ತಾಲೂಕು ಆಡಳಿತ ಸೌಧದಲ್ಲಿ ಜೀತ ಪದ್ಧತಿ ನಿರ್ಮೂಲನಾ ಕಾರ್ಯಕ್ರಮ

0

ಬೆಳ್ತಂಗಡಿ : ದ.ಕ. ಜಿಲ್ಲಾ ಕಾನೂನು ಸೇವೆಗಳ ಸಮಿತಿ, ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿಯ ಕಂದಾಯ ಇಲಾಖೆ ಹಾಗೂ ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ಜೀತ ಪದ್ಧತಿ ನಿರ್ಮೂಲನ ಕಾರ್ಯಕ್ರಮವು ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಫೆ.16 ರಂದು ನಡೆಯಿತು.ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಅಧ್ಯಕ್ಷತೆ ವಹಿಸಿದ್ದರು. ಅಲೋಶಿಯಸ್ ಎಸ್ ಲೋಬೊ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆಯು ನಮ್ಮೆಲ್ಲರ ಕರ್ತವ್ಯ ಆಗಿದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇದೆ. 1976 ರಲ್ಲಿ ಇಂದಿರಾ ಗಾಂಧಿ ಅವರು ಈ ಪದ್ಧತಿಯನ್ನು ನಿರ್ಮೂಲನೆ ಗೊಳಿಸಿ ಆದೇಶ ಹೊರಡಿಸಿದ ಪರಿಣಾಮವಾಗಿ ಪ್ರಸ್ತುತ ನಮ್ಮ ದೇಶದಲ್ಲಿ ಜೀತ ಪದ್ಧತಿ ವಿರಳವಾಗಿದೆ. ಇಂದಿನ ಕಾಲದಲ್ಲಿ ಭೂ ಮಾಲೀಕರು ಸಾಲವನ್ನು ನೀಡಿ ಆ ಸಾಲವನ್ನು ಮರು ಪಾವತಿ ಗೊಳಿಸುವವರೆಗೆ ತಮ್ಮ ಕೆಲಸಗಾರರನ್ನು ಜೀತದಾಳುಗಳಾಗಿ ದುಡಿಸಿ ಅವರಿಗೆ ಕೇವಲ ಹೊಟ್ಟೆ ಪಾಡಿಗೆ ಅನ್ನವನ್ನು ಕೊಟ್ಟು ಅವರಿಗೆ ನಿಗದಿತ ಮಜೂರಿಯನ್ನು ನೀಡದೆ ಜೀತದಾಳು ಎಂಬಂತೆ ದುಡಿಸುತ್ತಿದ್ದರು. ಪ್ರಸ್ತುತ ದ. ಕ ಜಿಲ್ಲೆ ಆಗಲಿ ಉಡುಪಿ ಜಿಲ್ಲೆ ಆಗಲಿ ಪ್ರಕರಣಗಳು ದಾಖಲು ಗೊಂಡಿಲ್ಲ. ಆದರೆ ಉತ್ತರ ಭಾರತದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಈಗಲೂ ಕೆಲವು ಕಡೆ ಜೀತ ಪದ್ದತಿ ಇದೆ. ಇದನ್ನು ಹೋಗಲಾಡಿಸಲು ನಾವೆಲ್ಲರೂ ಕಟಿಬದ್ಧರಾಗಬೇಕು ಹಾಗೂ ಒಂದು ವೇಳೆ ಇಂತಹ ಪ್ರಕರಣಗಳು ಕಂಡು ಬಂದರೆ ಕಾನೂನು ಸೇವೆಗಳ ಸಮಿತಿ ಅಥವಾ ನ್ಯಾಯಾಧೀಶರಿಗೆ ಅಥವಾ ತಹಶೀಲ್ದಾರ್ ಅವರಿಗೆ ಈ ಬಗ್ಗೆ ಮನವಿಯನ್ನು ನೀಡಿ ಕಾನೂನು ಕ್ರಮವನ್ನು ಜರುಗಿಸಲು ಪ್ರಯತ್ನ ಮಾಡಬಹುದು ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಅವರು ಮಾತನಾಡಿ ಭೂ ಮಾಲೀಕರಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ಅವರ ಹಕ್ಕನ್ನು ರಕ್ಷಿಸಿಕೊಳ್ಳಲು ನಾವು ಅನುವು ಮಾಡಿಕೊಡಬೇಕು. ಒಂದು ವೇಳೆ ಇಂತಹ ಸಂಗತಿಗಳು ಕಂಡು ಬಂದಲ್ಲಿ ನೇರವಾಗಿ ತಹಶೀಲ್ದಾರ್ ಅಥವಾ ಕಾನೂನು ಸೇವೆಗಳ ಸಮಿತಿಗೆ ತಿಳಿಸಿ ಇದನ್ನು ಹೋಗಲಾಡಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿ ಇದೆ ಎಂದರು.ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಎಲ್ಲಾ ಡೆಪ್ಯುಟಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗ, ನ್ಯಾಯಾಲಯದ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here