ಮಂಡ್ಯದಲ್ಲಿ ಕೊಲೆ: ಬೆಳ್ತಂಗಡಿಯಲ್ಲಿ ಗ್ರಾಮಕರಣಿಕನಾಗಿದ್ದ ಜಯಚಂದ್ರನ ವಿರುದ್ಧ ಕೇಸು ದಾಖಲು

0

ಬೆಳ್ತಂಗಡಿ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಣೇಶ್ (೪೧) ಎಂಬವರನ್ನು ಕೊಲೆ ಮಾಡಿದ ಆರೋಪದಡಿ ಬೆಳ್ತಂಗಡಿಯಲ್ಲಿ ಗ್ರಾಮಕರಣಿಕರಾಗಿದ್ದು ಕರ್ತವ್ಯ ಲೋಪದ ಆರೋಪದಡಿ ಅಮಾತನತುಗೊಂಡಿದ್ದ ಜಯಚಂದ್ರ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಪ್ರಸ್ತುತ ಪುತ್ತೂರು ಕಸಬಾದ ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿಯಾಗಿರುವ ಜಯಚಂದ್ರ ಘಟನೆ ನಡೆದ ಬಳಿಕ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಘಟನೆಯ ವಿವರ: ಜೂ.೨೨ರಂದು ರಾತ್ರಿ ವೇಳೆ ಗಣೇಶ್ ಅವರು ತನ್ನ ಮನೆಯ ಸಮೀಪದ ಅಂಗಡಿಯೊಂದರ ಬಳಿ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಜಯಚಂದ್ರ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದನ್ನು ಗಮನಿಸಿದ ಗಣೇಶ್ ಅವರು ಸಾರ್ವಜನಿಕರನ್ನು ಬೈಯ್ಯದಂತೆ ಬುದ್ಧಿವಾದ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಜಯಚಂದ್ರ ಏಕಾಏಕಿ ಗಣೇಶ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಗ್ರಾಮಸ್ಥರು ಅಡ್ಡಬಂದು ಅವರಿಬ್ಬರನ್ನೂ ಸಮಾಧಾನಪಡಿಸಿ ಮನೆಗಳಿಗೆ ತೆರಳುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದರು.

ಬಳಿಕ ಏನೂ ಆಗಿಲ್ಲವೆಂಬಂತೆ ವರ್ತಿಸಿದ್ದ ಜಯಚಂದ್ರ ಅಲ್ಲಿ ಗಣೇಶ್ ಅವರನ್ನು ತಬ್ಬಿಕೊಂಡು ಅಲ್ಲಿಂದ ಮನೆಗೆ ಕರೆದುಕೊಂಡು ಹೋಗಿ ಮನೆಯ ಕೋಣೆಗೆ ಚಿಲಕ ಹಾಕಿ ಮರದ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಗಣೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಷಯ ತಿಳಿದ ಸಂಬಂಧಿಕರು ತಕ್ಷಣ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ಕರೆ ತಂದಿದ್ದಾರೆ.

ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ್ ಅವರು ಜೂ.೨೩ರಂದು ಬೆಳಗಿನ ಜಾವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಗಣೇಶ್ ಅವರ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಗಣೇಶ್ ಅವರನ್ನು ಕೊಲೆಗೈದ ಆರೋಪಿ ಜಯಚಂದ್ರ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮದ್ದೂರಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿ ಮಹಜರು ನಡೆಸಲಾಗಿದೆ.

ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡವನ್ನು ನಿಯೋಜಿಸಲಾಗಿದ್ದು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೆ.ಎಂ.ದೊಡ್ಡಿ ಪೊಲೀಸರು ಅಗತ್ಯ ಕ್ರಮಕೈಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಹಾಗೂ ವೃತ್ತ ನಿರೀಕ್ಷಕ ಆನಂದ ಅವರು ಕೆ.ಶೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿಯಿಂದ ವರ್ಗಾವಣೆಗೊಂಡಿದ್ದ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಶೆಟ್ಟ ಹಳ್ಳಿ ನಿವಾಸಿಯಾಗಿರುವ ಜಯಚಂದ್ರ ಗ್ರಾಮ ಆಡಳಿತಾಧಿಕಾರಿಯಾಗಿ ಆರಂಭದಲ್ಲಿ ಸುಳ್ಯದಲ್ಲಿ ಬಳಿಕ ಕಡಬ ಮತ್ತು ಬೆಳ್ತಂಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ.

ಬೆಳ್ತಂಗಡಿಯಲ್ಲಿದ್ದ ವೇಳೆ ಕರ್ತವ್ಯ ಲೋಪದ ಆರೋಪದಡಿ ಅಮಾನತುಗೊಂಡಿದ್ದ. ವರ್ಷಗಳ ಹಿಂದೆ ಪುತ್ತೂರಿಗೆ ವರ್ಗಾವಣೆಗೊಂಡು ತೆರಳಿದ್ದ. ಪ್ರಸ್ತುತ ಕೆಮ್ಮಿಂಜ ಗ್ರಾಮ ಆಡಳಿತಾಧಿ ಕಾರಿಯಾಗಿದ್ದು ಹೆಚ್ಚುವರಿಯಾಗಿ ಕುರಿಯ ಗ್ರಾಮ ಆಡಳಿತಾಧಿಕಾರಿಯಾಗಿಯೂ ಕರ್ತವ್ಯ ಕರ್ತವ್ಯ ನಿರ್ವಹಿಸುತ್ತಿದ್ದ. ಪುತ್ತೂರಿನಲ್ಲಿ ಬಾಡಿಗೆ ಮನೆ ಯೊಂದರಲ್ಲಿ ವಾಸ್ತವ್ಯವಿದ್ದ. ಅವರ ಪತ್ನಿ ಮತ್ತು ತ್ರಿವಳಿ ಗಂಡು ಮಕ್ಕಳು ಊರಲ್ಲಿಯೇ ಇದ್ದು ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದ ಜಯಚಂದ್ರ ಇದೀಗ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ.

ಅಮಾನತುಗೊಂಡಿದ್ದ ಜಯಚಂದ್ರ: ಬಾರ್ಯ, ತೆಕ್ಕಾರು, ಪುತ್ತಿಲ ಹಾಗೂ ತಾಲೂಕು ಕಚೇರಿಯಲ್ಲಿ ಅಕ್ರಮ -ಸಕ್ರಮ ವಿಷಯ ನಿರ್ವಾಹಕರಾಗಿ ಜಯಚಂದ್ರ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಅಕ್ರಮ -ಸಕ್ರಮದಲ್ಲಿ ನಕಲಿ ಸಹಿ ಹಾಗೂ ನಕಲಿ ಪತ್ರ ಮಾಡಿದ ಆರೋಪದಡಿ ಅವರನ್ನು ಅಮಾನತುಗೊಳಿಸಿತ್ತು.

ಅನಧಿಕೃತ ಗೈರು-ತಹಶೀಲ್ದಾರ್ ಗೆ ವರದಿ: ಆರೋಪಿ ಜಯಚಂದ್ರ ಸೋಮವಾರದಿಂದ ಕೇಂದ್ರಸ್ಥಾನದಲ್ಲಿ ಇರದೆ ಅನಧಿಕೃತ ಗೈರು ಆಗಿರುವ ಕುರಿತು ಕಂದಾಯ ನಿರೀಕ್ಷಕ ಚಂದ್ರನಾಯ್ಕ ಅವರು ಪುತ್ತೂರು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ.

LEAVE A REPLY

Please enter your comment!
Please enter your name here