ಮಿತ್ತಬಾಗಿಲು ನಾರಾಯಣ ಗುರು ಮಂದಿರದಲ್ಲಿ ವಿಸ್ಮಯ: ಶಂಖದಲ್ಲಿಟ್ಟ ತುಳಸಿ ದಳ ಬೇರು ಬಿಟ್ಟು ಗಿಡವಾಗಿ ಚಿಗುರೊಡೆದಿದೆ!

0

ಮಿತ್ತಬಾಗಿಲು: ಮಲವಂತಿಗೆ, ಜೂನ್ 5 ಭಕ್ತರ ಪಾಲಿನ ಆರಾಧ್ಯ ದೈವ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ನಡೆದ ವಿಸ್ಮಯವೊಂದು ಭಕ್ತ ಸಮೂಹದಲ್ಲಿ ಅಚ್ಚರಿ ಜೊತೆಗೆ ಭಕ್ತಿ-ಭಾವ ಮೂಡಿಸಿದೆ. ಗುರುಗಳಿಗೆ ಪೂಜೆ ಸಲ್ಲಿಸುವ ಶಂಖದಲ್ಲಿ ಇಟ್ಟ ತುಳಸಿ ದಳ ಬೇರು ಬಿಟ್ಟು ಗಿಡವಾಗಿ ಬದುಕುತ್ತಿದೆ.

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮಿತ್ತಬಾಗಿಲು ಮಲವಂತಿಗೆ ವತಿಯಿಂದ 2 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ಈ ಪವಾಡ ನಡೆದಿದೆ.

ಪ್ರತಿ ತಿಂಗಳ ಪ್ರಥಮ ಗುರುವಾರ ಸಾಯಂಕಾಲ ಬೈಲುವಾರು ಸಮಿತಿಯಿಂದ ಗುರುಪೂಜೆ ನಡೆಯುತ್ತದೆ. ಕಳೆದ ಮೇ ತಿಂಗಳ ಪೂಜೆಯ ಸಂದರ್ಭದಲ್ಲಿ ಶಂಖದಲ್ಲಿ ತುಳಸಿ ದಳವನ್ನು ಇಡಲಾಗಿತ್ತು. ಅದರ ನಂತರದ ಗುರುವಾರ ದೀಪ ಇಡಲು ಬಂದ ಭಕ್ತರಿಗೆ ತುಳಸಿ ದಳ ಬೇರು ಬಿಟ್ಟಿರುವುದು ಕಂಡುಬಂದಿದೆ.

ಭಕ್ತರು ತಕ್ಷಣ ಅದನ್ನು ಒಂದು ಕುಂಡದಲ್ಲಿ ನೆಟ್ಟು ಜೋಪಾನ ಮಾಡಿದ್ದಾರೆ. ಈಗ ಅದು ಒಂದೊಳ್ಳೆ ತುಳಸಿ ಗಿಡವಾಗಿ ಬೆಳೆಯುತ್ತಿದೆ. ನೀರಿಲ್ಲದೆ, ಮಣ್ಣಿಲ್ಲದೆ ಶಂಖದಲ್ಲೇ ಬೇರು ಬಿಟ್ಟು ಚಿಗುರೊಡೆದ ತುಳಸಿ ಗಿಡವನ್ನು ಕಂಡು ಭಕ್ತರು ‘ಇದು ಗುರುಗಳ ಪವಾಡ’ ಎಂದು ಭಾವುಕರಾಗಿದ್ದಾರೆ.

2 ವರ್ಷಗಳ ಹಿಂದೆ ಮಂದಿರ ಪ್ರತಿಷ್ಠಾಪನೆ ಸಂದರ್ಭದಲ್ಲೂ ಒಂದು ವಿಸ್ಮಯ ನಡೆದಿತ್ತು. ಮಹಿಳೆಯೊಬ್ಬರು ತಮ್ಮ ಕರಿಮಣಿ ಸರ ಕಳೆದುಕೊಂಡು ಚಿಂತಾಕ್ರಾಂತರಾಗಿದ್ದರು. ಮಂದಿರದಲ್ಲಿ ಪ್ರಾರ್ಥನೆ ಮಾಡಿದ ತಕ್ಷಣವೇ ಮಂದಿರದ ವಠಾರದಲ್ಲೇ ಆ ಸರ ಸಿಕ್ಕಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

“ಗುರುಗಳು ಜೀವಂತ ಇದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ. ತುಳಸಿ ದಳ ಬೇರು ಬಿಡೋದು ವೈಜ್ಞಾನಿಕವಾಗಿ ಅಸಾಧ್ಯ. ಇದು ಗುರುಗಳ ಅನುಗ್ರಹ” ಎಂದು ಭಕ್ತರೊಬ್ಬರು ಹೇಳಿದರು. ಸದ್ಯ ತುಳಸಿ ಗಿಡವನ್ನು ಮಂದಿರದ ಆವರಣದಲ್ಲೇ ವಿಶೇಷವಾಗಿ ಆರೈಕೆ ಮಾಡಲಾಗುತ್ತಿದೆ. ಭಕ್ತರು ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here