ದಲಿತ ಕಾಲನಿಗಳ ಅಭಿವೃದ್ಧಿ ಬಜೆಟ್‌ನಲ್ಲಿ ಮಾತ್ರವೇ? ಲಾಯಿಲಬೈಲು ರಸ್ತೆಯ ಕರುಣಾಮಯ ಕಥೆ!

0

ಬೆಳ್ತಂಗಡಿ: ತಾಲೂಕು ಕೇಂದ್ರದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದ್ದರೂ, ಲಾಯಿಲ ಗ್ರಾಮದ ಒಂದು ಪ್ರಮುಖ ರಸ್ತೆ ಇಂದಿಗೂ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದೆ.

80ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುವ ಈ ಪ್ರದೇಶದ ರಸ್ತೆ ಪರಿಸ್ಥಿತಿ ಈಗ ‘ಅಸ್ತಿಪಂಜರ’ದಂತಾಗಿದ್ದು, ಇಲ್ಲಿನ ಜನರ ಬದುಕು ಅಕ್ಷರಶಃ ನರಕಸದೃಶವಾಗಿದೆ.

ಡಾಮರು ಕಂಡಿದ್ದೇ 40 ವರ್ಷಗಳ ಹಿಂದೆ!:ಲಾಯಿಲ ಸ್ಮಶಾನದಿಂದ ಲಾಯಿಲಬೈಲು ಮಾರ್ಗವಾಗಿ ಚಂದ್ಕೂರು ದೇವಸ್ಥಾನದವರೆಗೆ ಸಂಪರ್ಕಿಸುವ ಸುಮಾರು 3.5 ಕಿ.ಮೀ ಉದ್ದದ ಈ ರಸ್ತೆ ಇಂದು ಸಂಪೂರ್ಣ ಹದಗೆಟ್ಟಿದೆ. ಸುಮಾರು 40 ವರ್ಷಗಳ ಹಿಂದೆ ಕೇವಲ ಒಂದು ಕಿ.ಮೀ ಉದ್ದಕ್ಕೆ ಡಾಮರೀಕರಣ ಮಾಡಲಾಗಿತ್ತು. ಇಂದು ಆ ಡಾಮರು ಸಂಪೂರ್ಣ ಕಿತ್ತುಹೋಗಿದ್ದು, ಕೇವಲ ಜಲ್ಲಿಕಲ್ಲುಗಳು (ಅಸ್ತಿಪಂಜರ) ಮಾತ್ರ ಉಳಿದಿವೆ. ಇದು ಈ ಹಿಂದೆ ರಸ್ತೆ ಇತ್ತು ಎಂಬುದಕ್ಕೆ ಇರುವ ಏಕೈಕ ಸಾಕ್ಷಿ.

ಮಳೆಗಾಲದಲ್ಲಿ ‘ಕೆಸರು ನೀರಿನ ಅಭಿಷೇಕ‘ಪ್ರತಿದಿನ ನೂರಾರು ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಮಳೆಗಾಲದಲ್ಲಿ ಈ ರಸ್ತೆಯ ದೃಶ್ಯ ಭಯಾನಕವಾಗಿರುತ್ತದೆ.ರಸ್ತೆಯಲ್ಲಿ ಕೆಸರು ತುಂಬಿರುವುದರಿಂದ ವಾಹನಗಳು ನಿಯಂತ್ರಣ ತಪ್ಪಿ ಚಲಿಸುತ್ತವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ವಾಹನಗಳಿಂದ ಸಿಡಿಯುವ ಕೆಸರು ನೀರಿನ ‘ಅಭಿಷೇಕ’ ಗ್ಯಾರಂಟಿ ಎನ್ನುವಂತಾಗಿದೆ.ಚಂದ್ಕೂರು ದೇವಸ್ಥಾನಕ್ಕೂ ಇದೇ ಹತ್ತಿರದ ದಾರಿ1996ರಲ್ಲಿ ಅಂದಿನ ಪ್ರಧಾನಿ ಹೆಚ್.ಡಿ. ದೇವೇಗೌಡರು ಲೋಕಕಲ್ಯಾಣಕ್ಕಾಗಿ ಯಾಗ ನಡೆಸಿದ ಐತಿಹಾಸಿಕ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಂದ್ಕೂರು ಇಲ್ಲಿಗೆ ಬೆಳ್ತಂಗಡಿಯಿಂದ ಅತಿ ಹತ್ತಿರದ ದಾರಿ ಇದೇ ಆಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೂ ಈ ಹದಗೆಟ್ಟ ರಸ್ತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಜೆಟ್ ಹಣ ಎಲ್ಲಿ ಹೋಗುತ್ತಿದೆ?ಸರಕಾರಗಳು ಪ್ರತಿ ವರ್ಷ ದಲಿತರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುತ್ತವೆ. ಆದರೆ ವಾಸ್ತವದಲ್ಲಿ ಆ ಅನುದಾನ ಅರ್ಹ ಪ್ರದೇಶಗಳಿಗೆ ತಲುಪುತ್ತಿಲ್ಲ.”ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಶೇ. 65 ರಿಂದ70 ರಷ್ಟು ಮಾತ್ರ ಬಳಕೆಯಾಗುತ್ತಿದೆ. ಉಳಿದ ಹಣವನ್ನಾದರೂ ಇಂತಹ ಅಭಿವೃದ್ಧಿ ವಂಚಿತ ದಲಿತ ಕಾಲನಿಗಳ ರಸ್ತೆಗೆ ಬಳಸಬಾರದೇ?” ಎಂದು ಸ್ಥಳೀಯ ನಿವಾಸಿ ಎಲ್. ಹರೀಶ್ ಕುಮಾರ್ ಲಾಯಿಲಬೈಲು ಆಕ್ರೋಶ ವ್ಯಕ್ತಪಡಿಸಿದ್ದಾರೆ..

LEAVE A REPLY

Please enter your comment!
Please enter your name here