






ಬೆಳ್ತಂಗಡಿ: ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ, ಅಶ್ಲೀಲ ಹಾಗೂ ಮಾನಹಾನಿಕರ ವಿಷಯಗಳನ್ನು ಉzಶಪೂರ್ವಕವಾಗಿ ಪ್ರಕಟಿಸಿದ ಆರೋಪದಡಿ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದು ಪಡಿಸಿದೆ. ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ, ಅಶ್ಲೀಲ ಮತ್ತು ಮಾನಹಾನಿಕರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಗಿರೀಶ್ ಲೋಕನಾಥ ಮಟ್ಟಣ್ಣನವರ್(೪೯) ಸಂದೇಶ ಹಾಕುತ್ತಿದ್ದಾರೆ. ಈ ಪೋಸ್ಟ್ಗಳಲ್ಲಿ ಯಾವುದೇ ಸತ್ಯವಿಲ್ಲ. ಆಧಾರವಿಲ್ಲದ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇದರಿಂದ ಡಾ. ಹೆಗ್ಗಡೆ ಅವರ ವ್ಯಕ್ತಿತ್ವ, ಗೌರವ ಮತ್ತು ಸಮಾಜದಲ್ಲಿ ಅವರಿಗಿರುವ ಉನ್ನತ ಸ್ಥಾನಮಾನಕ್ಕೆ ಹಾನಿ ಉಂಟಾಗಿದೆ ಎಂದು ಸುಬ್ರಹ್ಮಣ್ಯ ಪ್ರಸಾದ್ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ೨೦೨೩ರಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬೇಜವಾಬ್ದಾರಿಯುತ ಪ್ರವೃತ್ತಿ ತಕ್ಷಣವೇ ನಿಲ್ಲಿಸಲು ಮಟ್ಟಣ್ಣನವರ್ಗೆ ಹೈಕೋರ್ಟ್ ತಾಕೀತು ಮಾಡಿತ್ತು: ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಟೀಕೆಗಳಿಗೆ ಮುಕ್ತ ಅವಕಾಶವಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದೋ ವಿರುದ್ಧ ಕೆಸರೆರಚಾಟ ನಡೆಸುವುದು ಅಥವಾ ಸಾರ್ವಜನಿಕವಾಗಿ ತೇಜೋವಧೆ ಮಾಡುವುದು ಸಲ್ಲದು. ಇಂತಹ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೈಕೋರ್ಟ್ ಗಿರೀಶ್ ಮಟ್ಟೆಣ್ಣನವರ್ ಅವರಿಗೆ ಈ ಹಿಂದೆ ಸೂಚಿಸಿತ್ತು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಾಗ ಈ ಸೂಚನೆ ನೀಡಲಾಗಿತ್ತು. ಮಟ್ಟಣ್ಣನವರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಪೀಠ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬೇಜವಾಬ್ದಾರಿಯುತ ಪ್ರವೃತ್ತಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತಾಕೀತು ಮಾಡಿತ್ತು. ಅಲ್ಲದೆ ಮುಂದಿನ ವಿಚಾರಣೆಯೊಳಗೆ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತ್ತು.


ಮಟ್ಟಣ್ಣನವರ್ ಪರ ವಕೀಲ ರಂಗನಾಥ್ ರೆಡ್ಡಿ ಅವರು ಪ್ರಕರಣದಲ್ಲಿ ಸಾರ್ವಜನಿಕ ಶಾಂತಿ ಭಂಗ ಉಂಟಾದ ಅಥವಾ ಗಲಭೆ ನಡೆದ ಯಾವುದೇ ನಿರ್ದಿಷ್ಟ ಘಟನೆಯ ಉಲ್ಲೇಖವಿಲ್ಲ. ಕೇವಲ ಸಾರ್ವಜನಿಕ ಅಶಾಂತಿ ಸೃಷ್ಟಿಯಾಗಬಹುದೆಂಬ ಊಹೆಯ ಮೇಲೆ ಮೂರನೇ ವ್ಯಕ್ತಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಹಳೆಯ ಪೋಸ್ಟ್ಗಳನ್ನೆಲ್ಲ ಹುಡುಕಿ ತಂದು ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಬಾಧಿತ ವ್ಯಕ್ತಿ ದೂರು ದಾಖಲಿಸಿಲ್ಲ ಎಂದು ಹೇಳಿದ್ದರು. ಸರಕಾರದ ಪರ ವಾದ ಮಂಡಿಸಿದ್ದ ಎಸ್ಪಿಪಿ ಬಿ.ಎನ್.ಜಗದೀಶ್ ಅವರು ಗಿರೀಶ್ ಮಟ್ಟಣ್ಣನವರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿವಾದಾತ್ಮಕ ಚಿತ್ರಗಳನ್ನು ನ್ಯಾಯಾಲಯದ ಗಮನಕ್ಕೆ ತಂದರಲ್ಲದೆ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಕೇವಲ ಸಂತ್ರಸ್ತರೇ ಆಗಬೇಕಿಲ್ಲ. ಯಾರು ಬೇಕಾದರೂ ದೂರು ನೀಡಬಹುದು ಎಂದು ಪ್ರತಿಪಾದಿಸಿದ್ದರು.
ಪೋಸ್ಟ್ಗಳನ್ನು ಗಮನಿಸಿದ ನ್ಯಾಯಮೂರ್ತಿಗಳು ನಿಮಗೆ ಇದೆಲ್ಲ ಏಕೆ ಬೇಕು ? ಇದರ ಅಗತ್ಯವೇನಿದೆ ? ನೀವು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ವಿಮರ್ಶೆ ಮಾಡಿ. ಯಾವುದೇ ತೊಂದರೆಯಿಲ್ಲ. ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಸಾರವಾಗಿರಬಹುದು. ಆದರೆ ಇಂತಹ ನಡೆ ಸರಿಯಲ್ಲ ಎಂದು ಹೇಳಿದ್ದರು. ಆರೋಗ್ಯಕರ ವಿಮರ್ಶೆ ಸ್ವಾಗತಾರ್ಹ. ಯಾರೂ ನಿಮ್ಮ ಹಾದಿಗೆ ಅಡ್ಡ ಬರುವುದಿಲ್ಲ. ಆದರೆ ನಿಂದನೆ ಮಾಡುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನೀವು ಏನು ಮಾಡುತ್ತಿದ್ದೀರಿ ? ಇದರಿಂದ ನಿಮಗೇನು ಸಿಗುತ್ತದೆ ? ಯಾರ ಮೇಲಾದರೂ ಈ ರೀತಿ ಕೆಸರೆರಚಾಟ ಮಾಡುವುದು ಅಥವಾ ಸಾರ್ವಜನಿಕವಾಗಿ ಅವಹೇಳನ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹೇಳಿದ್ದರು.
ಎಸ್ಪಿಪಿ ಜಗದೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಪೋಸ್ಟ್ಗಳು ಸಾಮಾನ್ಯ ಜನರನ್ನು ತಲುಪುತ್ತವೆ. ಇದು ಸಮಾಜದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತವೆ ಎಂದು ಹೇಳಿದ್ದರು.
ಅದಕ್ಕೆ ಧ್ವನಿಗೂಡಿಸಿದ್ದ ನ್ಯಾಯಮೂರ್ತಿಗಳು ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಸಾಮಾಜಿಕ ಜಾಲತಾಣದ ಖಾತೆಗಳಿದೆ. ಅವು ಟೈಂ ಪಾಸ್ ವೇದಿಕೆಯಾಗಿವೆ. ಆದರೆ ಅವುಗಳ ಮೂಲಕ ಹರಡುತ್ತಿರುವ ಸುಳ್ಳು ಸುದ್ದಿಗಳ ಪ್ರಮಾಣ ಎಷ್ಟು ಎಂದು ಕಳವಳ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿದ್ದರು. ಜೂ.೨೩ರಂದು ಮತ್ತೆ ವಿಚಾರಣೆ ನಡೆದಾಗ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ಪ್ರಮಾಣಪತ್ರ ಪರಿಗಣಿಸಿ ಅವರ ಮೇಲಿನ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ.








