ಹೆದ್ದಾರಿಗಳಲ್ಲಿ ಅನಧಿಕೃತ ಟೋಲ್ ಮೂಲಕ ಜನಸಾಮಾನ್ಯರ ಸುಲಿಗೆ: ಮಾಜಿ ಸಚಿವ ರಮಾನಾಥ ರೈ

0

ಬೆಳ್ತಂಗಡಿ: ಜಿಲ್ಲೆಯ ಹೆದ್ದಾರಿಗಳಲ್ಲಿ ನಿಯಮಬಾಹಿರವಾಗಿ ಅನಧಿಕೃತ ಟೋಲ್ ಗೇಟ್ ಗಳನ್ನು ನಿರ್ಮಾಣ ಮಾಡಿ ಕೇಂದ್ರ ಸರ್ಕಾರವು ಜನರನ್ನು ಸುಲಿಗೆ ಮಾಡಲು ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಜನರನ್ನು ಸುಲಿಗೆ ಮಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಏಪ್ರಿಲ್ 28 ರಂದು ಬಿ.ಸಿ ರೋಡ್ ಶ್ರೀ ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೊಟ್ಲು ಟೋಲ್ ಗೇಟ್ ತನಕ ನಡೆಯಲಿರುವ ‘ಜನಾಂದೋಲನ ನಡಿಗೆ’ಯ ಪೂರ್ವಭಾವಿ ಸಭೆಯ ಬಳಿಕ ಅವರು ಈ ಹೇಳಿಕೆ ನೀಡಿದರು.

ಒಂದು ಟೋಲ್ ಗೇಟ್ ನಿಂದ ಮತ್ತೊಂದಕ್ಕೆ ಕನಿಷ್ಠ 60 ಕಿ.ಮೀ ಅಂತರವಿರಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ.ಈಗಾಗಲೇ ತಲಪಾಡಿ, ಪಡುಬಿದ್ರೆ, ಬ್ರಹ್ಮರಕೊಟ್ಲುಗಳಲ್ಲಿ ನಿಯಮ ಮೀರಿ ಟೋಲ್ ಕಾರ್ಯನಿರ್ವಹಿಸುತ್ತಿವೆ. ಇದರ ಬೆನ್ನಲ್ಲೇ ಬೆಳ್ತಂಗಡಿಯ ಪಣಕಜೆ, ಉಪ್ಪಿನಂಗಡಿ ಸಮೀಪದ ಬಜೆತ್ತೂರು ಮತ್ತು ವಾಮಂಜೂರಿನಲ್ಲಿ ಹೊಸ ಟೋಲ್ ಗೇಟ್ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ ಎಂದು ರೈ ಆರೋಪಿಸಿದರು.

ಅಕ್ರಮ ಟೋಲ್ ಗೇಟ್ ಗಳ ವಿರುದ್ಧ ನಿರಂತರ ಹೋರಾಟದ ಭಾಗವಾಗಿ ಏ.28 ರಂದು ನಡೆಯುವ ಪಾದಯಾತ್ರೆಯಲ್ಲಿ ಬೆಳ್ತಂಗಡಿ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಲ ಮತ್ತು ನಾಗೇಶ್ ಕುಮಾರ್ ಗೌಡ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here