






ಕಾಯರ್ತಡ್ಕ, ಜೂನ್ 20: ಇಲ್ಲಿನ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ (PTA) ಸಭೆಯು ಜೂನ್ 20ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜೈಸನ್ ವರ್ನೂರು ವಹಿಸಿದ್ದರು.ವೇದಿಕೆಯಲ್ಲಿ ಸೇಕ್ರೆಡ್ ಹಾರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಎಜುಕೇಶನಲ್ ಕೌನ್ಸಿಲರ್ ಸಿಸ್ಟರ್ ಜೋಸ್ನಾ ಎಸ್.ಎಚ್., ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಲಿಸ್ನಾ ಮ್ಯಾಥ್ಯೂ ಹಾಗೂ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಧನ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರೆವರೆಂಡ್ ಫಾದರ್ ಆದರ್ಶ್ ಜೋಸೆಫ್ ಅವರು “ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಕರ್ತವ್ಯ” ಎಂಬ ವಿಷಯದ ಕುರಿತು ಪೋಷಕರಿಗೆ ಉಪಯುಕ್ತ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.ಶಿಕ್ಷಕಿಯರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡಿತು. ಶಿಕ್ಷಕ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಹಾಗೂ ಸಹಶಿಕ್ಷಕಿ ಪುಷ್ಪ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಶಿಕ್ಷಕಿ ಸಿಸ್ಟರ್ ಲಿಸ್ನಾ ಮ್ಯಾಥ್ಯೂ ಅವರು ಶಾಲೆಯ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು.


ಸಿಸ್ಟರ್ ರೋಸ್ನಾ ಶಾಲೆಯ ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಮಾತನಾಡಿದರು.ನಂತರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಜೈನ್ ಹಾಗೂ ಉಪಾಧ್ಯಕ್ಷೆಯಾಗಿ ಸಾವಿತ್ರಿ ಹರೀಶ್ ರೈ ಆಯ್ಕೆಯಾದರು.ಸಭೆಯಲ್ಲಿ ಪೋಷಕರು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು.
ನೂತನ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್ ಮಾತನಾಡಿ, ತಮ್ಮನ್ನು ಆಯ್ಕೆ ಮಾಡಿದ ಪೋಷಕರಿಗೆ ಕೃತಜ್ಞತೆ ಸಲ್ಲಿಸಿ ಮುಂದಿನ ಅವಧಿಯಲ್ಲಿ ಎಲ್ಲರ ಸಹಕಾರವನ್ನು ಕೋರಿದರು. ನಿರ್ಗಮಿತ ಅಧ್ಯಕ್ಷ ಜೈಸನ್ ವರ್ನೂರು ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಸಹಶಿಕ್ಷಕಿ ಪುಷ್ಪ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪ್ರಜ್ಞಾ ವಂದನಾರ್ಪಣೆಗೈದರು.









