ಗನ್ ಹಿಡಿದು ಜೀವ ಬೆದರಿಕೆ: ಉಜಿರೆಯ ತನುಷ್ ಶೆಟ್ಟಿ ದೂರುಬಿಲ್ಡರ್ ಜಿತೇಂದ್ರ ಕೊಟ್ಟಾರಿ ಮತ್ತು ಪುತ್ರಿ ವಿರುದ್ಧ ಪ್ರಕರಣ ದಾಖಲು

0

ಬೆಳ್ತಂಗಡಿ: ಉಜಿರೆಯ ತನುಷ್ ಶೆಟ್ಟಿ ಸಹಿತ ಈರ್ವರಿಗೆ ಗನ್ ಹಿಡಿದು ಬೆದರಿಕೆ ಹಾಕಿದ ಆರೋಪದಡಿ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿ ವಿರುದ್ಧ ಮಂಗಳೂರು ನ್ಯಾಯಾಲಯದ ಸೂಚನೆಯಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪ್ರಕರಣ ವಿವರ: ೨೦೨೪ರ ಅ.೯ರಂದು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿಯವರ ಸಹೋದರ ಮೋಹನ್ ಶೆಟ್ಟಿ ಅವರ ಪುತ್ರ ತನುಷ್ ಶೆಟ್ಟಿ ಮತ್ತು ಅವರ ಸ್ನೇಹಿತ ಅಂಕಿತ್ ಶೆಟ್ಟಿ ಅವರು ಮಂಗಳೂರಿನ ಬಜಪೆಯಿಂದ ಕದ್ರಿಗೆ ಬರುತ್ತಿದ್ದಾಗ ವಾಹನ ಸೈಡ್ ಕೊಡುವ ವಿಚಾರದಲ್ಲಿ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಜತೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಕಾರನ್ನು ಫಾಲೋ ಮಾಡಿ ಬಂದು ಜಿತೇಂದ್ರ ಕೊಟ್ಟಾರಿ ಅವರ ಮನೆಯ ಕಾಂಪೌಂಡ್ ಒಳ ಪ್ರವೇಶಿಸಿದ್ದರು. ಈ ಸಂದರ್ಭ ಮೂವರ ಮಧ್ಯೆ ಭಾರಿ ಚರ್ಚೆ ನಡೆದಿತ್ತು. ಬಳಿಕ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನುಷ್ ಮತ್ತು ಅಂಕಿತ್ ಅವರ ಬಂಧನವಾಗಿತ್ತು.

ಪ್ರತಿದೂರು ನೀಡಿದ್ದ ತನುಷ್ ಶೆಟ್ಟಿ, ಅಂಕಿತ್ ಶೆಟ್ಟಿ: ಜೈಲಿನಿಂದ ಬಿಡುಗಡೆಯಾದ ಬಳಿಕ ಯುವಕರು ತಾವೇನೂ ಹಲ್ಲೆ ಮಾಡಿಲ್ಲ. ಜಿತೇಂದ್ರ ಕೊಟ್ಟಾರಿ ಹಾಗೂ ಅವರ ಪುತ್ರಿ ತಮ್ಮ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಒಡ್ಡಿದ್ದರು. ಠಾಣೆಯಲ್ಲೂ ಬೆದರಿಕೆ ಹಾಕಿದ್ದರು ಎಂದು ದೂರು ದಾಖಲಿಸಿದ್ದರು. ಜಿತೇಂದ್ರ ಕೊಟ್ಟಾರಿ ಅವರ ಪುತ್ರಿ ಯುವಕರನ್ನು ಶೂಟ್ ಮಾಡುವಂತೆ ತಂದೆಗೆ ಪ್ರಚೋದನೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಅವರು ಪ್ರತಿ ದೂರು ನೀಡಿದ್ದರೂ ಪೊಲೀಸರು ಕೇಸು ದಾಖಲಿಸಿರಲಿಲ್ಲ. ಜೈಲಿನಿಂದ ಹೊರ ಬಂದ ಬಳಿಕ ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಅವರು ಮಂಗಳೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಜಿತೇಂದ್ರ ಕೊಟ್ಟಾರಿ ಮತ್ತು ಅವರ ಪುತ್ರಿ ತಮ್ಮನ್ನು ನಿಂದಿಸಿ ಬೆದರಿಕೆ ಹಾಕಿದ ಬಗ್ಗೆ ವಿಡಿಯೋ ನೀಡುವಂತೆ ಆರ್‌ಟಿಐನಡಿ ಅವರು ಮಾಹಿತಿ ಕೇಳಿದ್ದರು. ಆದರೆ ತನಿಖೆಯ ಕಾರಣ ನೀಡಿ ವೀಡಿಯೋ ಫೂಟೇಜ್ ನೀಡಿರಲಿಲ್ಲ. ಇದೀಗ ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಅವರ ಹೇಳಿಕೆ ಮತ್ತು ಅವರ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ್ದನ್ನು ತನಿಖೆ ಮಾಡುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶ ಮಾಡಿದೆ. ಅದರಂತೆ ಫೆ.೫ರಂದು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here