







ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ವಿಷಸರ್ಪಗಳ ಓಡಾಟ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೊಂದು ದುರ್ಘಟನೆ ಸಂಭವಿಸಿದೆ. ಹಾವು ಕಡಿತದಿಂದ ಕಾರೆಗುಡ್ಡೆ ನಿವಾಸಿ ಚೋಮ (67) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



ಶಿಶಿಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ವಿಷಸರ್ಪಗಳ ಸಂಚಾರ ಹೆಚ್ಚಾಗಿದ್ದು, ಕೆಲವೊಮ್ಮೆ ಮನೆ ಬಾಗಿಲಿನವರೆಗೂ ಬರುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರಿಗೆ ನಾಗರಹಾವು ಕಚ್ಚಿದ ಘಟನೆಗಳು ನಡೆದಿವೆ.ಇದರಲ್ಲೊಬ್ಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸುಮಾರು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಪುರುಷ ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಪಕ್ಕದ ಶಿಬಾಜೆ ಗ್ರಾಮದಲ್ಲಿಯೂ ಇಂತಹದ್ದೇ ಘಟನೆ ಸಂಭವಿಸಿ ಆ ವ್ಯಕ್ತಿಯೂ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಮಾರ್ಚ್ 3ರಂದು ಶಿಶಿಲ ಗ್ರಾಮದ ಕಾರೆಗುಡ್ಡೆ ನಿವಾಸಿ ಚೋಮ ಅವರು ತಮ್ಮ ತೋಟದಲ್ಲಿ ಬಾಳೆ ಗಿಡಕ್ಕೆ ಮಣ್ಣು ಹಾಕುತ್ತಿದ್ದ ವೇಳೆ ನಾಗರಹಾವು ಕಡಿದಿತ್ತು. ತಕ್ಷಣ ಅವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 8ರಂದು ಆಸ್ಪತ್ರೆಯಲ್ಲೇ ಅವರು ನಿಧನರಾಗಿದ್ದಾರೆ.ಮೃತರು ಪತ್ನಿ ಲಲಿತ, ಪುತ್ರಿ ಅಶ್ವಿತಾ, ಕುಟುಂಬಸ್ಥರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಗ್ರಾಮದಲ್ಲಿ ವಿಷಸರ್ಪಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.









