







ಬಳಂಜ.ಭಾರತೀಯ ಸೇನೆಗೆ ಆಯ್ಕೆಯಾದ ನಾಲ್ಕೂರು ಕೆಂಪುರಂಜ ರಂಜಿತ್ ಪೂಜಾರಿಯವರಿಗೆ ಬಳಂಜದ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬ್ರಹ್ಮಶ್ರೀ ಕುಣಿತ ಭಜಾನಾ ಮಂಡಳಿಯ ವತಿಯಿಂದ ಸನ್ಮಾನ ಕಾರ್ಯಕ್ರಮವು ಜೂನ್ 21 ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಪಿ.ಕೋಟ್ಯಾನ್ ರವರು,ಒಂದೇ ಮನೆಯ ಇಬ್ಬರು ಸಹೋದರರು ಸಹ ಭಾರತಾಂಬೆಯ ಸೇವೆ ಮಾಡಲು ಭಾರತೀಯ ಸೇನೆಗೆ ಸೇರಿದ್ದು ಶ್ಲಾಘನೀಯವಾಗಿದ್ದು ಕಠಿಣ ಪ್ರಯತ್ನ ಮತ್ತು ಉತ್ತಮ ಜ್ಞಾನದಿಂದ ಅಸಾಧ್ಯ ಕೆಲಸವನ್ನು ಸಹ ಸಾಧ್ಯವಾಗಿಸುವಲ್ಲಿ ರಂಜಿತ್ ಪೂಜಾರಿಯವರು ಯಶಸ್ವಿಯಾಗಿದ್ದಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.


ಬಿಲ್ಲವ ಸಂಘದ ಕಾರ್ಯದರ್ಶಿ ರಂಜಿತ್ ಮಜಲಡ್ಡ,ಸಂತೋಷ್ ಹಿಮರಡ್ಡ,ಮಂಡಳಿಯ ಅಧ್ಯಕ್ಷರಾದ ಪ್ರಸಿದ್ದಿ ಶೆಟ್ಟಿ, ತರಬೇತುದಾರೆ ಕು.ಮಾನ್ಯ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮಂಡಳಿಯ ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಮಂಡಳಿಯು ಈಗಾಗಲೇ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದು ಈಗಾಗಲೇ ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ರಂಜಿತ್ ಪೂಜಾರಿಯವರ ಸಹೋದರನಿಗೂ ಸನ್ಮಾನ ಮಾಡಿ ಕಳುಹಿಸಿದ್ದು ಒಂದೇ ಮನೆಯ ಇಬ್ಬರು ಯೋಧರಿಗೆ ಗೌರವಿಸುವ ಯೋಗ ಸಿಕ್ಕಿದ್ದು ನಮ್ಮ ಮಂಡಳಿಯ ಭಾಗ್ಯ ಎಂದು ನುಡಿದು ಎಲ್ಲರನ್ನೂ ಸ್ವಾಗತಿಸಿದರು.









