






ಕಳೆಂಜ, ಮಾ.15: ದಿವಂಗತ ಡಾ. ಟಿ.ವಿ. ಜೋಸೆಫ್ ಅವರ 41ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ (ರಿ.) ವತಿಯಿಂದ ಶ್ರದ್ಧಾಂಜಲಿ ಸಭೆ ಹಾಗೂ ಚಿಕಿತ್ಸಾ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಕಳೆಂಜದ ಸೇಂಟ್ ಸೆಬಾಸ್ಟಿಯನ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು.ಸಭೆಗೆ ಮುನ್ನ ಕಾಯರ್ತಡ್ಕ–ಶಿಬರಾಜೆ ರಸ್ತೆಗೆ “ಡಾ. ಟಿ.ವಿ. ಜೋಸೆಫ್ ರಸ್ತೆ” ಎಂದು ನಾಮಕರಣ ಮಾಡಿ ನಾಮಫಲಕವನ್ನು ಅಕ್ರಮ–ಸಕ್ರಮ ಸಮಿತಿ ಬೆಳ್ತಂಗಡಿ ತಾಲೂಕಿನ ಸದಸ್ಯ ಶ್ರೀಧರ್ ಎಸ್ ಅನಾವರಣಗೊಳಿಸಿದರು.ನಂತರ ನಡೆದ ಸಭೆಯಲ್ಲಿ ದಿವಂಗತ ಡಾ. ಜೋಸೆಫ್ ಅವರ ಸ್ಮರಣಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಅಧ್ಯಕ್ಷ ಅಗಸ್ಟೀನ್ ಟಿ.ಎ ಸ್ವಾಗತ ಮತ್ತು ಪ್ರಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಗಣ್ಯ ಅತಿಥಿಗಳಿಂದ ದೀಪ ಪ್ರಜ್ವಲನೆ ನೆರವೇರಿಸಲಾಯಿತು. CBK ಕಾರುಣ್ಯ ಸ್ಪರ್ಶಂ ಯೋಜನೆಯಡಿ ಸಂಘಟನೆಯಿಂದ ಸಂಗ್ರಹಿಸಲಾದ ₹5,45,971 ಮೊತ್ತವನ್ನು ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ಮಗುವಿನ ತಂದೆ ಬಿಜು ಪಟ್ಟತ್ತಾನಂ ಅವರಿಗೆ ಹಸ್ತಾಂತರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಳೆಂಜ ಹಾಗೂ ಬಟ್ಯಾಲ್ ಧರ್ಮಗುರು ಫಾ. ಸುನಿಲ್ ಪೂವತಿಂಗಲ್ ಮಾತನಾಡಿ, ಡಾ. ಜೋಸೆಫ್ ಅವರ ಸೇವಾ ಮನೋಭಾವ ಹಾಗೂ ಮಾನವೀಯತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಗೌರವಾಧ್ಯಕ್ಷ ಸೆಬಾಸ್ಟಿಯನ್ ಪಿ.ಟಿ ಅವರು ಡಾ. ಜೋಸೆಫ್ ಅವರ ಸೇವಾ ಜೀವನವನ್ನು ಸ್ಮರಿಸಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಮೋದ್ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.ಅತಿಥಿಗಳಾಗಿ ಕೃಷ್ಣಪ್ಪ (ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ), ಪದ್ಮನಾಭ ಗೌಡ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ನಿಡ್ಲೆ), ಚಂದ್ರಶೇಖರ ಗೌಡ (ಅಸಿಸ್ಟೆಂಟ್ ಪ್ರಿನ್ಸಿಪಾಲ್, ಅಭ್ಯಾಸ್ ಕಾಲೇಜು, ಕಾಶಿಬೆಟ್ಟು) ಸೇರಿದಂತೆ ಹಲವು ಗಣ್ಯರು ಮಾತನಾಡಿ ಡಾ. ಜೋಸೆಫ್ ಅವರ ಸೇವಾ ಜೀವನವನ್ನು ಕೊಂಡಾಡಿದರು.ಸಾರ್ವಜನಿಕ ಅಭಿಮಾನಿ ಬಳಗದ ಪರವಾಗಿ ಶ್ರೀಧರ್ ರಾವ್ (ಆಡಳಿತ ಮೊಕ್ತೇಸರು, ಸದಾಶಿವೇಶ್ವರ ದೇವಸ್ಥಾನ ಕಳೆಂಜ), ಸಲಿಮೋನ್ ಪುದುವೆಟ್ಟು, ಲಕ್ಷ್ಮಣ ಗೌಡ ಪಾಂಗಳ, ಶೆರ್ಲೀ ಶಿಬು (ನರ್ಸಿಂಗ್ ಸೂಪರಿಡೆಂಟ್, SDM ಆಸ್ಪತ್ರೆ ಉಜಿರೆ) ಹಾಗೂ ಜಾರ್ಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಗಂಗಾಧರ ಭಂಡಾರಿ, ಪ್ರೇಮ (ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಕಳೆಂಜ), ಪ್ರಸನ್ನ (ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಕಳೆಂಜ), ಆನಂದ ಗೌಡ (ಅಧ್ಯಕ್ಷರು, ಉಮಾಮಹೇಶ್ವರ ದೇವಸ್ಥಾನ ಕಳೆಂಜ), ಸಂತೋಷ ಕುಮಾರ್ ಜೈನ್ (ಅಧ್ಯಕ್ಷರು, ಗ್ರಾಮಾಭ್ಯುದಯ ಅನುಷ್ಠಾನ ಸಮಿತಿ ಶಿಬರಾಜೆ), ಗಫೂರ್ (ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಪುದುವೆಟ್ಟು), ರೋಯಿ (ಮಾಜಿ ಸದಸ್ಯರು, ಗ್ರಾಮ ಪಂಚಾಯತ್ ಪುದುವೆಟ್ಟು), ಆನಂದ ಕೃಷ್ಣ ನೂಜಿಲ ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.ಸಹಾಯಧನ ಸ್ವೀಕರಿಸಿದ ಮಗುವಿನ ತಂದೆ ಬಿಜು ಪಟ್ಟತ್ತಾನಂ ಅವರು ಸಹಾಯ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಸಂಘದ ಗೌರವ ಸಲಹೆಗಾರ ಜೋಸೆಫ್ ಕೆ.ಡಿ ಧನ್ಯವಾದ ಅರ್ಪಿಸಿದರು. ಸಂಘದ ಕಾರ್ಯದರ್ಶಿ ಶಿಜೋ ಜೋಸೆಫ್ ಕಾರ್ಯಕ್ರಮವನ್ನು ನಿರೂಪಿಸಿದರು.ನಂತರ ಅಭಿಮಾನಿಗಳು ಹಾಗೂ ಸಾರ್ವಜನಿಕರು ದಿವಂಗತ ಡಾ. ಟಿ.ವಿ. ಜೋಸೆಫ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.









