






ಬೆಳ್ತಂಗಡಿ: ಹಿಂದೂಗಳು ಜಾತಿ ಭೇದ ಭಾವವಿಲ್ಲದೆ ಒಗ್ಗಟ್ಟಿನಿಂದಿರಬೇಕು. ಹಿಂದೂ ಸಂಸ್ಕೃತಿಯನ್ನು ನಾವು ಜೀವನ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಭಾಗ ಸಂಪರ್ಕ ಪ್ರಮುಖ್ ಯೋಗೀಶ್ ಉಡುಪಿ ಹೇಳಿದರು.ಅವರು ಫೆ.೧ರಂದು ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಮತ್ತು ಲಾಯಿಲ ಮಂಡಲ ವತಿಯಿಂದ ನಡೆದ ಮಲೆಬೆಟ್ಟು ವನದುರ್ಗಾ ದೇವಸ್ಥಾನ ವಠಾರದಲ್ಲಿ ಲಾಯಿಲ ಮತ್ತು ಕೊಯ್ಯೂರು ಗ್ರಾಮಗಳ ಹಿಂದೂ ಸಂಗಮದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಿಂದೂ ಸಂಗಮ ಕೇವಲ ಸಂಭ್ರಮವಾಗಬಾರದು, ಇದೊಂದು ಆಚರಣೆಯಾಗಬೇಕು. ಹಿಂದೂ ಧರ್ಮ ಹಾಗೂ ಹಿಂದೂ ಸಂಸ್ಕೃತಿ ಎತ್ತರ ಸ್ಥಾನದಲ್ಲಿ ಇದೆ. ಯಾವುದೇ ತಾರತಮ್ಯ ಮಾಡದೇ ನಮ್ಮ ಮಠ ಮಂದಿರ, ಮನೆಗಳಿಗೆ ಪ್ರವೇಶ ಅವಕಾಶ ನೀಡುವುದು. ಈ ರೀತಿಯಲ್ಲಿ ಯೋಚನೆ ಮಾಡುತ್ತಾ ಸಮರಾಸ್ಯದ ತಳಹದಿಯಲ್ಲಿ ಮುನ್ನಡೆಯಬೇಕು. ನಮ್ಮ ಭಾಷೆ ಹಾಗೂ ಗುರುಹಿರಿಯರನ್ನು ಗೌರವಿಸಬೇಕು. ಮನೆಯಲ್ಲಿ ಒಟ್ಟಾಗಿ ಸೇರಿ ಭಜನೆ ಮಾಡುವುದು, ಒಟ್ಟಿಗೆ ಊಟ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಳ್ತಂಗಡಿ ತಾಲೂಕು ಹಿಂದೂ ಸಂಗಮದ ಅಧ್ಯಕ್ಷ ಅಜಿತ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಹಿಂದೂ ಸಂಗಮದ ಸಂಯೋಜಕ ಅನಿಲ್ ಕುಮಾರ್ , ಕೊಯ್ಯೂರು ಪ್ಯಾಕ್ಸ್ ಅಧ್ಯಕ್ಷ ರವೀಂದ್ರನಾಥ್, ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ, ಪುತ್ರಬೈಲು ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ಈಶ್ವರ ಭೈರ ಹಾಗೂ ಲಾಯಿಲ ಹಾಗೂ ಕೊಯ್ಯೂರು ಗ್ರಾಮದ ದೇವಸ್ಥಾನಗಳ ಆಡಳಿತ ಮೊಕ್ತೇಸರು ಉಪಸ್ಥಿತರಿದ್ದರು.ಭರತ್ ಡೇಂಬುಗ ವಂದೇ ಮಾತರಂ ಗೀತೆ ಹಾಡಿದರು. ಮಂಡಲ ಸಂಯೋಜಕ ಬಿ.ಕೆ ಧನಂಜಯ್ ರಾವ್ ಸ್ವಾಗತಿಸಿ, ಸಹ ಸಂಯೋಜಕ ಪಿ ಚಂದ್ರಶೇಖರ್ ಸಾಲ್ಯಾನ್ ಧನ್ಯವಾದವಿತ್ತರು.
ಹಿಂದೂ ಎಂಬ ಕಲ್ಪನೆಯಲ್ಲಿ ಒಟ್ಟು ಸೇರಬೇಕು:ಹಿರಿಯರನ್ನು ಗೌರವಿಸುವುದು, ಭಜನೆ ಮಾಡುವುದು, ಸಮಾಜದಲ್ಲಿ ಗೌರವ ಪೂರಕವಾಗಿ ಬದುಕುವುದು, ಸ್ತ್ರೀಯರನ್ನು ಗೌರವಿಸುವ ಜೀವನ ಶೈಲಿಯೇ ಹಿಂದೂ. ಇಂತಹ ಅದ್ಬುತವಾದ ಹಿಂದೂ ಧರ್ಮವನ್ನು ನಾವು ಜಾತಿ, ಭಾಷೆ, ಬಣ್ಣ ಆಧಾರದಲ್ಲಿ ಒಡೆದುದರ ಪರಿಣಾಮವಾಗಿ ಹಿಂದೂ ಎಂಬ ಮರ ಬಲಿಷ್ಠವಾಗಿ ಕಂಡು ಬಂದರೂ ಕೂಡ ಒಳಗೆ ಸ್ವಲ್ಪ ಬಲಹೀನಗೊಂಡಿದೆ. ಹೀಗಾಗಿ, ಹಿಂದೂ ಎಂಬ ಕಲ್ಪನೆಯಲ್ಲಿ ಒಟ್ಟಾಗಬೇಕು. ಸಂಘಕ್ಕೆ ನೂರು ತುಂಬಿದ ಸಂತಸದ ಹರುಷದಲ್ಲಿ ಸಮಸ್ತ ಹಿಂದೂ ಬಾಂಧವರು ಕುಟುಂಬದವರು ಸೇರಿ ಮಾಡುವ ಕಾರ್ಯಕ್ರಮವೇ ಹಿಂದೂ ಸಂಗಮ ಎಂದು ಲಾಯಿಲ ಮಂಡಲ ಸಂಯೋಜಕ ಬಿ.ಕೆ ಧನಂಜಯ್ ರಾವ್ ಹೇಳಿದರು.


ರಾಮನಿಗಾಗಿ ತೆರಳಿದ್ದ ಕರಸೇವಕರ ಸನ್ಮಾನ ನಮ್ಮ ಶುಭಯೋಗ : ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವ ಸಂಕಲ್ಪದಿಂದ ವಿಶ್ವ ಹಿಂದೂ ಪರಿಷತ್ ಮುಖಾಂತರ ಅನೇಕ ರೀತಿಯ ಹೋರಾಟ ನಡೆದಿತ್ತು. ದೇಶದ ಹಳ್ಳಿ ಹಳ್ಳಿಯಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಚಂದ್ರ ದೇವರ ದೇವಸ್ಥಾನ ನಿರ್ಮಾಣವಾಗುವ ಸಂಕಲ್ಪವನ್ನು ಇಟ್ಟುಕೊಂಡು ನಮ್ಮ ಹಳ್ಳಿಯಿಂದಲೂ ಹೋದ ಕರಸೇವಕರನ್ನು ಸನ್ಮಾನಿಸಿದ್ದೇವೆ. ಇದು ನಮ್ಮ ಶುಭಯೋಗ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ವಿವಿಧ ಕಾರ್ಯಕ್ರಮ:ಕೊಯ್ಯೂರು ಹಾಗೂ ಲಾಯಿಲ ಗ್ರಾಮದ ಎ ಭಜಕರ ಒಗ್ಗೂಡುವಿಕೆಯೊಂದಿಗೆ ಭಜನಾ ಕಾರ್ಯಕ್ರಮ, ವಿದುಷಿ ಪ್ರತೀಕ್ಷಾ ಕೆ ಆಚಾರ್ಯ, ವಿದುಷಿ ಅಮೃತಾ ಸಂದೀಪ, ವಿದುಷಿ ಪೂಜಾ ಪ್ರಶಾಂತ್ ಮತ್ತು ಶಿಷ್ಯವೃಂದವರಿಂದ ಭರತನಾಟ್ಯ ಕಾರ್ಯಕ್ರಮ, ಶ್ರೀಜ, ಕುಮಾರಿ ಜ್ಯೋತಿ ಲಾಯಿಲ ಇವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ, ಕೊಯ್ಯೂರು ಗ್ರಾಮದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು, ಸಾಧಕರಿಗೆ ಸನ್ಮಾನಿಸಲಾಯಿತು.









