






ಪಟ್ಟೂರು: ಭಾರತದ ಮೇಲೆ ವಿದೇಶಿಯರಿಗೆ ಇದ್ದ ನಕರಾತ್ಮಕ ಭಾವನೆ ಹೋಗಲಾಡಿಸುವುದರ ಜೊತೆಗೆ ಕೇವಲ ಒಂದೇ ಧರ್ಮಕ್ಕೆ ಸೀಮಿತರಾಗಿರದೆ ಪರಿವ್ರಾಜಕರಾಗಿ ಬದುಕಿದ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದು. ಶಿಕ್ಷಕರು ಪಠ್ಯಕ್ರಮ ಮತ್ತು ಫಲಿತಾಂಶಕ್ಕಾಗಿ ಜೋತು ಬೀಳದೆ ಮಕ್ಕಳ ವ್ಯಕ್ತಿತ್ವ ನಿರ್ಮಾಣ ಮತ್ತು ಸಾಮಾಜಿಕ ಶಿಕ್ಷಣವನ್ನು ನೀಡುವತ್ತ ಮನ ಮಾಡಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ‘ದೇಶಭಕ್ತಿಯ ಗ್ಯಾರಂಟಿ’ ಬೆಳೆಸುವುದು ಅಗತ್ಯ ಎಂದು ಯುವ ಸಂಘಟಕ ವೃಷಾಂಕ್ ಖಾಡಿಲ್ಕರ್ ಅಭಿಪ್ರಾಯಪಟ್ಟರು.
ಅವರು ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಜ.12 ರಂದು ನಡೆದ ವಿವೇಕ ಜಯಂತಿ ಕಾರ್ಯಕ್ರಮದಲ್ಲಿ ಯುವಜನತೆ ಮತ್ತು ದೇಶಭಕ್ತಿ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಬೌದ್ಧಿಕ್ ನೀಡಿದರು.
ದೈಹಿಕ ರೂಪದ ಬದಲು ನಮ್ಮ ಆಚಾರವೇ ನಮ್ಮ ರೂಪವಾಗಿ ಇತರರಿಗೆ ಆದರ್ಶವಾಗಿರಬೇಕು. ಯುವಜನತೆ ದೇಹಪ್ರೇಮಕ್ಕಿಂತಲೂ ದೇಶಪ್ರೇಮ ಬೆಳೆಸಿಕೊಳ್ಳಿ. ಸಂತನ ಬದುಕು ಕೇವಲ ಮಠ ಮಂದಿರಗಳಿಗಷ್ಟೇ ಸೀಮಿತವಾಗಿರದೆ, ಸಮಾಜದ ಬಡವರ ಹಾಗೂ ದೀನರ ಉದ್ದಾರಕ್ಕಾಗಿ ಎಂಬಂತೆ ಬದುಕಿ ತೋರಿಸಿದ ಮಹಾ ಚೇತನ ವಿವೇಕಾನಂದರು.



ವಿಜ್ಞಾನ ತಂತ್ರಜ್ಞಾಗಳಲ್ಲಿ ಯುವ ಜನತೆ ಹೆಚ್ಚೆಚ್ಚು ಕೊಡುಗೆಗಳನ್ನು ನೀಡುವ ಮೂಲಕ ಭಾರತವನ್ನು ಸದೃಢಗೊಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನಾಡಿದರು. ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೇಟ್ ಮಾತನಾಡಿ, ನಮ್ಮ ಶಾಲೆಯಲ್ಲಿ ವಿವೇಕಾನಂದರ ಚಿಂತನೆಯ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು ದೇಶಕ್ಕೋಸ್ಕರ ದುಡಿಯುವ ತುಡಿತ ಯುವ ಮನಸ್ಸುಗಳಿಗಿರಬೇಕು ಎಂದರು. ವಿದ್ಯಾರ್ಥಿಗಳು ನಾಲ್ಕು ದೇಶಭಕ್ತಿ ಗೀತೆಯ ಸಮೂಹ ಗಾಯನ ಹಾಡಿದರು.
ಶಾಲಾ ವಿದ್ಯಾರ್ಥಿಗಳು ಘೋಷ್ ಪಥ ಸಂಚಲನ ನಡೆಸಿದರು. ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದ ವಿವೇಕ ಜಯಂತಿಯ ನೇರ ಪ್ರಸಾರವನ್ನು ವಿದ್ಯಾರ್ಥಿಗಳಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳು ಸಾಮೂಹಿಕ ವಂದೇ ಮಾತರಂ ಗಾಯನವನ್ನು ಹಾಡಿದರು. ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ಚಿತ್ರ ಸ್ವಾಗತಿಸಿದರು. ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಧನ್ಯಶ್ರೀ ವಂದಿಸಿದರು.









