ಕೊಕ್ಕಡ ಶ್ರೀ ಎಡಪ್ಪಾಡಿ ಮಠ ಶ್ರೀ ಗೋಪಿನಾಥ ದೇವರ ಸನ್ನಿಧಾನದಲ್ಲಿ ಋಕ್ ಸಂಹಿತಾ ಯಾಗ

0

ಕೊಕ್ಕಡ : ಕೊಕ್ಕಡದಲ್ಲಿ ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಎಡಪ್ಪಾಡಿ ಮಠವು ಸುಮಾರು ಎಪ್ಪತ್ತು ವರ್ಷಗಳಿಂದ ಪಾಳು ಬಿದ್ದಿದ್ದು ಇತ್ತೀಚೆಗೆ ಮೂರು ವರ್ಷಗಳ ಹಿಂದೆ ನೂತನ ಗರ್ಭಗುಡಿಯಲ್ಲಿ ಶ್ರೀ ಗೋಪೀನಾಥ ದೇವರ ಪ್ರತಿಷ್ಠೆ ನಡೆದಿದ್ದು, ಇದೇ 18 ಪೆಬ್ರವರಿಯಿಂದ 26 ರ ವರೆಗೆ ಋಗ್ವೇದ ಸಂಹಿತಾ ಯಾಗವು ನಡೆಯಲಿದೆ .


ಎಂಟುನೂರು ವರ್ಷಗಳ ಹಿಂದೆ ಮಧ್ವಾಚಾರ್ಯರು ಕೊಕ್ಕಡಕ್ಕೆ ಬಂದು ಶ್ರೀ ಕೃಷ್ಣಾಮೃತ ಮಹಾರ್ಣವ ಎಂಬ ಗ್ರಂಥವನ್ನೂ ರಚಿಸಿ ಕೊಟ್ಟು, ಶ್ರೀ ಯಜ್ಞನಾರಾಯಣ ಪ್ರತಿಮೆಯನ್ನೂ ಕೊಟ್ಟು, ಸಂತಾನ ಹೀನತೆಯಿಂದ ಬಳಲುತ್ತಿದ್ದ ಎಡಪ್ಪಾಡಿತ್ತಾಯರಿಗೆ ಸಂತಾನ ಗೋಪಾಲಕೃಷ್ಣ ಯಾಗವನ್ನು ಮಾಡಿಸಿದ ಸ್ಥಳವೂ ಇದಾಗಿದೆ.


ಈ ಮಠಕ್ಕೆ ಸಂಬಂಧಪಟ್ಟ ಎಡಪ್ಪಾಡಿತ್ತಾಯ ವಂಶಸ್ಥರು ಕರ್ನಾಟಕದ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಕೇರಳದ ತಿರುವನಂತಪುರ ಶ್ರೀ ಅನಂತ. ಪದ್ಮನಾಭ ದೇವಾಲಯ ಮೊದಲಾದೆಡೆ ಅರ್ಚಕರಾಗಿದ್ದು, ಉಡುಪಿಯ ಕಾಣಿಯೂರು ಮಠದ ಪರಂಪರೆಯಲ್ಲಿ ಸನ್ಯಾಸಿಗಳೂ ಆಗಿದ್ದು, ದಕ್ಷಿಣಕನ್ನಡ, ಉಡುಪಿ, ಬೆಂಗಳೂರು ಮತ್ತು ಕೇರಳದ ತಿರುವನಂತಪುರದಲ್ಲೂ ವಾಸಿಸುತ್ತಿದ್ದಾರೆ.

ಎಡಪ್ಪಾಡಿತ್ತಾಯ ಕುಟುಂಬಸ್ಥರ ಆರಾಧ್ಯ ಮೂರ್ತಿ ಗೋಪೀನಾಥದೇವರ ಪ್ರೀತ್ಯರ್ಥವಾಗಿ, ಕುಕ್ಕೆ ಸುಬ್ರಹ್ಮಣ್ಯದ ಪ್ರಧಾನ ಅರ್ಚಕ ಸೀತಾರಾಮ ಎಡಪ್ಪಾಡಿತ್ತಾಯ ಯಜಮಾನಿಕೆಯಲ್ಲಿ ಧರ್ಮಸ್ಥಳದ ಸುಬ್ರಹ್ಮಣ್ಯ ಕಲ್ಲೂರಾಯರ ಮುಂದಾಳುತ್ವದಲ್ಲಿ ನಕ್ರೆ ರವಿಕುಮಾರ ಆಚಾರ್ಯರ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ಋಗ್ವೇದ ಸಂಹಿತಾ ಯಾಗ ನಡೆಯುತ್ತಿದೆ.

LEAVE A REPLY

Please enter your comment!
Please enter your name here