







ಬೆಳ್ತಂಗಡಿ: ಪ್ರಜ್ಞಾವಂತ ನಾಗರಿಕರು ಮಾಡುವ ಮತದಾನ ದೇಶದಲ್ಲಿ ಉನ್ನತವಾದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ಬೆಳ್ತಂಗಡಿಯ ವಕೀಲೆ ಪ್ರತೀಕ್ಷಾ ಹೇಳಿದರು.



ಅವರು ಬೆಳ್ತಂಗಡಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಬೆಳ್ತಂಗಡಿ ಮತ್ತು ವಾಣಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶಯದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾವು ಮಾಡುವ ಮತದಾನದಿಂದ ದೇಶದಲ್ಲಿ ನಿರ್ದಿಷ್ಟ ಬದಲಾವಣೆಯನ್ನು ತರಬಹುದು. ಹದಿನೆಂಟು ವರ್ಷ ತುಂಬಿರುವ ವಿದ್ಯಾರ್ಥಿಗಳು ಮತದಾರ ಚೀಟಿಯನ್ನು ಮಾಡಿಕೊಂಡು ಮತದಾನದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಮತದಾನ ಎಂದರೆ ನಾವು ದೇಶದೊಡನೆ ಮಾಡುವ ಒಪ್ಪಂದವಾಗಿದೆ. ಮತದಾನದ ಕರ್ತವ್ಯವನ್ನು ನಿಭಾಯಿಸುವುದರಿಂದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.
ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಸ್ ಎಸ್. ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಕೋಶಾಧಿಕಾರಿ ಮಮ್ತಾಜ್ ಬೇಗಂ, ವಾಣಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತರಿದ್ದರು. ಉಪನ್ಯಾಸಕ ಅಭ್ಯುದಯ್ ಸ್ವಾಗತಿಸಿದರು. ಉಪನ್ಯಾಸಕಿ ಮೀನಾಕ್ಷಿ ಎನ್. ಕಾರ್ಯಕ್ರಮ ನಿರ್ವಹಿಸಿದರು.









