ವಾರ್ತಾ ಇಲಾಖೆಯ ಆಯುಕ್ತರಾಗಿ ಎಂ.ಎನ್. ಅನುಚೇತ್ ನೇಮಕ

0

ಬೆಳ್ತಂಗಡಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ
ಆದೇಶ ಹೊರಡಿಸಿದೆ. ಜತೆಗೆ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ಅವರಿಗೆ ನೀಡಲಾಗಿದೆ. ವಾರ್ತಾ ಇಲಾಖೆ ಆಯುಕ್ತರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಳರ್ ಅವರ ಸ್ಥಳಕ್ಕೆ ಅನುಚೇತ್ ಅವರನ್ನು ನೇಮಿಸಲಾಗಿದೆ. ನಿಂಬಾಳ್ಕರ್ ಅವರಿಗೆ ಸ್ಥಳ ನಿಯೋಜನೆ ಮಾಡಿಲ್ಲ. ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಟಿ.ಎಚ್. ಕುಮಾರ್ ಅವರಿಗೂ ಹುದ್ದೆ ತೋರಿಸಿಲ್ಲ. ೨೦೦೯ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಎಂ.ಎನ್. ಅನುಚೇತ್ ಅವರು ವೃತ್ತಿ ಜೀವನದಲ್ಲಿ ಸೂಕ್ಷ್ಮ ಮತ್ತು ಗಂಭೀರ ಪ್ರಕರಣಗಳ ತನಿಖೆಯಿಂದ ಹೆಸರುವಾಸಿಯಾಗಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಸಂಬಂಧ ಕನ್ನಡಪರ ಸಂಘಟನೆಗಳು ಬೆಂಗಳೂರಿನಲ್ಲಿ ಗಲಾಟೆ ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ್ದ ಮಾರನೇ ದಿನವೇ ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿಯಾಗಿ ಎಂ.ಎನ್. ಅನುಚೇತ್ ಅವರನ್ನು ಸರ್ಕಾರ ನಿಯೋಜನೆ ಮಾಡಿತ್ತು.

ಅಧಿಕಾರ ವಹಿಸಿಕೊಂಡ ದಿನದಿಂದಲೇ ಕನ್ನಡಪರ ಸಂಘಟನೆ ನೆಪದಲ್ಲಿ ವೈಯಕ್ತಿಕ ದ್ವೇಷಕ್ಕೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಮೂಲಕ ಅನುಚೇತ್ ಗಮನ ಸೆಳೆದಿದ್ದರು. ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಅನುಚೇತ್ ಅವರು ಸತತ ಪ್ರಯತ್ನ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರು. ಬಳಿಕ ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ಕೊಲೆ ಪ್ರಕರಣಗಳಲ್ಲಿ ಗೌರಿ ಲಂಕೇಶ್ ಹಂತಕರ ಕೈವಾಡ ಇರುವುದನ್ನೂ ಬೆಳಕಿಗೆ ತಂದಿದ್ದರು. ಇದಲ್ಲದೆ ಬೆಂಗಳೂರು ನಗರ ಸಂಚಾರ ವಿಭಾಗದ ಆಯುಕ್ತರಾಗಿದ್ದ ವೇಳೆ ವಾಹನ ಸಂಚಾರ ದಟ್ಟಣೆ ತಗ್ಗಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಿದ್ದರು. ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳದ ಗ್ರಾಮದ ಬುರಡೆ ಗ್ಯಾಂಗ್ ಪ್ರಕರಣದ ಸತ್ಯಾಂಶ ಪತ್ತೆಹಚ್ಚಲು ಸರ್ಕಾರ ರಚನೆ ಮಾಡಿದ್ದ ವಿಶೇಷ ತನಿಖಾ ತಂಡದ ಸದಸ್ಯರಾಗಿರುವ ಅನುಚೇತ್ ಅವರು ಪುತ್ತೂರು ಉಪವಿಭಾಗದ ಎಎಸ್ಪಿಯಾಗಿಯೂ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here