ಹಾಟ್ ಮಿಕ್ಸ್ ಘಟಕ ರದ್ದುಗೊಳಿಸಿ-ಮಲೆಯಡ್ಕ ಉಳಿಸಿ-ನಡ ಗ್ರಾ.ಪಂ. ಕಚೇರಿ ಎದುರು ಗುಮ್ಮಟೆ ಚಳುವಳಿ-ಘಟಕ ಸ್ಥಳಾಂತರಿಸಲು ಒತ್ತಾಯ

0

ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಗ್ರೋಡಿ ಸಂಸ್ಥೆಯ ಹಾಟ್ ಮಿಕ್ಸ್ ಘಟಕವನ್ನು ಸ್ಥಳಾಂತರಿಸಬೇಕೆಂದು ಈಗಾಗಲೇ ಹೋರಾಟ ಆರಂಭಿಸಿರುವ ಮಲೆಯಡ್ಕದ ಜನತೆ ಜ.೧೩ರಂದು ನಡ ಗ್ರಾಮ ಪಂಚಾಯತ್ ಕಚೇರಿ ಎದುರು ಗುಮ್ಮಟೆ ಚಳುವಳಿ ನಡೆಸಿದರು. ನೂರಕ್ಕೂ ಅಧಿಕ ಗ್ರಾಮಸ್ಥರು ಸೇರಿ ತಮ್ಮ ಗೊಂದೋಲು ಪೂಜೆಯ ವೇಳೆ ಮಹಾಮ್ಮಾಯಿ ದೇವರೆದುರು ಬಡಿಯುವ ಗುಮ್ಮಟೆಯನ್ನು ಗ್ರಾಮ ಪಂಚಾಯತ್ ಎದುರು ನಿಂತು ಬಡಿದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ತಮ್ಮ ಊರಿನಲ್ಲಿ ಹಲವರ ಅನಾರೋಗ್ಯಕ್ಕೆ ಕಾರಣವಾದ ಹಾಟ್ ಮಿಕ್ಸ್ ಘಟಕವನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.

ಗುಮ್ಮಟೆ ಬಡಿದು ಪ್ರತಿಭಟನೆ: ನಡ ಗ್ರಾಮ ಪಂಚಾಯತ್ ಕಚೇರಿ ಎದುರುಗೆ ಸರತಿ ಸಾಲಿನಲ್ಲಿ ಆಗಮಿಸಿದ ಪ್ರತಿಭಟನಾಕಾರರು ಹಾಟ್ ಮಿಕ್ಸ್ ಘಟಕ ಸ್ಥಳಾಂತರಗೊಳ್ಳಲೇಬೇಕೆಂದು ಗುಮ್ಮಟೆ ಬಡಿ ಪ್ರತಿಭಟಿಸಿದರು. ಈ ಪ್ರತಿಭಟನೆಯ ವೇಳೆ ಹಲವರು ಮಾತನಾಡಿ ನಮ್ಮ ಮಕ್ಕಳ ಆರೋಗ್ಯ ಕೆಡುತ್ತಿದೆ. ನಾವು ಊಟ ಮಾಡಲು ಸಾಧ್ಯವಾಗುತ್ತಿಲ್ಲ. ನಿದ್ದೆಯೂ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ನಡ ಗ್ರಾಮ ಪಂಚಾಯತ್ ಗೆ ಮನವಿ ಪತ್ರ: ನಡ ಗ್ರಾಮದ ಮಲೆಯಡ್ಕ ಪರಿಸರದಲ್ಲಿ ನಿರ್ಮಾಣವಾಗಿರುವ ಮುಗ್ರೋಡಿ ಕನ್‌ಕ್ಷನ್ ಎಂಬ ಹಾಟ್ ಮಿಕ್ಸಿಂಗ್ ಘಟಕ ೨೦೦೮ರಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಜನವಸತಿ ಪ್ರದೇಶದಲ್ಲಿದ್ದು, ಮುಖ್ಯವಾಗಿ ಪ. ಜಾತಿ ಮತ್ತು ಪಂಗಡದವರು ವಾಸಿಸುವಲ್ಲಿ ತಲೆಯೆತ್ತಿ ನಿಂತಿದೆ. ಸಮುದಾಯದ ಮೂಲಭೂತ ಹಕ್ಕುಗಳಾದ ಆಹಾರ, ನಿದ್ರೆ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಮರಾಟಿ ನಾಯ್ಕ ಸಮುದಾಯ ಮತ್ತು ಮೊಗೇರ ಸಮುದಾಯದ ಜನರು ನಿತ್ಯ ಧೂಳು ತಿಂದು ಬದುಕುವ ವಾತಾವರಣ ನಿರ್ಮಾಣಗೊಂಡಿದೆ. ನಮ್ಮ ಬಾವಿ, ಕೆರೆಗಳ ನೀರು ಕಲುಷಿತಗೊಂಡಿದೆ. ಸಣ್ಣ ಮಕ್ಕಳು, ವೃದ್ಧರಲ್ಲೂ ಅಸ್ತಮಾದಂತಹ ಖಾಯಿಲೆಗಳು ಕಂಡು ಬಂದಿರುತ್ತವೆ. ಹೃದ್ರೋಗ ಕ್ಯಾನ್ಸರ್‌ನಂತಹ ರೋಗಗಳಿಗೂ ಇಲ್ಲಿನ ನಿವಾಸಿಗಳು ತುತ್ತಾಗಿದ್ದಾರೆ. ಅರಣ್ಯ ವ್ಯಾಪ್ತಿಯ ಜೀವವೈವಿಧ್ಯತೆ ನಶಿಸಿ ಹೋಗುತ್ತಿದೆ. ಕಾರ್ಖಾನೆಯ ಕಲ್ಮಷ ನೀರು ಕರ್ನಾಟಕದ ಉಚ್ಛ ನ್ಯಾಯಾಲಯ ನೋಟೀಸ್ ನೀಡಿದ ನಂತರವೂ ಗಿರಿಜನ ನಿವಾಸಿಗಳಿರುವ ಕೋಡಿಜಾಲು, ಜಾರಿಗೆದಡಿ, ಇಚ್ಚಾವು ಭಾಗಕ್ಕೆ ಹರಿದು ಹೋಗಿವೆ. ಆರೋಗ್ಯ, ಪರಿಸರ ಮಾಲಿನ್ಯ ಉಂಟು ಮಾಡುವ ಕಾರಣದಿಂದಾಗಿ ಈ ಘಟಕವನ್ನು ಕೂಡಲೇ ಸ್ಥಳಾಂತರಗೊಳಿಸಿ ಲೈಸೆನ್ಸ್ ರದ್ದುಗೊಳಿಸುವಂತೆ ಆಗ್ರಹಿಸಿ ಮನವಿ ಪತ್ರವನ್ನು ನಡ ಗ್ರಾಮ ಪಂಚಾಯತ್ ಪಿಡಿಓ ತಾರನಾಥ್ ನಾಯ್ಕ್ ಅವರಿಗೆ ಪ್ರತಿಭಟನಾಕಾರರು ನೀಡಿದರು.

ವಿನಂತಿ ಪತ್ರ: ಹಾಟ್ ಮಿಕ್ಸ್ ಘಟಕದಿಂದಾಗಿ ಸಹಿಸಲಾಗದ ವಾಸನೆ ಮತ್ತು ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆಗಳು ಸುತ್ತಮುತ್ತಲಿನ ಜನರ ಪ್ರಾಣಕ್ಕೇ ಎರವಾಗುತ್ತಿದ್ದು, ಮರಾಟಿ ಜನಾಂಗದ ಸಾಂಪ್ರದಾಯಿಕ ವಾದನ ಗುಮ್ಮಟೆ ಬಡಿಯುವುದರ ಮೂಲಕ ತಮ್ಮಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಇರಿಸುತ್ತಿದ್ದೇವೆ ಎಂದು ೨೨ ಅಂಶಗಳುಳ್ಳ ವಿನಂತಿ ಪತ್ರವನ್ನು ನೀಡಿದರು.
ಗ್ರಾಮ ಪಂಚಾಯತಿನಿಂದ ಆರಂಭ-ಮುಂದೆ ರಾಜ್ಯಮಟ್ಟದ ಹೋರಾಟ: ನಡ ಗ್ರಾಮಪಂಚಾಯತ್ ನವರಿಗೆ ಈ ಹಿಂದೆಯೂ ಮನವಿ ನೀಡಲಾಗಿದೆ.ಆದರೆ ಏನೂ ಪ್ರಯೋಜನವಾಗಿಲ್ಲ. ಈಗ ಮತ್ತೆ ನೀಡುತ್ತಿzವೆ. ಈಗ ಹೋರಾಟ ಗ್ರಾಮ ಮಟ್ಟದಲ್ಲಿ ಆರಂಭಗೊಂಡಿದೆ. ಮುಂದೆ ರಾಜ್ಯಮಟ್ಟದಲ್ಲೂ ಮಾಡಲಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ವೇಳೆ, ಮಲೆಯಡ್ಕ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ್ ಬಿಲ್ಲವ, ಸಂಚಾಲಕರಾದ ಕೊರಗಪ್ಪ ಗೌಡ, ರಮೇಶ್ ಮೊಗೇರ, ಸತೀಶ್ ನಾಯ್ಕ, ಸದಾಶಿವ ನಾಯ್ಕ, ನಾರಾಯಣ ನಾಯ್ಕ, ತಿಮ್ಮಯ್ಯ ನಾಯ್ಕ, ಸುಮಂಗಲಾ ಜಿನ್ನಪ್ಪ ನಾಯ್ಕ, ಮುತ್ತಪ್ಪ ನಾಯ್ಕ, ಉಜಿರೆ, ಅತ್ತಾಜೆ ಮಾಚಾರು, ಸೋಮಂತಡ್ಕ ಕೂಡುಕಟ್ಟು ನಿವಾಸಿಗಳು, ತಾಲ್ಲೂಕು ಮರಾಟಿ ಸಮುದಾಯದ ಪ್ರಮುಖರಾದ ಸಂತೋಷ್ ಅತ್ತಾಜೆ, ಹರ್ಷಿತ್ ಕೊಡಂಗೆ, ಪ್ರಶಾಂತ್ ಯು.ಪಿ, ವಸಂತ ನಡ ಮತ್ತು ಪದ್ಮನಾಭ ಗೌಡ ಸುರ್ಯ, ಕೊರಗಪ್ಪ ಗೌಡ, ಸ್ಪ್ಯಾನ್ಸಿ ಪಿಂಟೊ, ವಿಜಯ ಗೌಡ, ಸುಕೇಶ್ ಸುರ್ಯ ಮತ್ತಿತರರು ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ- ಹೋರಾಟಕ್ಕೆ ಬೆಂಬಲವಿದೆ: ಮಲೆಯಡ್ಕ ಘಟನೆ ಮತ್ತು ಪ್ರತಿಭಟನೆಯ ಬಗ್ಗೆ ಸುದ್ದಿ ಬಿಡುಗಡೆ ಶಾಸಕ ಹರೀಶ್ ಪೂಂಜರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೇಳಿಕೆ ಕೇಳಿದೆ. ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ “ಮಲೆಯಡ್ಕದ ಜನರು ಅಲ್ಲಿನ ಪ್ಲಾಂಟ್ ನ ಮೂಲಕ ತೊಂದರೆಯಾಗುತ್ತಿರುವ ಬಗ್ಗೆ ಹೋರಾಟದ ಮೂಲಕ ವ್ಯಕ್ತಪಡಿಸಿದ್ದಾರೆ. ಅವರ ಹೋರಾಟಕ್ಕೆ ನನ್ನ ಸಂಪೂರ್ಬ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇನೆ.ಈಗಾಗಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಈ ಬಗ್ಗೆ ಸಾಧಕ ಭಾದಕಗಳನ್ನು ತನಿಖೆ ಮಾಡಬೇಕೆಂಬ ಸೂಚನೆಯನ್ನು ಕೂಡ ಕೊಟ್ಟಿದ್ದೇನೆ.ಮುಂದೆ ಅವರ ಯಾವುದೇ ರೀತಿಯ ಹೋರಾಟಕ್ಕೂ ನನ್ನ ಬೆಂಬಲವಿದೆ” ಎಂದು ಹೇಳಿದರು.

೨೦ ಸಾವಿರದ ಬಿಸ್ಕೆಟ್ ನೋಡಬೇಕೆಂದಿದ್ದೇವೆ
ಅತ್ತಾಜೆಯವರಿಗೆ ಸಮಸ್ಯೆಗಳಿಲ್ಲ ಅಂತ ಹೇಳುತ್ತಿದ್ದರು. ರಾತ್ರಿ ಮನೆಗೆ ಹೋದರೆ ಸಮಸ್ಯೆಗಳ ಅರಿವಾಗುತ್ತದೆ. ಮುಂದೆ ಬಂದು ಮಾತನಾಡಿದರೆ ಲಾರಿಯ ಅಡಿಗೆ ಹಾಕುತ್ತಾರೋ, ಹೊಡೆದು ಹಾಕುತ್ತಾರೋ ಅನ್ನುವ ಸಂಶಯ ನಮಗಿದೆ. ಆರು ತಿಂಗಳ ಹಿಂದೆ ನಮ್ಮ ಗೆಳೆಯ ಬೈಕ್ ನಲ್ಲಿ ತನ್ನ ತಾಯಿಯನ್ನು ಕೂರಿಸಿಕೊಂಡು ಹೋಗುವಾಗ ಲಾರಿ ಮೇಲೆ ಬಂದಂತೆ ಬಂತು. ಆವಾಗ ಕೇಳಲು ಹೋದಾಗ ರಾಡ್ ತೆಗೆದುಕೊಂಡು ಹೊಡೆಯಲು ಬಂದರು.ನಾವು ಅಲ್ಲೇ ಪ್ರತ್ಯುತ್ತರ ಕೊಟ್ಟಿದ್ದೇವೆ. ಮಲೆಯಡ್ಕದ ಗ್ರಾಮದಿಂದ ಒಬ್ಬರು ಮುಗ್ರೋಡಿ ಧಣಿಗಳಿಗೆ ಕರೆ ಮಾಡಿದಾಗ ಅಲ್ಲಿರುವವರು ಎಲ್ಲಾ ಪರಿಶಿಷ್ಟ ವರ್ಗದವರು, ೨೦ ಸಾವಿರದ ಬಿಸ್ಕೆಟ್ ಬಿಸಾಕಿದರೆ ಸುಮ್ಮನೆ ಕೂರುತ್ತಾರೆ ಅಂತ ಹೇಳಿದ್ರಂತೆ. ಅವರ ೨೦ ಸಾವಿರದ ಬಿಸ್ಕೆಟ್ ನೋಡಬೇಕು ಅಂತ ಇದೆ. ಅವರಲ್ಲಿ ಹಣ ಉಂಟು ನಮ್ಮಲ್ಲಿ ಜನ ಉಂಟು. ಮುಂದೆ ಏನಾಗುತ್ತದೆ ಅಂತ ನೋಡಬೇಕು.
-ಸಂತೋಷ್ ಅತ್ತಾಜೆ, ಗ್ರಾಮಸ್ಥ

ಪ್ರತಿಭಟಿಸುವುದು ಅನಿವಾರ್ಯ: ಮಲೆಯಡ್ಕ ಎಂಬಲ್ಲಿ ಮುಗ್ರೋಡಿ ಕನ್ಸ್ ಸ್ಟ್ರಕ್ಷನ್ ಗೆ ಸಂಬಂಧಪಟ್ಟ ಹಾಟ್ ಮಿಕ್ಸ್ ಘಟಕದಿಂದ ತೊಂದರೆಯಾಗುತ್ತಿರುವ ಬಗ್ಗೆ ಪ್ರತಿಭಟನೆ ಮಾಡಿzವೆ. ವಿಪರೀತ ಪ್ರಮಾಣದಲ್ಲಿ ಹೊಗೆ,ಧೂಳು ಚಿಮಿನಿ ಮೂಲಕ ಬಿಡುತ್ತಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಟ್ ಮಿಕ್ಸ್ ನಿಂದ ಹರಿದುಹೋಗುವ ನೀರು ಕುಡಿಯುವ ನೀರಿನ ಮೂಲವನ್ನೇ ಹಾಳು ಮಾಡುತ್ತಿದೆ. ಅಲ್ಲದೇ, ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಲಾಗಿದೆ ಎಂದು ದೂರು ನೀಡಿದ್ದೇವೆ. ತಹಶೀಲ್ದಾರ್ ಗೆ ಈ ಬಗ್ಗೆ ದೂರು ನೀಡಿ ಮೂರು ವಾರ ಕಳೆದರೂ ಕೂಡ ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿಲ್ಲ. ಅತಿಕ್ರಮಣ ಮಾಡಿದ ಜಾಗದಲ್ಲಿ ಭೂಮಿಯನ್ನು ಕಡಿದು ಒಂದು ಕಡೆ ಗುಡ್ಡೇಹಾಕಿದ್ದಾರೆ. ಇದು ಮಳೆಗಾಲದಲ್ಲಿ ಹರಿದು ಕೃಷಿಕರ ವ್ಯವಸಾಯಕ್ಕೆ ತೊಂದರೆಯಾಗಬಹುದು. ಇದೇ ಕಾರಣಗಳಿಗಾಗಿ ನಾವು ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು.
-ರಾಜೇಶ್ ಬಿಲ್ಲವ, ಅಧ್ಯಕ್ಷ, ಮಲೆಯಡ್ಕ ಉಳಿಸಿ ಹೋರಾಟ ಸಮಿತಿ

ಮನುಷ್ಯ ಇಲ್ಲದೇ ವ್ಯವಸ್ಥೆಗಳಿಲ್ಲ
ನಡ ಗ್ರಾಮ ಪಂಚಾಯತ್ ನೆದುರು ಮಲೆಯಡ್ಕ ಉಳಿಸಿ ಅಂತ ಪ್ರತಿಭಟನೆ ಮಾಡಿದ್ದೇವೆ. ಈ ದೇಶದ ಸಂಸ್ಕೃತಿಯ ಮೂಲ ನಿವಾಸಿಗಳು ನಾವು. ನಮಗೆ ಇಲ್ಲಿ ಬದುಕಲು ಹಕ್ಕು ಇದೆ. ಸ್ವಾತಂತ್ರ್ಯ ಸಿಕ್ಕಿ ೭೫ ವರ್ಷ ಕಳೆದರೂ ನಮ್ಮನ್ನು ಮೇಲೆ ಬರಲು ಬಿಡುವುದಿಲ್ಲ ಎಂದಾದರೇ ಪ್ರಜಾಪ್ರಭುತ್ವದಲ್ಲಿ ಯಾರಿಗೆ ಎಲ್ಲಿ ಉಳಿವುಂಟು ಅನ್ನುವಂತಾಗಿದೆ. ಗುಮ್ಮಟೆ ಚಳುವಳಿ ಮೂಲಕ ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿzವೆ. ಶಿವಾಜಿ ಕಾಲದಲ್ಲಿ ಗುಮ್ಮಟೆಯ ಶಬ್ದದ ಮೂಲಕ ಅನಾಹುತದ ಸೂಚನೆ ಜನರಿಗೆ ತಿಳಿಸಲು ಬಳಸುತ್ತಿದ್ದರು. ನಾವು ಮನವಿ ನೀಡಿzವೆ. ಮನುಷ್ಯ ಇಲ್ಲದೇ ವ್ಯವಸ್ಥೆಗಳಿಲ್ಲ. ಮನುಷ್ಯ ಇಲ್ಲದೇ ರಸ್ತೆ ,ವಿಮಾನ ಇದ್ದರೆ ಏನು ಪ್ರಯೋಜನ. ನಮ್ಮನ್ನು ಕೊಂದು ಬೀದಿಪಾಲು ಮಾಡಿ ಅಭಿವೃದ್ಧಿ ಆಗುವುದಲ್ಲ. ಮರಾಠಿ ಸಮುದಾಯ ದೇಶದ ಮೂಲೆ ಮೂಲೆಯಲ್ಲೂ ಇದೆ. ನಡದಲ್ಲಿ ಮಾತ್ರವಲ್ಲ ಇಡೀ ದೇಶಕ್ಕೆ ಹರಡುತ್ತದೆ ಅಂತ ಎಚ್ಚರಿಕೆ ಕೊಡುತ್ತಿದ್ದೇವೆ. – ವಸಂತ್, ಮಲೆಯಡ್ಕ ನಿವಾಸಿ

LEAVE A REPLY

Please enter your comment!
Please enter your name here