






ಬೆಳ್ತಂಗಡಿ: 2025 – 26ನೇ ಸಾಲಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕೊಡಮಾಡುವ ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪ್ರೊ. ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಭಾಜನರಾಗಿದ್ದಾರೆ.


ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳು ಗೇರುಕಟ್ಟೆಯಲ್ಲಿರುವ ಕಲ್ಲೂರಾಯರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಿದರು. ಕಲ್ಲೂರಾಯರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಹಿರಿಯ ವ್ಯಾಖ್ಯಾನಕಾರರು, ಸಂಸ್ಕೃತ ಪ್ರಾಧ್ಯಾಪಕರು ಡಾ. ಶ್ರೀಧರ ಭಟ್, ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್, ಕಾರ್ಯದರ್ಶಿ ಮೇಧಾ ಅಶೋಕ್, ಪದಾಧಿಕಾರಿಗಳಾದ ರಮೇಶ್ ಮಯ್ಯ ಮತ್ತು ಬಾಸಮೆ ನಾರಾಯಣ ಭಟ್ ಉಪಸ್ಥಿತರಿದ್ದರು. ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಪ್ರೊ. ಮೋಹನ ಕಲ್ಲೂರಾಯರು ತನ್ನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೂ, ಗಮಕದಲ್ಲಿ ತೊಡಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದಗಳನ್ನು ಸಲ್ಲಿಸಿದರು. ತನ್ನ ಸಾಧನೆಯ ಹಿಂದೆ ತನ್ನ ಮಾರ್ಗದರ್ಶನಕ್ಕೆ ಓಗೊಟ್ಟು ಗಮಕ ಕ್ಷೇತ್ರದಲ್ಲಿ ಶ್ರಮಿಸಿದ ಜಿಲ್ಲೆಯ ಪ್ರತಿಯೊಬ್ಬರಿಗೂ ಪ್ರಶಸ್ತಿಯನ್ನು ಅರ್ಪಿಸುತ್ತೇನೆ ಎಂದು ಕೃತಜ್ಞತೆಯನ್ನು ಸಲ್ಲಿಸಿದರು. ಪರಿಷತ್ತಿನ ತಾಲೂಕು ಕೋಶಾಧಿಕಾರಿ ಸುವರ್ಣ ಕುಮಾರಿ ಕಲ್ಲೂರಾಯ ಎಲ್ಲರಿಗೂ ವಂದಿಸಿದರು.









