ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: ಸರ್ಕಾರಿ ಆಸ್ಪತ್ರೆಯ ಔಷಧಿ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಅಮಾನತು

0

ಬೆಳ್ತಂಗಡಿ: ತಾಲೂಕು ಸರ್ಕಾರಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಆಸ್ಪತ್ರೆಯ ಔಷಧಿ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಲಾಗಿದೆ.

ಅಮಾನತು ಆದೇಶ: ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಅವರು ಅದೇ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಗ್ರೂಪ್ ಡಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ದೂರು ಬಂದಿದೆ. ಈ ಬಗ್ಗೆ ಆಂತರಿಕ ದೂರು ಸಮಿತಿ ಸಭೆ ನಡೆಸಿ ಚಂದ್ರಶೇಖರ್ ವಿರುದ್ಧ ಕಾನೂನು ಅಡಿಯಲ್ಲಿ ಶಿಸ್ತುಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೋರಿದ್ದಾರೆ. ಸಮಿತಿಯವರು ಸಲ್ಲಿಸಿದ್ದ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಅಗತ್ಯ ಸೂಕ್ತ ದಾಖಲೆಗಳು ಹಾಗೂ ಆಂತರಿಕ ದೂರು ಸಮಿತಿ ಸಭೆಯ ಅಭಿಪ್ರಾಯ ಮತ್ತು ಶಿಫಾರಸ್ಸು ಇಲ್ಲದೆ ಇದುದ್ದರಿಂದ ಸದರಿ ಸಮಿತಿಯಿಂದ ದಾಖಲಾತಿಗಳನ್ನು ಪಡೆದು ಸಲ್ಲಿಸುವಂತೆ ಕೋರಲಾಗಿತ್ತು. ಅದರ ಪ್ರಕಾರ ತನಿಖಾಧಿಕಾರಿಗಳ ವರದಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದೆ. ಅವುಗಳನ್ನು ಪರಿಶೀಲಿಸಲಾಗಿದ್ದು ಸಂತ್ರಸ್ತ ಮಹಿಳೆಯ ಹೇಳಿಕೆ, ಪೊಲೀಸ್ ದೂರು ದಾಖಲಾಗಿರುವ ಪ್ರಥಮ ವರ್ತಮಾನ ವರದಿ ಮತ್ತು ಸಾಕ್ಷೀದಾರರ ಲಿಖಿತ ಹೇಳಿಕೆಗಳಿಂದ ಚಂದ್ರಶೇಖರ್ ಅವರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಮೂಲಕ ಇವರು ಕೆ.ಸಿ.ಎಸ್. ನಡತೆ ನಿಯಮ ೨೦೨೧ರ ನಿಯಮ ೩(೧)(೨)(೩)ನ್ನು ಉಲ್ಲಂಸುವ ಮೂಲಕ ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ನಡೆದುಕೊಂಡಿರುವುದರಿಂದ ಇವರ ವಿರುದ್ಧ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಲು ತೀರ್ಮಾನಿಸಿದೆ. ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ೧೯೫೭ ನಿಯಮ ೧೦(೧) (ಬಿ)ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಚಂದ್ರಶೇಖರ್ ಅವರನ್ನು ಕರ್ತವ್ಯಲೋಪ, ದುರ್ನಡತೆ ಕರ್ತವ್ಯ ನಿರ್ಲಕ್ಷತೆ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಅನ್ವಯವಾಗುವಂತೆ ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ. ಇವರ ಲೀನ್ ಅನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಾಲಿಗಾಮ ಹಾಸನ ತಾಲ್ಲೂಕು ಮತ್ತು ಜಿಲ್ಲೆ ಇಲ್ಲಿಗೆ ಸ್ಥಳಾಂತರಿಸಿದೆ. ಅಮಾನತ್ತಿನ ಅವಧಿಯಲ್ಲಿ ನೌಕರರು ನಿಯಮ ೯೮ರ ಪ್ರಕಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರಸ್ಥಾನ ಬಿಡುತಕ್ಕದಲ್ಲವೆಂದು ಆದೇಶಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಡಾ. ರಜನಿ ಎಂ. ಆದೇಶಿಸಿದ್ದಾರೆ.

ಇನ್ನಷ್ಟು ದೂರು?: ಕಳೆದ ಎರಡು ದಶಕಗಳಿಂದ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ಔಷಧಿ ವಿಭಾಗದಲ್ಲಿದ್ದು ಈಗ ವಿಭಾಗದ ಮುಖ್ಯಸ್ಥನಾಗಿರುವ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಚಂದ್ರಶೇಖರ್ ಅವರು ಆಸ್ಪತ್ರೆಯ ಔಷಧಾಲಯದ ಉಗ್ರಾಣದಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ರೆಂಜಿಲಾಡಿ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ನೀಡಿದ್ದ ದೂರಿನಂತೆ ಜೂ.೧೧ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ೬೭/೨೬ರಂತೆ ಬಿಎನ್‌ಎಸ್ ೭೫(೩), ೭೯, ೩೫೧(೨)ರಡಿ ಪ್ರಕರಣ ದಾಖಲಾದ ಬಳಿಕ ಚಂದ್ರಶೇಖರ್ ವಿರುದ್ಧ ಮತ್ತಷ್ಟು ಮಹಿಳಾ ಸಿಬ್ಬಂದಿಗಳಿಂದ ದೂರು ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಚಂದ್ರಶೇಖರ್ ಪರಾರಿಯಾಗಿದ್ದರು. ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿರುವ ಅವರು ತನ್ನ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಮಂಗಳೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯೆ ಇನ್ನಷ್ಟು ಮಹಿಳಾ ಸಿಬ್ಬಂದಿಗಳು ಚಂದ್ರಶೇಖರ್ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಲೈಂಗಿಕ ಕಿರುಕುಳ ಪ್ರಕರಣದ ಕುರಿತು ಆಂತರಿಕ ತನಿಖೆ ನಡೆಸಲು ಜಿಲ್ಲಾ ಆರೋಗ್ಯಾಧಿಕಾರಿಯವರು ಸೂಚನೆ ನೀಡಿದ ಬಳಿಕ ಆಸ್ಪತ್ರೆಯ ಹಲವು ಮಹಿಳಾ ಸಿಬ್ಬಂದಿಗಳು ತಮಗೆ ಚಂದ್ರಶೇಖರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಂತರಿಕ ತನಿಖಾ ಸಮಿತಿಯ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಸಮಿತಿ ಮುಖ್ಯಸ್ಥರು ಈ ಮಾಹಿತಿಗಳನ್ನು ತಮ್ಮ ಮೇಲಾಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಅಧಿಕೃತ ಮಾಹಿತಿ ದೊರೆತಿಲ್ಲ. ಈ ಮಧ್ಯೆ ಚಂದ್ರಶೇಖರ್ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿರುವ ಸಂತ್ರಸ್ತ ಸಿಬ್ಬಂದಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ.

ಚಂದ್ರಶೇಖರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಚಂದ್ರಶೇಖರ್ ಅವರಿಗೆ ಮಂಗಳೂರು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜೂ.೧೨ರಂದು ನಿರೀಕ್ಷಣಾ ಜಾಮೀನು ಕೋರಿ ತಮ್ಮ ವಕೀಲರ ಮೂಲಕ ಚಂದ್ರಶೇಖರ್ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜೂ.೨೩ರಂದು ಜಾಮೀನು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here