







ಬೆಳ್ತಂಗಡಿ: ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಸುಮಂತ್ ಅವರ ಸಹೋದರ ಸುದರ್ಶನ್ ಅವರ ಕುರಿತು ಸುಳ್ಳು ಮಾಹಿತಿ ಸೃಷ್ಟಿಸಿ ವೀಡಿಯೋ ಪ್ರಸಾರ ಮಾಡಿದ ಆರೋಪದಡಿ ಪತ್ರಕರ್ತ ಮೋಹನ್ ಬೋಳಂಗಡಿ ಮತ್ತು ಧರ್ಮ ಸಂಘರ್ಷ ಯೂ ಟ್ಯೂಬ್ ಚಾನೆಲ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಫೆ.೧೫ರಂದು ಬಿಎನ್ಎಸ್ ೩೫೩(೨)ರನ್ವಯ ದೂರು ದಾಖಲಾಗಿದೆ.


ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಭೋಳ್ಯ ಬರೆಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಸುದರ್ಶನ್(೧೯) ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ `ತನ್ನ ಸಹೋದರ ಸುಮಂತ್(೧೪) ಇತ್ತೀಚೆಗೆ ಅಸಹಜವಾಗಿ ಮೃತಪಟ್ಟಿದ್ದು ಬಳಿಕ ಕೊಲೆ ಎಂದು ಪರಿಗಣಿಸಿ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. ೦೭/೨೦೨೬ ಕಲಂ ೧೩೭(೨) ಮತ್ತು ೧೦೩(೧) ಬಿಎನ್ಎಸ್ ೨೦೨೩ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಫೆ.೪ರಂದು ಧರ್ಮ ಸಂಘರ್ಷ ಎಂಬ ಯೂ ಟ್ಯೂಬ್ ಚಾನೆಲ್ನಲ್ಲಿ ತನಗೂ ಒಬ್ಬ ಹೆಣ್ಣಿಗೂ ಸಂಬಂಧ ಇದ್ದು ರಾತ್ರಿ ೨.೩೦ರ ತನಕ ವೀಡಿಯೋ ಕಾಲ್ನಲ್ಲಿ ಮಾತನಾಡಿದ್ದನ್ನು ತನ್ನ ಜತೆ ಮಲಗಿದ್ದ ತಮ್ಮ ನೋಡಿದ ಕಾರಣ ಈ ವಿಚಾರ ಮನೆಯವರಿಗೆ ತಿಳಿಸುವ ಭಯದಿಂದ ತನ್ನ ತಮ್ಮ ಸುಮಂತ್ನನ್ನು ತಾನು ಕೊಲೆ ಮಾಡಿರುವುದಾಗಿದೆ ಎಂದು ಸುಳ್ಳು ಮಾಹಿತಿ ಸೃಷ್ಟಿಸಿ ಸದ್ರಿ ವೀಡಿಯೋ ಪ್ರಸಾರ ಮಾಡಲಾಗಿದೆ.
ಆದ್ದರಿಂದ ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದರು.
ದೂರು ಸ್ವೀಕರಿಸಿದ ಬೆಳ್ತಂಗಡಿ ಠಾಣಾ ಪೊಲೀಸರು ಅಪರಾಧ ಕ್ರಮಾಂಕ ೧೬/೨೦೨೬ರಂತೆ ಬಿಎನ್ಎಸ್ ೩೫೩(೨)ರಡಿ ಪತ್ರಕರ್ತ ಮೋಹನ್ ಬೋಳಂಗಡಿ ಮಂಗಳೂರು ಮತ್ತು ಧರ್ಮ ಸಂಘರ್ಷ ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.








