮಿನಿ, ಚಿಟ್ಟೆ ಹೆಜ್ಜೆ ಜಾಡು, ಹಿಟ್ ವಿಕೆಟ್, ಊರ್ಮಿಳಾ, ಮಾಯಾ ಕಿನ್ನರಿ, ಗುರುವಾಯನಕೆರೆ, ದೇವರ ಹುಚ್ಚು, ಚಿಕ್ಕಪ್ಪ, ಸಲಾಂ ಬೆಂಗಳೂರು ಸೇರಿದಂತೆ ಹಲವು ಕಾದಂಬರಿಗಳನ್ನು ಇವರು ಬರೆದಿದ್ದಾರೆ. ಸೀಳು ನಾಲಿಗೆ, ಜೋಗಿ ಕತೆಗಳು, ಕಾಡು ಹಾದಿಯ ಕತೆಗಳು, ರಾಯಭಾಗದ ರಹಸ್ಯ ರಾತ್ರಿ, ಜರಾಸಂಧ, ಸೂಫಿ ಕಥೆಗಳು, ನಾಳೆ ಮುಂತಾದವು ಇವರ ಕಥಾ ಸಂಕಲನಗಳಾಗಿವೆ. ಬಾಲಿವುಡ್ ಗಾಸಿಪ್, ರವಿ ಕಾಣದ್ದು, ಜಾನಕಿ ಕಾಲಂ- ೧, ಜಾನಕಿ ಕಾಲಂ- ೨, ಜೋಗಿ ಮನೆ, ಜೋಗಿ ಕಾಲಂ, ಸೀಕ್ರೇಟ್ ಡೈರಿ, ಮಹಾನಗರ ಮುಂತಾದವುಗಳು ಇವರ ಅಂಕಣ ಸಾಹಿತ್ಯಗಳಾಗಿವೆ. ಕಥೆಗಾರ, ಕಾದಂಬರಿಗಾರ, ಅಂಕಣ, ವಿಮರ್ಶೆ, ಸಾಹಿತ್ಯಗಾರನಾಗಿ ಗುರುತಿಸಿಕೊಂಡಿರುವ ಜೋಗಿ ಮಾತುಗಾರಿಕೆಯ ಕಲೆಯನ್ನೂ ಮೈಗೂಡಿಸಿಕೊಂಡವರು.

ಪ್ರಸ್ತುತ ಕನ್ನಡ ಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾಗಿದ್ದ ಜೋಗಿ ಇದುವರೆಗೆ 108 ಪುಸ್ತಕಗಳನ್ನು ಬರೆದಿದ್ದಾರೆ. ಹಿರಿಯ ಪತ್ರಕರ್ತ ವೈ.ಎನ್ಕೆ. ಅವರ ಶಿಷ್ಯರಾದ ಜೋಗಿ ಇದೀಗ ಕನ್ನಡಪ್ರಭದ ಸಂಪಾದಕರಾಗಿ ಮುಂಬಡ್ತಿ ಪಡೆದಿದ್ದಾರೆ. ಶ್ರೀಧರ ರಾವ್ ಮತ್ತು ಶಾರದಾ ರಾವ್ ದಂಪತಿಯ ಪುತ್ರರಾದ ಜೋಗಿ ಅವರು ಪತ್ನಿ ಜ್ಯೋತಿ ಮತ್ತು ಪುತ್ರಿ ಖುಷಿ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ಹಿತೈಷಿಯಾಗಿರುವ ಜೋಗಿ ಅವರು ಸುದ್ದಿ ಬಿಡುಗಡೆಯ 2024ರ ವಿಶೇಷಾಂಕಕ್ಕೆ ಅತ್ಯುತ್ತಮ ಕಥೆ ಬರೆದು ಪ್ರೋತ್ಸಾಹಿಸಿದ್ದರು.

LEAVE A REPLY

Please enter your comment!
Please enter your name here