







ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾರಾವಿ ಸಮೀಪದ ಕುತ್ಲೂರಿನ ಸುಂದರಿ ಸಹಿತ ಹಲವು ನಕ್ಸಲರು ಶರಣಾಗತರಾಗಿ ಒಂದು ವರ್ಷ ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಅವರ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪ ಕೇಳಿ ಬರುತ್ತಿದೆ. ನಕ್ಸಲ್ ಮುಕ್ತ ಕರ್ನಾಟಕ ಘೋಷಣೆ ಮಾಡಿದ್ದರೂ ಶಸ್ತ್ರಾಸ್ತ್ರ ತ್ಯಜಿಸಿದ ನಕ್ಸಲ್ ಹೋರಾಟಗಾರರು ಜೈಲಿನಲ್ಲೇ ಕೊಳೆಯುತ್ತಿದ್ದರೂ ಅವರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಆ ಮೂಲಕ ಕಾನೂನಿಗೆ ತಲೆ ಬಾಗಿದ ನಮ್ಮವರನ್ನು ಸರ್ಕಾರ ನಡು ನೀರಿನಲ್ಲಿ ಕೈ ಬಿಟ್ಟಿತಾ ಎಂಬ ಆತಂಕಕ್ಕೆ ಅವರ ಮನೆಯವರು ಒಳಗಾಗಿದ್ದಾರೆ. ೨೦೨೫ರ ಜನವರಿ ೮ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲ್ ಹೋರಾಟಗಾರರಿಗೆ ನೀಡಿದ್ದ ಭರವಸೆಗಳು ಈಡೇರದೆ ಕಾನೂನು ಪ್ರಕ್ರಿಯೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಹೋರಾಟಗಾರರು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಾನೂನಿಗೆ ಗೌರವ ನೀಡಿ ಶಸ್ತ್ರಾಸ್ತ್ರ ತ್ಯಜಿಸಿ ಸಂವಿಧಾನದ ಪ್ರತಿ ಹಿಡಿದು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕಾಗಿ ಶರಣಾಗಿದ್ದ ನಕ್ಸಲ್ ಹೋರಾಟಗಾರರ ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹ ವ್ಯಕ್ತವಾಗಿದೆ.
ಶರಣಾಗಿದ್ದ ನಕ್ಸಲರು: ನಟೋರಿಯಸ್ ನಕ್ಸಲ್ ನಾಯಕನಾಗಿದ್ದ ವಿಕ್ರಂ ಗೌಡನನ್ನು ಆತನದೇ ಊರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲ್ನಲ್ಲಿ ಪೊಲೀಸರು ಎನ್ಕೌಂಟರ್ ಮಾಡಿ ಮುಗಿಸಿದ ಬಳಿಕ ನಕ್ಸಲ್ ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರಿಕರ ವೇದಿಕೆ ನೇತೃತ್ವದಲ್ಲಿ ೨೦೨೫ರ ಜ. ೮ರಂದು ನಕ್ಸಲ್ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ.ವಸಂತ, ಕೇರಳದ ಟಿ.ಎನ್. ಜಿಷಾ ಸೇರಿದಂತೆ ಆರು ನಕ್ಸಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶಸ್ತಾಸ್ತ್ರ ತ್ಯಜಿಸಿ ಶರಣಾಗಿದ್ದರು. ಆ ಬಳಿಕ ಕೋಟೆಹೊಂಡ ರವೀಂದ್ರ ಮತ್ತು ತೊಂಬಟ್ಟು ಲಕ್ಷ್ಮಿ ಶರಣಾಗತಿಯಾಗಿದ್ದರು. ಅದೇ ವೇಳೆ ರಾಜ್ಯವನ್ನು ನಕ್ಸಲ್ ಮುಕ್ತ ಎಂದು ಸರ್ಕಾರ ಘೋಷಿಸಿತ್ತು. ಶರಣಾದವರಿಗೆ ಎ ವರ್ಗದ ಪ್ರಕರಣಗಳಿಗೆ ೭.೫೦ ಲಕ್ಷ ರೂ. ಮತ್ತು ಬಿ ವರ್ಗಕ್ಕೆ ೪ ಲಕ್ಷ ರೂ. ಆರ್ಥಿಕ ನೆರವನ್ನು ಮೂರು ಹಂತಗಳಲ್ಲಿ ನೀಡುವುದಾಗಿ ಸರ್ಕಾರ ಹೇಳಿತ್ತು. ಶಸ್ತ್ರಾಸ್ತ್ರ ಡಂಪ್ ಪತ್ತೆಗೆ ಮಾಹಿತಿ ನೀಡಿದರೆ ಪ್ರತ್ಯೇಕ ಪ್ರೋತ್ಸಾಹ ಧನದ ಭರವಸೆಯೂ ಸಿಕ್ಕಿತ್ತು. ಅಷ್ಟೇ ಅಲ್ಲದೆ ಶರಣಾಗತರ ವಿವಿಧ ಬೇಡಿಕೆಗಳಿಗೆ ಅನುಸಾರವಾಗಿ ಪ್ರತ್ಯೇಕ ಬೇಡಿಕೆಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಜತೆಗೆ ಶರಣಾದ ಆಯಾ ನಕ್ಸಲರ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವುದಾಗಿಯೂ ಸರ್ಕಾರ ಒಪ್ಪಿಕೊಂಡಿತ್ತು.


ವಿಶೇಷ ನ್ಯಾಯಾಲಯ ಇನ್ನೂ ಇಲ್ಲ: ಎಲ್ಲ ನಕ್ಸಲರ ಮೇಲಿನ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಭರವಸೆಯನ್ನು ಸರ್ಕಾರ ಆ ವೇಳೆ ನೀಡಿತ್ತು. ಆದರೆ ಈವರೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಿಲ್ಲ. ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ ದಿನ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯೂ ಆಗಿತ್ತು. ಅಂದಿನಿಂದ ಅವರು ಜೈಲಿನ ಕತ್ತಲ ಕೋಣೆಯಲ್ಲೇ ಇದ್ದಾರೆ.
ಕಾಡಿನಿಂದ ನಾಡಿಗೆ ಮರಳಿ ಬಂದು ಶರಣಾಗಿ ಒಂದು ವರ್ಷ ಮೂರು ತಿಂಗಳು ಕಳೆದರೂ ಅಷ್ಟೂ ನಕ್ಸಲರು ಜಾಮೀನು ಸಿಗದೆ ಜೈಲಿನಲ್ಲೇ ಇದ್ದಾರೆ. ಕರ್ನಾಟಕದ ಜತೆಗೆ ಕೇರಳಂ, ತಮಿಳುನಾಡಿನಲ್ಲೂ ಯುಎಪಿಎ ರೀತಿಯ ಗಂಭೀರ ಪ್ರಕರಣಗಳು ದಾಖಲಾಗಿವೆ. ಎಲ್ಲ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಿದರೆ ಆಕ್ಷೇಪ ಇಲ್ಲ ಎಂದು ಸರ್ಕಾರ ಭರವಸೆ ನೀಡಿತ್ತಾದರೂ ಪ್ರಕ್ರಿಯೆ ಆಮೆಗತಿಯಲ್ಲಿದೆ. ಪುಟ್ಟ ಆಶ್ವಾಸನೆಯೂ ಬೇಗ ಈಡೇರಿಲ್ಲ ಎಂದು ನಕ್ಸಲ್ ಹೋರಾಟ ಸಮಿತಿಯ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ. ಮುಂಡಗಾರು ಲತಾ ವಿರುದ್ಧ ರಾಜ್ಯದಲ್ಲಿ ೬೫, ವನಜಾಕ್ಷಿ ವಿರುದ್ಧ ೨೫, ಸುಂದರಿ ಕುತ್ಲೂರು ವಿರುದ್ಧ ೨೩, ಮಾರೆಪ್ಪ ಆರೋಲಿ ವಿರುದ್ಧ ೧೩ ಪ್ರಕರಣಗಳಿದೆ. ಈ ಎಲ್ಲಾ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯದ ಸ್ಥಾಪನೆ ಆಗಬೇಕಿತ್ತಾದರೂ ಅದರ ಪ್ರಕ್ರಿಯೆ ಇನ್ನೂ ನಡೆದಿಲ್ಲ.
ಪ್ರಮುಖ ಬೇಡಿಕೆ ಈಡೇರಿಲ್ಲ: ಶರಣಾಗುವ ವೇಳೆ ನಕ್ಸಲರು ೧೮ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಎಲ್ಲವನ್ನೂ ಈಡೇರಿಸುವ ಭರವಸೆ ಸಿಕ್ಕಿತ್ತಾದರೂ ಕೆಲವೇ ಬೇಡಿಕೆಗಳು ಈಡೇರಿವೆ. ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಿದ್ದು ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ೨೦೨೫-೨೬ನೇ ಸಾಲಿನ ಬಜೆಟ್ನಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ ೧೦ ಕೋಟಿ ರೂ. ಘೋಷಿಸಲಾಗಿತ್ತು. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ೭.೧೨ ಕೋಟಿ ರೂ., ಉಡುಪಿ ಜಿಲ್ಲೆಗೆ ೨ ಕೋಟಿ ರೂ. ಬಿಡುಗಡೆ ಯಾಗಿದೆ. ಶರಣಾದ ನಕ್ಸಲರ ಸ್ವಯಂ ಉದ್ಯೋಗಕ್ಕೆ ೨೭.೧೦ ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ.








