ಶಿಕ್ಷಕರೇ ಅಪ್ಡೇಟ್ ಆಗಿ ಇಲ್ಲದಿದ್ದರೆ ಔಟ್ಡೇಟ್ ಆಗುತ್ತೀರಿ : ರಘುರಾಜ್ ಉಬರಡ್ಕ

0

ಪುತ್ತೂರು: ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕಾಲಕಾಲಕ್ಕೆ ಅಪ್ಡೇಟ್ ಆಗದಿದ್ದರೆ ಔಟ್ಡೇಟ್ ಆಗಬೇಕಾಗುತ್ತದೆ. ಕನ್ನಡ ಮಾಧ್ಯಮ ಆಂಗ್ಲ ಮಾಧ್ಯಮ ಎನ್ನುವ ಟ್ರೆಂಡ್ ಅಂತ್ಯವಾಗಿ ಸರಕಾರಿ ಖಾಸಗಿ ಶಾಲೆ ಎನ್ನುವ ಹೊಸ ಅಧ್ಯಾಯ ಆರಂಭಗೊಂಡಿದೆ. ದಶಕಗಳ ಹಿಂದೆ ಶಾಲೆಯಲ್ಲಿರುವ ಶಿಕ್ಷಕರನ್ನು ನೋಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರ ಪದ್ಧತಿಯಿದ್ದು ಮತ್ತೆ ಅದೇ ವ್ಯವಸ್ಥೆ ಪುನರಾವರ್ತನೆಗೊಳ್ಳುತ್ತಿದೆ. ಅಜ್ಜ ನೆಟ್ಟ ಆಲದ ಮರಕ್ಕೆ ಜ್ಯೋತಿ ಬೀಳದೆ ಬದಲಾದ ವ್ಯವಸ್ಥೆಯನ್ನು ಒಪ್ಪಿಕೊಂಡು, ಶಿಕ್ಷಕರಾದವರು ಕಾರ್ಯಗಾರಗಳ ಮೂಲಕ ಸಿಗುವ ಅನುಭವಗಳನ್ನು ತರಗತಿ ಕೊಠಡಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ರಘುರಾಜ್ ಉಬರಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂ. 25 ರಂದು ನಡೆದ ಸಮಾಜ ವಿಜ್ಞಾನ ಶಿಕ್ಷಕರ ಪುನಶ್ಚೇತನ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಸುಳ್ಯ ಸ. ಪ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಒತ್ತಡದ ಜೊತೆಗೆ ಬದಲಾವಣೆಯ ಕಾರ್ಯಗಳು ಕಾಲಕಾಲಕ್ಕೆ ಆಗುತ್ತಿದ್ದು ಶಿಕ್ಷಕರುಗಳು ತಮ್ಮ ವಿದ್ಯಾರ್ಥಿಗಳನ್ನು ಸಮಾಜಮುಖಿ ಬೆಳವಣಿಗೆಗಳಲ್ಲಿ ಗಟ್ಟಿ ಮಾಡಿಕೊಂಡಾಗ ಮಾತ್ರ ಸಮಾಜ ಭದ್ರವಾಗಲು ಸಾಧ್ಯ ಎಂದರು. ತರಬೇತಿಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ಪಡೆದ ಜ್ಞಾನ ತರಗತಿಯ ವಿದ್ಯಾರ್ಥಿಗಳಿಗೆ ಮುಟ್ಟು ಕಾರ್ಯ ನಿರಂತರವಾಗಲಿ ಎಂದು ಕಿವಿಮಾತು ಹೇಳಿದರು.

ಶಿಕ್ಷಕರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಲತಾ ಶಂಕರಿ ಸ್ವಾಗತಿಸಿದರು. ಸಮಾಜ ವಿಜ್ಞಾನ ವಿಷಯ ವರ್ತುಲ ಸಂಯೋಜಕಿ ಸೌಮ್ಯಕುಮಾರಿ ವಂದಿಸಿದರು. ಗೀತಾ ನಿರೂಪಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸುಳ್ಯ ಸ. ಪ. ಪೂ. ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು ಶಿಕ್ಷಕರಿಗೆ ಗೋಳದ ಪರಿಕಲ್ಪನೆಯನ್ನು ನೀಡುವುದರ ಜೊತೆಗೆ, ಗೋಳದ ವಿನ್ಯಾಸ, ಬಳಕೆ, ಪ್ರಯೋಜನದ ಜೊತೆಗೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಗೋಳದ ಚಟುವಟಿಕೆಯನ್ನು ಮಾಡುವ ಮೂಲಕ ಕಲಿಕಾ ಶಕ್ತಿಯನ್ನು ಮೂಡಿಸುವುದು ಹೇಗೆ ಎಂದು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಬಳಿಕ ನಕಾಶೆ ಪರಿಚಯದೊಂದಿಗೆ ಪ್ರಪಂಚ,ದೇಶ,ರಾಜ್ಯ ,ಜಿಲ್ಲೆಗೆ ಸೀಮಿತವಾಗಿರದೆ ನಕಾಶೆಯಲ್ಲಿ ಬಳಸುವ ಸ್ಕೇಲ್ ಮಾನದಂಡದ ಮೂಲಕ ನಮ್ಮ ಮನೆ ಹಾಗೂ ಶಾಲೆಯ ನಕ್ಷೆ ರಚಿಸುವುದು ಹೇಗೆ ಎನ್ನುವ ಪ್ರಾಯೋಗಿಕ ಜ್ಞಾನವನ್ನು ತಿಳಿಸಿಕೊಟ್ಟರು. ಬದಲಾದ ಶಿಕ್ಷಣ ಪದ್ಧತಿಯಲ್ಲಿ ಮೊಬೈಲ್ ಬಳಕೆಯ ಮೂಲಕ ದಿಕ್ಕುಗಳನ್ನು ಸುಲಭವಾಗಿ ಗುರುತಿಸುವುದು ಹೇಗೆ ಎಂದು ತಿಳಿಸಿಕೊಟ್ಟರು. ವಿದ್ಯಾರ್ಥಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಚಟುವಟಿಕೆ ಆಧಾರಿತ ಕಲಿಕೆ ಹೇಗೆ ಮಾಡುವುದು ಎನ್ನುವುದನ್ನು ಖಂಡಗಳ ಚಟುವಟಿಕೆಯ ಮೂಲಕ ಅರ್ಥೈಸಿದರು.ಸಂಜೆ ನಡೆದ ಸಮಾರೋಪ ಕಾರ್ಯಕ್ರಮವು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಸಮಾಜವನ್ನು ಧನಾತ್ಮಕ ವಿಚಾರಗಳ ಕಡೆಗೆ ಹೇಗೆ ಪರಿವರ್ತನೆ ಮಾಡಬೇಕೆಂಬುದನ್ನು ಸಮಾಜ ವಿಜ್ಞಾನ ಶಿಕ್ಷಕರು ಯೋಚಿಸಬೇಕು. ವಿದ್ಯಾರ್ಥಿಯು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕಾದರೆ ಸರಿಯಾದ ಮಾರ್ಗದರ್ಶನ ಅವಶ್ಯ. ಆ ಜವಾಬ್ದಾರಿ ಶಿಕ್ಷಕರದ್ದು ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತೆಂಕಿಲ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ ಕೋಶಾಧಿಕಾರಿ ಕೃಷ್ಣ ಮೋಹನ ಮಾತನಾಡಿ, ಕೇವಲ ಓದು – ಬರೆ ಎನ್ನುವ ಕಾಲಘಟ್ಟದಲ್ಲಿ ನಾವಿರದೆ ದೃಶ್ಯಗಳನ್ನು ಸಾಕ್ಷಿಕರಿಸುವ ಮೂಲಕ ಪಾಠಗಳನ್ನು ಮಾಡಬೇಕಾದ ಅನಿವಾರ್ಯತೆ ಇದ್ದು, ಮಕ್ಕಳಿಗೆ ಪ್ರಾಜೆಕ್ಟರ್ ಬಳಕೆಯ ಮೂಲಕ ಶಿಕ್ಷಣ ನೀಡುವುದು ಇಂದಿನ ದಿನದಲ್ಲಿ ಅತಿ ಅವಶ್ಯ. ನಮ್ಮ ಭಾರತದ ಮಕ್ಕಳು ಪಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಬಲಿಯಾಗುವುದನ್ನು ತಪ್ಪಿಸುವ ಜವಾಬ್ದಾರಿ ಶಿಕ್ಷಕರಿಗಿದೆ. ನಮ್ಮ ಮಕ್ಕಳನ್ನು ಇಂಡಿಯಾದಿಂದ ಭಾರತಕ್ಕೆ ಕರೆತರುವ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಶಿಕ್ಷಕರಿಗೆ ಸೂಕ್ಷ್ಮವಾಗಿ ತಿಳಿಸಿದರು. ಲೀಲಾವತಿ ಸ್ವಾಗತಿಸಿ ಸೌಮ್ಯಕುಮಾರಿ ವಂದಿಸಿದರು. ರಶ್ಮಿತಾ ನಿರೂಪಿಸಿದರು. ಕಾರ್ಯಗಾರದಲ್ಲಿ ಪಾಲ್ಗೊಂಡ ಎಲ್ಲಾ ಶಿಕ್ಷಕರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

LEAVE A REPLY

Please enter your comment!
Please enter your name here