ಚಿನ್ಮಯಿ ಹೆಚ್ ಅವರಿಗೆ ಪ್ರತಿಷ್ಠಿತ ‘ಯೋಗ ರತ್ನ’ ಪ್ರಶಸ್ತಿ ಘೋಷಣೆ

0

ಧರ್ಮಸ್ಥಳ: ಅಂತರಾಷ್ಟ್ರೀಯ ಯೋಗಾಸನ ವಿಜೇತೆ, ಬೆಂಗಳೂರಿನ ಕೆಂಗೇರಿಯ ವಿ.ಎಸ್.ಎಸ್. ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಚಿನ್ಮಯಿ. ಹೆಚ್ ಅವರಿಗೆ ಈ ವರ್ಷದ ಪ್ರತಿಷ್ಠಿತ ‘ಯೋಗ ರತ್ನ’ ಪ್ರಶಸ್ತಿ ಲಭಿಸಿದೆ. ಗಿನ್ನೆಸ್ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಶಾಂತಿವನ ಟ್ರಸ್ಟ್ ಜಂಟಿಯಾಗಿ ಈ ಪ್ರಶಸ್ತಿಯನ್ನು ಪ್ರಕಟಿಸಿವೆ.

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಯೋಗ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಶಾಂತಿವನ ಟ್ರಸ್ಟ್ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಬಾರಿ ದೇಶ-ವಿದೇಶಗಳಲ್ಲಿ ಯೋಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಚಿನ್ಮಯಿ ಹೆಚ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಜೂನ್ 21ರಂದು ನಡೆಯಲಿರುವ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸುಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಶಾಂತಿವನ ಟ್ರಸ್ಟ್‌ನ ಅಧ್ಯಕ್ಷರಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಾಧಕ ವಿದ್ಯಾರ್ಥಿನಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಯೋಜನೆಯ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here