ವಕೀಲರ ಪರಿಷತ್ ಚುನಾವಣೆ: ಪಿ.ಪಿ. ಹೆಗ್ಡೆ ಗೆಲುವು

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ೨೩ ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಸದಸ್ಯರ ಆಯ್ಕೆಗಾಗಿ ಸುಪ್ರೀಂಕೋರ್ಟ್‌ನ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜ್‌ನ ಹಿರಿಯ ವಿದ್ಯಾರ್ಥಿಯಾಗಿರುವ ಖ್ಯಾತ ವಕೀಲ ಪಿ.ಪಿ. ಹೆಗ್ಡೆ ಅವರು ಸತತ ನಾಲ್ಕನೇ ಅವಧಿಗೆ ಗೆಲುವು ಸಾಧಿಸಿದ್ದಾರೆ. ಬೆಳ್ತಂಗಡಿ ಸೇರಿದಂತೆ ರಾಜ್ಯಾದ್ಯಂತ ಎಲ್ಲ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮಾ.೧೧ರಂದು ಚುನಾವಣೆ ನಡೆದಿತ್ತು. ಜೂ.೧೬ರಂದು ಮತ ಎಣಿಕೆ ಆರಂಭಗೊಂಡಿದ್ದು ಮೊದಲ ದಿನ ನಾಲ್ಕು ಸ್ಥಾನಗಳಲ್ಲಿ ವಿಜೇತ ಅಭ್ಯರ್ಥಿಗಳ ಆಯ್ಕೆಯನ್ನು ಘೋಷಿಸಲಾಗಿದೆ. ಮೊದಲ ದಿನದ ಮತ ಎಣಿಕೆಯಲ್ಲಿ ಪಿ.ಪಿ. ಹೆಗ್ಡೆ ಮಂಗಳೂರು, ಕಲಮೇಶ್ವರ ತುಕಾರಾಮ್ ಚಿಕ್ಕೋಡಿ, ಶಿವಕುಮಾರ್ ಎನ್.ಬೆಂಗಳೂರು ಮತ್ತು ಧನಂಜಯ ಸಿ.ಎಂ. ಬೆಂಗಳೂರು ಅವರ ಆಯ್ಕೆಯನ್ನು ಘೋಷಿಸಲಾಗಿದೆ. ಉಳಿದ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗಬೇಕಿದೆ. ೨೩ ಸ್ಥಾನಗಳಿಗೆ ಒಟ್ಟು ೧೪೯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಸತತ ನಾಲ್ಕನೇ ಬಾರಿಗೆ ಪಿ.ಪಿ.ಹೆಗ್ಡೆಯವರಿಗೆ ಗೆಲುವು: ಪಿ.ಪಿ.ಹೆಗ್ಡೆಯವರು ಸತತ ನಾಲ್ಕನೇ ಬಾರಿಗೆ ರಾಜ್ಯ ವಕೀಲರ ಪರಿಷತ್‌ಗೆ ಚುನಾಯಿತರಾಗಿದ್ದಾರೆ. ೨೦೦೫ರಿಂದ ಸತತವಾಗಿ ಅವರು ರಾಜ್ಯ ವಕೀಲರ ಪರಿಷತ್‌ಗೆ ಆಯ್ಕೆಯಾಗಿದ್ದು ಈ ಹಿಂದೆ ಉಪಾಧ್ಯಕ್ಷರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಚುನಾಯಿತ ೨೩ ಸದಸ್ಯರು ಮತ್ತು ಸುಪ್ರೀಂಕೋರ್ಟ್ ನಾಮನಿರ್ದೇಶನ ಮಾಡಲಿರುವ ಇಬ್ಬರು ಸೇರಿ ಒಟ್ಟು ೨೫ ಮಂದಿ ಸದಸ್ಯರು ಮುಂದೆ ಸಭೆ ಸೇರಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸಹಿತ ಪದಾಧಿಕಾರಿಗಳ ಆಯ್ಕೆ ನಡೆಸಲಿದ್ದಾರೆ. ಸುಳ್ಯ ತಾಲೂಕಿನ ಪಂಜ ಕೂತ್ಕುಂಜದ ಶ್ರೀಧರ ಹೆಗ್ಡೆಯವರ ಪುತ್ರರಾಗಿದ್ದು ಪಿ.ಪಿ.ಹೆಗ್ಡೆ ಎಂದೇ ಚಿರಪರಿಚಿತರಾಗಿರುವ ಪದ್ಮಪ್ರಸಾದ್ ಹೆಗ್ಡೆಯವರು ಎಲ್.ಎಲ್.ಬಿ ಮತ್ತು ಎಲ್.ಎಲ್.ಎಮ್. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದರು. ಅತೀ ಕಿರಿಯ ವಯಸ್ಸಿನಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅನುಭವವುಳ್ಳ ಅವರು ಮಂಗಳೂರು, ಬೆಂಗಳೂರು ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದ್ದಾರೆ. ಸುಪ್ರೀಂಕೋರ್ಟ್ ವಕೀಲರಾಗಿಯೂ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ಅವಧಿಯಲ್ಲಿ ಪಿ.ಪಿ. ಹೆಗ್ಡೆಯವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ.

ಹಲವಾರು ಕ್ಲಿಷ್ಟಕರ ಕೇಸುಗಳಲ್ಲಿ ಸಮರ್ಥವಾಗಿ ವಾದಿಸಿ ಗಮನ ಸೆಳೆದಿರುವ ಪಿ.ಪಿ. ಹೆಗ್ಡೆರವರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಪುತ್ರನ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು. ಈ ಹೋರಾಟಕ್ಕೆ ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್ ಮತ್ತು ಸಂತೋಷ್ ಹೆಗ್ಡೆಯವರು ವಕೀಲರೊಂದಿಗೆ ಕೈ ಜೋಡಿಸಿದ್ದರು. ಪಿ.ಪಿ.ಹೆಗ್ಡೆ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನಕಲಿ ವಕೀಲರುಗಳನ್ನು ಪತ್ತೆ ಹಚ್ಚಿ ಅವರನ್ನು ಅಮಾನತುಗೊಳಿಸಿದ್ದರಲ್ಲದೆ ವಕೀಲ ವೃತ್ತಿಯಲ್ಲಿ ಇರುವವರು ಅನ್ಯ ವೃತ್ತಿ ಮಾಡಬಾರದು ಎಂಬ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರು.ಪ್ರಚಲಿತ ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿರುವ ಪಿ.ಪಿ. ಹೆಗ್ಡೆಯವರು ಬರಹಗಳ ಮೂಲಕವೂ ಗಮನ ಸೆಳೆದಿದ್ದಾರೆ. ಅಲ್ಲದೆ ಬೆಳ್ತಂಗಡಿ ಸಹಿತ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮೂಲಕ ಸಹಕಾರಿ ಕ್ಷೇತ್ರವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಸುಳ್ಯದ ಪಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಪಿ.ಪಿ. ಹೆಗ್ಡೆಯವರು ಬಳಿಕ ಮೂಡಬಿದ್ರೆ ಜೈನ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ನಂತರ ಬೆಳ್ತಂಗಡಿ ತಾಲೂಕಿನ ಉಜಿರೆ ಸಿದ್ದವನ ಗುರುಕುಲದ ವಿದ್ಯಾರ್ಥಿಯಾಗಿದ್ದ ಇವರು ಉಜಿರೆ ಎಸ್.ಡಿ.ಎಂ. ಕಾಲೇಜು ಮತ್ತು ಮಂಗಳೂರು ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ, ಉಡುಪಿ ಮಠ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ, ಸುಬ್ರಹ್ಮಣ್ಯ ಮಠ ಸಹಿತ ಹಲವು ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಸಂಘಗಳ ಕಾನೂನು ಸಲಹೆಗಾರರಾಗಿಯೂ ಪಿ.ಪಿ. ಹೆಗ್ಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾ.೧೧ರಂದು ಚುನಾವಣೆ ನಡೆದಿತ್ತು: ವಕೀಲರ ಪರಿಷತ್ ಚುನಾವಣೆ ಮಾ.೧೧ರಂದು ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆದಿತ್ತು. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ಬೆಳ್ತಂಗಡಿನ್ಯಾಯಾಲಯದಲ್ಲಿ ಶಾಂತಿಯುತ ಚುನಾವಣೆ ನಡೆದಿತ್ತು.
೨೩ ಸ್ಥಾನಗಳಿಗೆ ೧೪೯ ಅಭ್ಯರ್ಥಿಗಳು: ಈ ಹಿಂದೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಪಿ.ಪಿ.ಹೆಗ್ಡೆ ಸೇರಿದಂತೆ ೨೩ ಸ್ಥಾನಗಳಿಗೆ ಒಟ್ಟು ೧೪೯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಈ ಪೈಕಿ ೪೨ ಮಂದಿ ಮಹಿಳೆಯರು. ಪ್ರತಿ ಮತದಾರ ೨೩ ಮಂದಿ ಅಭ್ಯರ್ಥಿಗಳಿಗೆ ಮತ ಚಲಾವಣೆಗೆ ಅವಕಾಶವಿತ್ತು. ೨೩ ಸ್ಥಾನಗಳ ಪೈಕಿ ಇದೇ ಮೊದಲ ಬಾರಿಗೆ ೫ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಒಂದು ಸ್ಥಾನಕ್ಕೆ ಪದನಿಮಿತ್ತ ಸದಸ್ಯರಾಗಿ ಅಡ್ವಕೇಟ್ ಜನರಲ್ ಅವರು ಇರುತ್ತಾರೆ. ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಚುನಾವಣೆ ಪಾರದರ್ಶಕವಾಗಿ ನಡೆದಿದೆ. ಪಿ.ಪಿ. ಹೆಗ್ಡೆಯವರು ಸತತ ನಾಲ್ಕನೇ ಬಾರಿಗೆ ರಾಜ್ಯ ವಕೀಲರ ಪರಿಷತ್‌ಗೆ ಚುನಾಯಿತರಾಗಿದ್ದಾರೆ. ೨೦೦೫ರಿಂದ ಸತತವಾಗಿ ಅವರು ರಾಜ್ಯ ವಕೀಲರ ಪರಿಷತ್‌ಗೆ ಆಯ್ಕೆಯಾಗಿದ್ದು ಈ ಹಿಂದೆ ಉಪಾಧ್ಯಕ್ಷರಾಗಿ ಮತ್ತು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here