ವಿಘ್ನೇಶ್ ಸಿಟಿ ಬಿಲ್ಡಿಂಗ್ ಎದುರಿನ ಚರಂಡಿ ಮುಚ್ಚದ ವಿಚಾರ: ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂತೋಷ್ ಲಾಯಿಲ: ಪ.ಪಂ. ಮುಖ್ಯಾಧಿಕಾರಿ ರಾಜೇಶ್‌ರನ್ನು ತರಾಟೆಗೆತ್ತಿಕೊಂಡ ಸಚಿವ ದಿನೇಶ್ ಗುಂಡೂರಾವ್: ಹತ್ತು ದಿನದೊಳಗೆ ಚರಂಡಿ ಮುಚ್ಚಲು ಸೂಚನೆ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪಕ್ಕದಲ್ಲಿರುವ ವಿಘ್ನೇಶ್ ಸಿಟಿ ಬಿಲ್ಡಿಂಗ್ ಎದುರಿನ ಚರಂಡಿ ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ. ಅವರನ್ನು ತರಾಟೆಗೆತ್ತಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್ ಅವರು ಹತ್ತು ದಿನದ ಒಳಗಡೆ ಚರಂಡಿ ಮುಚ್ಚುವಂತೆ ಸೂಚನೆ ನೀಡಿದ್ದಾರೆ. ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಲ ಅವರು ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.

ಘಟನೆಯ ವಿವರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಚಿವರೂ ಆಗಿರುವ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಏ. ೧೮ರಂದು ಮಂಗಳೂರಿನಲ್ಲಿರುವ ದ.ಕ. ಜಿ.ಪಂ. ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೆಡಿಪಿ ಸದಸ್ಯರಾಗಿರುವ ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಅವರು ವಿಷಯ ಪ್ರಸ್ತಾಪಿಸಿದ್ದರು. ವಿಘ್ನೇಶ್ ಸಿಟಿ ವಾಣಿಜ್ಯ ಸಂಕೀರ್ಣದ ಎರಡು ಬದಿಯ ಚರಂಡಿ ಸ್ಲಾಬ್ ತೆಗೆದು ಶುಚಿಗೊಳಿಸಲಾಗಿದೆ. ಅಕ್ಕಪಕ್ಕದಲ್ಲಿದ್ದ ಇಂಟರ್‌ಲಾಕ್ ತೆಗೆಯಲಾಗಿದೆ. ಪಟ್ಟಣ ಪಂಚಾಯತ್ ಚರಂಡಿ ಓಪನ್ ಮಾಡಿ ಸ್ವಚ್ಛಗೊಳಿಸಿದೆ. ಬಳಿಕ ಚರಂಡಿ ಮುಚ್ಚದೆ ಹಾಗೆಯೇ ಬಿಟ್ಟಿದೆ. ಚರಂಡಿ ಮುಚ್ಚುವುದು ನಮ್ಮ ಕೆಲಸವಲ್ಲ. ಅದನ್ನು ಕಟ್ಟಡ ಮಾಲಕರೇ ಮಾಡಬೇಕು ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ನಮ್ಮ ಕೆಲಸವಲ್ಲ. ನಮಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಪಟ್ಟಣ ಪಂಚಾಯತ್‌ನ ಜವಾಬ್ದಾರಿ ಎಂದು ಕಟ್ಟಡ ಮಾಲಕರು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಪಟ್ಟಣ ಪಂಚಾಯತ್ ಹಾಗೂ ಕಟ್ಟಡದಲ್ಲಿರುವ ಬಾಡಿಗೆದಾರರ ಹಾಗೂ ಮಾಲಕರ ನಡುವಿನ ಜಟಾಪಟಿ ತೀವ್ರಗೊಂಡಿದೆ. ಅಂಗಡಿ ಮಾಲಕರು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪಟ್ಟಣ ಪಂಚಾಯತ್ ಕಚೇರಿಗೆ ಹೋಗಿ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆಯೂ ನಡೆದಿದೆ. ಹೀಗೆ ಬೆಳ್ತಂಗಡಿಯ ವಿಘ್ನೇಶ್ ಸಿಟಿ ಕಟ್ಟಡ ಸಮೀಪದ ತೆರೆದ ಚರಂಡಿ ವಿಚಾರ ಬಗ್ಗೆ ತಾಲೂಕಿನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ ಎಂದು ಸಂತೋಷ್ ಕುಮಾರ್ ಲಾಯಿಲ ಅವರು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿ ವಿಷಯ ಪ್ರಸ್ತಾಪ ಮಾಡಿದ್ದರು.

ವಿಘ್ನೇಶ್ ಬಿಲ್ಡಿಂಗ್ ಎದುರು ಚರಂಡಿ ಮುಚ್ಚದೆ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಕಟ್ಟಡದ ಮುಂಭಾಗದಲ್ಲಿರುವ ವಾಹನ ನಿಲುಗಡೆ ಪ್ರದೇಶಕ್ಕೆ ಹೋಗಲಾಗದೆ ದಾರಿಯಲ್ಲಿಯೇ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ನ್ಯಾಯಾಲಯಕ್ಕೆ, ತಾಲೂಕು ಕಚೇರಿಗೆ ಹೋಗಲು ಕಷ್ಟವಾಗುತ್ತಿದೆ ಎಂದು ಸಂತೋಷ್ ಕುಮಾರ್ ಅವರು ಹಿಂದಿನ ಮತ್ತು ಈಗಿನ ಫೋಟೋಗಳನ್ನು ತೋರಿಸಿ ಇದರ ಬಗ್ಗೆ ಕ್ರಮ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಸ್ಪಂದಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ. ರಾಜೇಶ್ ಅವರನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರಲ್ಲದೆ ಒಂದು ವರ್ಷವಾದರೂ ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಬಳಿಕ ವಿಘ್ನೇಶ್ ಸಿಟಿ ಬಿಲ್ಡಿಂಗ್ ಎದುರು ಇಕ್ಕೆಲದಲ್ಲಿರುವ ಚರಂಡಿಯನ್ನು ಹತ್ತು ದಿನದೊಳಗೆ ಮುಚ್ಚಬೇಕು ಎಂದು ಸಚಿವರು ಮುಖ್ಯಾಧಿಕಾರಿ ರಾಜೇಶ್‌ಗೆ ಸೂಚಿಸಿದರು. ಶಾಸಕ ಹರೀಶ್ ಪೂಂಜ ಸಹಿತ ಹಲವು ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here