ಬಳಂಜ: ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ: ಗಣರಾಜ್ಯೋತ್ಸವ ಮತ್ತು ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ

0

ಬಳಂಜ: ದ.ಕ.ಜಿ.ಪ.ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆ,ಸರ್ವೋದಯ ಪ್ರೆಂಡ್ಸ್ ಅಟ್ಲಾಜೆ ಇವರ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ಮತ್ತು ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಜ.26 ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂತೋಷ್ ದೇವಾಡಿಗ ದ್ವಜಾರೋಹಣ ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆಮಂತ್ರಣ ಪರಿವಾರ ಅಳದಂಗಡಿ ಇದರ ಸಂಚಾಲಕರಾದ ವಿಜಯ ಕುಮಾರ್ ಜೈನ್ ಮಾತನಾಡಿ, ಸರಕಾರಿ ಶಾಲೆಗಳು ಉಳಿಯಬೇಕಾದರೆ ಸರ್ವೋದಯ ಪ್ರೆಂಡ್ಸ್ ನಂತಹ ಹಲವಾರು ಸಂಘ ಸಂಸ್ಥೆಗಳು ಹಲವಾರು ಸಮಾಜಮುಖಿ ಸೇವೆಗಳನ್ನು ಶಾಲೆಗಳಲ್ಲಿ ನಡೆಸುವುದರಿಂದ ಮಾತ್ರ ಸಾಧ್ಯವಿದ್ದು ಸರಕಾರಿ ಶಾಲೆಗಳ ಉಳಿವಿಗೆ ಪೋಷಕರ ಸಹಕಾರವು ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸುದ್ದಿ ಬಿಡುಗಡೆ ಪ್ರತಿನಿಧಿ ಸದಾನಂದ ಸಾಲಿಯಾನ್ ಬಳಂಜ ರವರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಹಲವಾರು ಕಪೋಲಕಲ್ಪಿತ ಸುದ್ದಿಗಳು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಮಾರಕವಾಗಿದ್ದು,ಈ ಕುರಿತು ಸರ್ವೋದಯ ಪ್ರೆಂಡ್ಸ್ ನಂತಹ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನುಡಿದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಕೇಶ್ ಹೆಗ್ಡೆಯವರು ಮಾತನಾಡಿ,ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ದುಡಿದಾಗ ವಿಕಸಿತ ಭಾರತ ಅಭಿವೃದ್ಧಿಯ ಕನಸು ನನಸಾಗಲು ಸಾಧ್ಯವಿದ್ದು ಇಂತಹ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸರ್ವೋದಯ ಪ್ರೆಂಡ್ಸ್ ನ ಅಧ್ಯಕ್ಷರಾದ ಹರೀಶ್ ವೈ ಚಂದ್ರಮ ಮತ್ತು ಅವರ ತಂಡದ ಕೆಲಸ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ಮುಖೋಪಾದ್ಯಾಯರಾದ ಪ್ರಮೋದ್ ಎಸ್.ಯೋಗೀಶ್ ಪೂಜಾರಿ ಕಾಪಿನಡ್ಕ ಹಾಗೂ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇದರ ತರಬೇತುದಾರೆ ಕು.ಮಾನ್ಯ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ವಕೀಲರಾದ ಸತೀಶ್,ರೈ ಬಾರ್ಧಡ್ಕ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರತ್ನ ಹೇವ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂತೋಷ್ ದೇವಾಡಿಗ, ರವೀಂದ್ರ ಹೇವ, ಸಾಂತಪ್ಪ ಸುವರ್ಣ ಹಾಕೋಟೆ,ವಾಮನ ಬಾಳಿಗ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ವೋದಯ ಪ್ರೆಂಡ್ಸ್ ನ ಅಧ್ಯಕ್ಷರಾದ ಹರೀಶ್ ವೈ ಚಂದ್ರಮ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಪ್ರಜಾವಾಣಿ ಪತ್ರಿಕೆಯ ಉಪ ಸಂಪಾದಕರಾದ ಜಗದೀಶ್ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಸರ್ವೋದಯ ಪ್ರೆಂಡ್ಸ್ ನ ಕಾರ್ಯದರ್ಶಿ ಬಾಸ್ಕರ ಶೆಟ್ಟಿ ಕಜೆಕೊಡಿ ಧನ್ಯವಾದ ಸಲ್ಲಿಸಿದರು.

ಸಂಜೆ ಸಮಾರೋಪ ಸಮಾರಂಭ,ಸನ್ಮಾನ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಿಂಗಾರ ಕಲಾವಿದರು ಬೆದ್ರ ಇವರಿಂದ ಕದಂಬ ನಾಟಕ ನಡೆಯಿತು. ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here