






ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಹಾಗೂ ಆಸ್ಪತ್ರೆ ಶಾಂತಿವನದ ಉಪನ್ಯಾಸಕಿ, ವೈದ್ಯಾಧಿಕಾರಿ ಡಾ. ಪ್ರಕೃತಿ ಕೆದಿಲ ಅವರು ಭಾಗವಹಿಸಿ ಮಾತನಾಡಿದರು. ಅವರು ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ಉಲ್ಲೇಖಿಸಿ, ಯುವಜನತೆಯಲ್ಲಿ ಇರಬೇಕಾದ ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ, ಗುರಿ ನಿಗದಿ, ಯೋಗದ ಮಹತ್ವ ಹಾಗೂ ಯೋಗ್ಯ ಜೀವನ ಶೈಲಿ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಹಲವಾರು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಇರಬೇಕಾದ ಶಿಸ್ತು, ಆತ್ಮ ವಿಶ್ವಾಸ ಮುಂತಾದ ವಿಷಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ಎ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿಗಳನ್ನು ಹೊಂದಿ ಅವುಗಳನ್ನು ಸಾಧಿಸಲು ನಿರಂತರ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಶ್ರವಣ್ ಸ್ವಾಗತಿಸಿದರು. ಸಾರ್ಥಕ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಯಜ್ಞ ಅತಿಥಿಗಳ ಕಿರು ಪರಿಚಯ ಮಾಡಿಕೊಟ್ಟರು. ವಿದ್ಯಾರ್ಥಿ ಕಿಶಿನ್ ವಂದಿಸಿದರು.









