







ಬೆಳ್ತಂಗಡಿ: ತಾಲೂಕಿನ ವಿವಿಧ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಶಿಶಿಲ ಸೇತುವೆ ಕಾಮಗಾರಿ: ಶಿಶಿಲ ಗ್ರಾಮದ ಕಪಿಲ ನದಿಗೆ ಸೇತುವೆ ನಿರ್ಮಿಸಲು ಮುಖ್ಯಮಂತ್ರಿಯವರ ಟಿಪ್ಪಣಿ ಮೇರೆಗೆ ಈಗಾಗಲೇ 275 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಇಲಾಖೆಯ ಅಂದಾಜಿನಂತೆ ಈ ಕಾಮಗಾರಿಗೆ ಒಟ್ಟು 499.36 ಲಕ್ಷ ರೂ. ಅಗತ್ಯವಿದ್ದು, ಬಾಕಿ ಇರುವ ಹೆಚ್ಚುವರಿ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.


ಪ್ರಮುಖ ರಸ್ತೆಗಳ ಅಭಿವೃದ್ಧಿ: ಅತೀ ಅವಶ್ಯವಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಅಭಿವೃದ್ಧಿ, ನಾರಾವಿ-ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ (ಕಿ.ಮೀ 0.80 ರಿಂದ 9.10) ಮತ್ತು ಬದ್ಯಾರು-ಸವಣಾಲು ರಸ್ತೆ (ಕಿ.ಮೀ 3.00 ರಿಂದ 6.80) ಅಭಿವೃದ್ಧಿಗೆ ಅನುದಾನ ಕೋರಲಾಗಿದೆ.
ಕಾಂಕ್ರೀಟ್ ರಸ್ತೆ ಮತ್ತು ಕಾಲುಸಂಕ: ದಿಡುಪೆ-ಸಂಸೆ ರಸ್ತೆಯ 9 ಕಿ.ಮೀ ವರೆಗೆ ಕಾಂಕ್ರೀಟೀಕರಣ, ಚಾರ್ಮಾಡಿ ಗ್ರಾಮದ ಕುಂಡೊಟ್ಟು ಬಳಿ ಕಾಲುಸಂಕ ಹಾಗೂ ತೋಟತ್ತಾಡಿ ಗ್ರಾಮದ ದಡ್ಡು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ.
ವಸತಿಗೃಹ ನಿರ್ಮಾಣ: ಬೆಳ್ತಂಗಡಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳಿಗಾಗಿ ನೂತನ ವಸತಿಗೃಹಗಳನ್ನು ನಿರ್ಮಿಸುವಂತೆ ರಕ್ಷಿತ್ ಶಿವರಾಂ ಸಚಿವರ ಗಮನ ಸೆಳೆದಿದ್ದಾರೆ.ಈ ಎಲ್ಲಾ ಬೇಡಿಕೆಗಳನ್ನು ಆಲಿಸಿದ ಲೋಕೋಪಯೋಗಿ ಸಚಿವರು ಪೂರಕವಾಗಿ ಸ್ಪಂದಿಸಿದ್ದು, ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.









