






ಮಂಜೊಟ್ಟಿ: ರಝಾ ಗಾರ್ಡನ್ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಆಡಳಿತ ಟ್ರಸ್ಟಿನ ಸದಸ್ಯ ಶೇಖ್ ಅಹಮ್ಮದ್ ಮಂಗಳೂರು ಅವರು ನೆರವೇರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸಯ್ಯದ್ ಹಬೀಬ್ ಸಾಹೇಬ್ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಯೆನಪೋಯ ಮೆಡಿಕಲ್ ಕಾಲೇಜಿನ ಕೆಮಿಸ್ಟ್ರಿ ವಿಭಾಗದ ಅಸೋಸಿಯೇಟ್ ಪ್ರೊ. ಡಾಕ್ಟರ್ ಸರೀನ್ ಶೇಕ್ ವಹಿಸಿಕೊಂಡಿದ್ದರು.


ವೇದಿಕೆಯಲ್ಲಿ ಆಡಳಿತ ಟ್ರಸ್ಟಿನ ಕಾರ್ಯದರ್ಶಿ ಸೈಯದ್ ಆಯುಬ್, ಶಾಲಾ ಮುಖ್ಯೋಪಾಧ್ಯಾಯಿನಿ ಜಾಕಿನ್ ಬಿನ್ ಮತ್ತು ಆಡಳಿತ ಟ್ರಸ್ಟಿನ ಸದಸ್ಯ ಶೇಕ್ ಅಬ್ದುಲ್ ಗಪೂರ್ ಉಪಸ್ಥಿತರಿದ್ದರು. ಮುಖ್ಯ ಅತಿಥಿ ಡಾ. ಸರೀನ್ ಶೇಕ್ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಮತ್ತು ಆದರ್ಶವನ್ನು ಮೈಗೂಡಿಸಿಕೊಂಡು ಪ್ರಬುದ್ಧ ಭಾರತೀಯರಾಗಿ ಬೆಳೆಯಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷ ಶಾಲಾ ಆಡಳಿತ ಟ್ರಸ್ಟ್ ನ ಸಂಚಾಲಕರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಜಾತಿ ಮತ ಧರ್ಮ ಭೇದವನ್ನು ಮರೆತು ಸಾಮರಸ್ಯತೆಯಿಂದ ಬಾಳಿ ಆದರ್ಶ ಭಾರತವನ್ನು ನಿರ್ಮಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸುಂದರವಾದ ಪಥಸಂಚಲನ ನೆರವೇರಿತು. ವಿದ್ಯಾರ್ಥಿಗಳ ಭಾರತೀಯತೆಯ ವೈಭವವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿ ಮಹಮ್ಮದ್ ಹಾಶಿಮ್ ಅತಿಥಿಗಳನ್ನು ಸ್ವಾಗತಿಸಿದರು. 10ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ಕಾರ್ಯಕ್ರಮವನ್ನು ನಿರೂಪಿಸಿದರು. ಮೊಹಮ್ಮದ್ ಝಿಶಾನ್ ಅವರು ಧನ್ಯವಾದವಿತ್ತರು.









