






ನಾರಾವಿ ಗ್ರಾಮ ಪಂಚಾಯತ್ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯು ಜ.23 ರಂದು ಗ್ರಾಮ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಅಧ್ಯಕ್ಷ ರಾಜವರ್ಮ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಉಪಾಧ್ಯಕ್ಷೆ ಸುಮಿತ್ರಾ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ಬಾಂದೊಟ್ಟು, ಉದಯ ಹೆಗ್ಡೆ, ಯಶೋಧ, ನಾರಾಯಣ ಪೂಜಾರಿ, ಡಯಾನ ಪ್ರಮೀಳಾ ರೋಡ್ರಿಗಸ್, ಸುದರ್ಶನ್ ಇವರು ಉಪಸ್ಥಿತರಿದ್ದರು.
ನಾರಾವಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ ಅವರು ಪ್ರಾಸ್ತಾವಿಕ ಮಾತಾನಾಡಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ತೇಜಸ್ ವಾರ್ಷಿಕ ವರದಿಯನ್ನು ಸಂಕ್ಷಿಪ್ತವಾಗಿ ಸಭೆಗೆ ಮಂಡಿಸಿದರು.ತಾಲೂಕು ವಿಶೇಷಚೇತನರ ಮೇಲ್ವಿಚಾರಕ ಜೋನ್ ಬ್ಯಾಪಿಸ್ಟ್ ಡಿ ಸೋಜಾ ಸರಕಾರದಿಂದ ವಿಶೇಷಚೇತನರಿಗೆ ಸಿಗುವ ಎಲ್ಲಾ ಯೋಜನೆ ಹಾಗೂ ಅದನ್ನು ಪಡೆಯುವ ಬಗ್ಗೆ ಮಾಹಿತಿ ನೀಡಿದರು.



ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ದಿವ್ಯ ಎನ್ ಇವರು ಮಾನಸಿಕ ಸ್ತಿಮಿತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಾವ್ಯ ಸಮುದಾಯ ಆರೋಗ್ಯಧಿಕಾರಿ ಇವರ ನೇತೃತ್ವದಲ್ಲಿ ವಿಶೇಷಚೇತನರ ಆರೋಗ್ಯ ದೃಷ್ಠಿಯಿಂದ ಒಟ್ಟು 48 ಜನ ವಿಶೇಷಚೇತನರ ಆರೋಗ್ಯ ತಪಾಸಣೆಯನ್ನು ವಿಶೇಷವಾಗಿ ಮಾಡಲಾಯಿತು. ನಾರಾವಿ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ , ಗ್ರಂಥಾಲಯ ಮೇಲ್ವಿಚಾರಕಿ, ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದು, ಸಭೆಗೆ ಸಹಕರಿಸಿದರು.
ನಾರಾವಿ ಪಂಚಾಯತ್ ವ್ಯಾಪ್ತಿಯ ಶ್ರೇಯ ಬಿನ್ ಕೃಷ್ಣಪ್ಪ ಪೂಜಾರಿ ಇವರಿಗೆ CP ಚೇರ್, ಶ್ರೀಧರ ಬಿನ್ ಈರಪ್ಪ ಪೂಜಾರಿ ಇವರಿಗೆ ಊರುಗೋಲು ಹಾಗೂ ಮಂಜುನಗರ ನಿವಾಸಿ ಮುತ್ತಯ್ಯ ಪೂಜಾರಿಯವರಿಗೆ ವೀಲ್ ಚೇರ್ ನ್ನು ವಿತರಿಸಲಾಯಿತು. ನಾರಾವಿ ಗ್ರಾಮ ಪಂಚಾಯತ್ ವಿಶೇಷಚೇತನರ ಸಮನ್ವಯ ಗ್ರಾಮ ಸಭೆಯಲ್ಲಿ ಒಟ್ಟು 69 ಜನ ವಿಶೇಷಚೇತನರು ಹಾಜರಿದ್ದು 2025-26ನೇ ಸಾಲಿನ ಸಭೆಯನ್ನು ಯಶಸ್ವಿಗೊಳಿಸಿದರು. ಬಿಲ್ ಕಲೆಕ್ಟರ್ಸ ತೀಶ್ ಎಂ ಸ್ವಾಗತಿಸಿ ನಿರೂಪಣೆಗೈದರು. ಗ್ರಾಮ ಪಂಚಾಯತ್ ಸದಸ್ಯ ಉದಯ ಹೆಗ್ಡೆ, ಸಭೆಗೆ ಹಿತ ನುಡಿಗಳನ್ನು ನೀಡಿ ಕೊನೆಯಲ್ಲಿ ಧನ್ಯವಾದವನ್ನು ನೀಡಿದರು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.









