







ಉಜಿರೆ,ದಿ.ಮಾ. 11: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಸಹಯೋಗದಲ್ಲಿ ಕಾಲೇಜಿನ ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾದ ವತಿಯಿಂದ ”ಬರೋಡಾ ಅಚೀವರ್ಸ್ ಅವಾರ್ಡ್ -2026′ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದ ಬ್ಯಾಂಕ್ ಆಫ್ ಬರೋಡಾ ಪುತ್ತೂರು ಶಾಖೆಯ ಉಪ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್ ಸಿ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭೆ ಮತ್ತು ಕೌಶಲ್ಯದ ಜೊತೆಗೆ ಬದುಕಿನ ಶಿಸ್ತು ಅತೀ ಮುಖ್ಯ. ಇದು ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಜೊತೆಗೆ ಉನ್ನತ ಮಟ್ಟದ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ವಿದ್ಯಾರ್ಥಿ ಜೀವನದಲ್ಲಾಗುವ ತಪ್ಪುಗಳೇ ಹೊಸ ಯೋಚನೆ ಮತ್ತು ಯೋಜನೆಗಳನ್ನು ಕೈಗೊಳ್ಳಲು ಪ್ರೇರಣೆ. ಇದು ಸಾಧನೆಯೆಡಗಿನ ಹೊಸ ಚೈತನ್ಯವನ್ನು ಜಾಗೃತಗೊಳಿಸುವ ಜೊತೆಗೆ ನಮ್ಮೊಳಗಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ಸ್ವ ನಂಬಿಕೆ ಮತ್ತು ಸ್ವ ಪ್ರಯತ್ನವೇ ಆತ್ಮವಿಶ್ವಾಸದ ಅಡಿಪಾಯ.


ಪ್ರತಿ ದಿನದ ಆರಂಭ ಸಕಾರಾತ್ಮಕ ಚಿಂತನೆಗಳಿಂದ ಕೂಡಿದಾಗ ಯಶಸ್ಸಿನ ಫಲ ನಮ್ಮದಾಗುತ್ತದೆ ಎಂದರು.ಎಸ್.ಡಿ.ಎಂ ಸಂಸ್ಥೆಯೊಂದಿಗೆ ಬ್ಯಾಂಕ್ ಆಫ್ ಬರೋಡಾದ ಅನೇಕ ದಶಕಗಳಿಂದ ನಿರಂತರವಾದ ಸಂಬಂಧ ಹೊಂದಿದೆ. ವಿದ್ಯಾರ್ಥಿ ಸಮೂಹ ನಿರಂತರ ಕಠೀಣ ಪರಿಶ್ರಮ ಮತ್ತು ಸೀಮಿತ ವರ್ಗದಿಂದ ಹೊರಬರದಿದ್ದರೆ ಸಾಧನೆಯ ಹಾದಿ ತಲುಪುವುದಿಲ್ಲ. ಇತ್ತೀಚಿಗಿನ ತಾಂತ್ರಿಕ ಬದಲಾವಣೆಯಿಂದ ಕೃತಕ ಬುದ್ಧಿಮತ್ತೆ ಮುದೊಂದು ದಿನ ಉದ್ಯೋಗ ಕ್ಷೇತ್ರದದ ಬಹುತೇಕ ಸ್ಥರಗಳನ್ನು ಆವರಿಸಿಕೊಳ್ಳಲಿದೆ. ಇಂತಹ ಮುಂಬರುವ ಸನ್ನಿವೇಶಗಳನ್ನು ಎದುರಿಸಲು ವಿದ್ಯಾರ್ಥಿಗಳು ಸನ್ನದ್ಧರಾಗುವ ಜೊತೆಗೆ ತಾಂತ್ರಿಕವಾಗಿ ಸದೃಢರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಕೌಶಲ್ಯವನ್ನು ಕಾರ್ಯರೂಪಕ್ಕೆ ತಂದಾಗ ತಮ್ಮ ವ್ಯಕ್ತಿತ್ವದ ನಿರ್ಮಾಣ ಸಾಧ್ಯವಾಗುತ್ತದೆ. ಸಂಸ್ಥೆಯೂ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಎಲ್ಲಾ ರೀತಿಯ ವ್ಯವಸ್ಥೆಗಳು ಹಾಗು ಮಾರ್ಗದರ್ಶನವನ್ನು ನೀಡುತ್ತಾ ಬಂದಿದೆ. ಇದನ್ನು ನಿರಂತರವಾಗಿ ಬಳಸಿಕೊಂಡು ಬದುಕು ಕಟ್ಟಿಕೊಳ್ಳಬೇಕು.ಜೀವನದಲ್ಲಿ ಶಿಸ್ತು ಮತ್ತು ಕಾರ್ಯ ಬದ್ಧತೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಉದ್ದೇಶ ಮತ್ತು ಆಶಯ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ತಲುಪಿಸುವುದು ಜೊತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವುದು. ಈ ಮೂಲಕ ವಿದ್ಯಾರ್ಥಿಗಳನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸಿ, ಉನ್ನತ ಸಾಧನೆ ಮಾಡುವತ್ತಾ ಪ್ರೋತ್ಸಾಹಿಸುವುದು ಎಂದರು.ಬಳಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನಲ್ಲಿ ಶೈಕ್ಷಣಿಕ ಹಾಗು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಒಟ್ಟು 8 ವಿದ್ಯಾರ್ಥಿಗಳಿಗೆ ಸುಮಾರು 1 ಲಕ್ಷದ ನಲವತ್ತು ಸಾವಿರ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಸಂಸ್ಥೆಯ ವತಿಯಿಂದ ಅತಿಥಿಗಳಾದ ಅಮಿತ್ ಸಿ ಶೆಟ್ಟಿರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ ಬ್ಯಾಂಕ್ ನ ಅವಕಾಶ ಮತ್ತು ಉಪಯೋಗಗಳ ಕುರಿತು ಮಾಹಿತಿಯನ್ನು ಪರದೆಯ ಮೂಲಕ ಹಂಚಿಕೊಂಡರು.ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಉಪ ಪ್ರಾಂಶುಪಾಲರಾದ ನಂದ ಕುಮಾರಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಕಮಿಟಿಯ ಸಂಯೋಜಕ ಶ್ರೇಯಸ್ ಬಿ, ಉಜಿರೆ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ವಿನಾಯಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ ಪಿ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಐಕ್ಯುಎಸ್ ಸಂಯೋಜಕ ಪ್ರೋ. ಗಜಾನನ ಆರ್ ಭಟ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿವರ್ಗವರು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಬಿಎಸ್ ಸಿ ವಿದ್ಯಾರ್ಥಿನಿ ಅನ್ವಿತಾ ಸೆರಾವೋ ನಿರೂಪಿಸಿ, ಉಪನ್ಯಾಸಕ ಶರಶ್ಚಂದ್ರ ವಂದಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಕಮಿಟಿಯ ಸಂಯೋಜಕ ಶ್ರೇಯಸ್ ಬಿ ಸಂಯೋಜಿಸಿದರು. ಉಪನ್ಯಾಸಕಿ ಮಂಜುಳಾ ಸಹಕರಿಸಿದರು.1.4 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ : ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿಕ್ರೀಡಾ ಕ್ಷೇತ್ರದಿಂದ ತೃತೀಯ ವರ್ಷದ ಬಿಎ ವಿದ್ಯಾರ್ಥಿನಿ ಸ್ವಪ್ನ ವೈ ಜೆ, ಸರ್ವಾಂಗೀಣ ಸಾಧಕಿ ಯಾಗಿ ಪ್ರಥಮ ವರ್ಷದ ಎಂಎಸ್ ಸಿ ಸೈಕಾಲಜಿ ವಿದ್ಯಾರ್ಥಿನಿ ಜಿತು ಕೆ ಜೋಜಿ ಹಾಗು ಶೈಕ್ಷಣಿಕ ಸಾಧನೆಗಾಗಿ ಪ್ರಥಮ ವರ್ಷದ ಬಿವೋಕ್ ವಿದ್ಯಾರ್ಥಿನಿ ಅಂಕಿತಾ ಎನ್ ತಲಾ 30,000 ದಂತೆ ಹಾಗು ಇತರೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಧನೆ ತೋರಿದ ತೃತೀಯ ಬಿಎಸ್ ಸಿ ವಿದ್ಯಾರ್ಥಿನಿ ದೀಕ್ಷಿತಾ ಎಚ್ ಎಸ್, ತೃತೀಯ ಬಿಬಿಎ ವಿದ್ಯಾರ್ಥಿ ಪ್ರೀತೇಶ್ , ತೃತೀಯ ಬಿಎ ವಿದ್ಯಾರ್ಥಿ ಅಚಲ್ ಆರ್, ತೃತೀಯ ಬಿಕಾಂ ವಿದ್ಯಾರ್ಥಿನಿ ಧರಿತ್ರೀ ಭೀಡೆ, ದ್ವಿತೀಯ ಬಿಸಿಎ ವಿದ್ಯಾರ್ಥಿ ವಿಶ್ವಾಸ್ ಎಮ್ ಎಮ್ ತಾಲಾ 10,000 ದಂತೆ ವಿದ್ಯಾರ್ಥಿ ವೇತನ ಸ್ವೀಕರಿಸಿದರು.









