






ಬೆಳ್ತಂಗಡಿ: ಮಾನವ ಹಕ್ಕುಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತಿವೆ. ಇವು ಇನ್ನಷ್ಟು ಸಮಾನತೆ ಮತ್ತು ನ್ಯಾಯದ ದಿಕ್ಕಿನಲ್ಲಿ ಬೆಳೆಯಬೇಕಾದರೆ ಪ್ರತಿಯೊಬ್ಬರೂ ಮಾನವ ಹಕ್ಕುಗಳನ್ನು ಗೌರವಿಸಿ ಪಾಲಿಸಬೇಕು. ಮಾನವ ಹಕ್ಕುಗಳನ್ನು ತಿಳಿದುಕೊಳ್ಳುವುದು ಮಾತ್ರವಲ್ಲ, ಅವುಗಳನ್ನು ಅನುಭವಿಸುವುದು ಮತ್ತು ಅನುಸರಿಸುವುದು ಬಹಳ ಮುಖ್ಯ ಎಂದು ಸುರತ್ಕಲ್ (ಮಂಗಳೂರು) ಶ್ರೀ ಗೋವಿಂದ ದಾಸ ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಆಶಾಲತಾ ಪಿ. ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಜ.7ರಂದು ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಮಾನವ ಹಕ್ಕುಗಳು ಎಂದರೆ ಯಾವುದೇ ರಾಷ್ಟ್ರ, ಜಾತಿ, ಧರ್ಮ, ಲಿಂಗ, ಭಾಷೆ ಅಥವಾ ವರ್ಣದ ತಾರತಮ್ಯವಿಲ್ಲದೆ, ಪ್ರಪಂಚದ ಪ್ರತಿಯೊಬ್ಬ ನಾಗರಿಕನು ಅನುಭವಿಸಬೇಕಾದ ಮೂಲಭೂತ ಹಕ್ಕುಗಳು. ಇವು ಪ್ರತಿಯೊಬ್ಬ ವ್ಯಕ್ತಿಗೂ ಘನತೆಯುಳ್ಳ, ಗೌರವಯುತವಾದ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ. ಯಾವುದೇ ರೀತಿಯ ದೌರ್ಜನ್ಯ, ಶೋಷಣೆ, ಭೇದಭಾವ ಅಥವಾ ಭಯವಿಲ್ಲದೆ, ಶಾಂತಿಯುತ ಹಾಗೂ ಸ್ವತಂತ್ರ ಜೀವನವನ್ನು ನಡೆಸುವ ಹಕ್ಕುಗಳೇ ಮಾನವ ಹಕ್ಕುಗಳು. ಈ ಹಕ್ಕುಗಳು ಕಾಲಕ್ರಮೇಣ ಬೆಳವಣಿಗೆ ಹೊಂದುತ್ತಾ ಬರುತ್ತಿವೆ. ಇದು ಒಂದು ಚಲನಶೀಲ ಪರಿಕಲ್ಪನೆಯಾಗಿದ್ದು, ಸಮಾಜದ ನಾಗರಿಕತೆ, ಜನರ ಜೀವನಶೈಲಿ, ಅವರ ಆಶೆ-ಆಕಾಂಕ್ಷೆಗಳು ಬದಲಾಗುವಂತೆ ಮಾನವ ಹಕ್ಕುಗಳ ಅರ್ಥ ಮತ್ತು ವ್ಯಾಪ್ತಿಯೂ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದರು.
ನೂರಾರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ಸಂವಿಧಾನದ ಮೂಲ ಆಶಯ. ಆದರೆ ವಾಸ್ತವದಲ್ಲಿ, ತಾಯಿ ಅಪರಾಧ ಮಾಡಿದ್ದ ಕಾರಣಕ್ಕೆ ಆಕೆಯ ಮಗು ಯಾವುದೇ ಅಪರಾಧ ಮಾಡದಿದ್ದರೂ ತಾಯಿಯ ಜೊತೆಯಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾದಂತಹ ಕಾನೂನು ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ಇಂತಹ ಅಸಮಾನತೆಗಳನ್ನೇ ಮಾನವ ಹಕ್ಕುಗಳ ಅಧ್ಯಯನ ಪ್ರಶ್ನಿಸುತ್ತದೆ ಎಂದು ಅವರು ತಿಳಿಸಿದರು.


ಇಂದು ವಿಕಲಚೇತನರು ಹಾಗೂ ವಿವಿಧ ವಂಚಿತ ಸಮುದಾಯಗಳ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವವ್ಯಾಪಿ ಅಭಿಯಾನಗಳು ಮತ್ತು ಆಂದೋಲನಗಳು ಆರಂಭಗೊಂಡಿವೆ. ಮಕ್ಕಳ ಹಕ್ಕುಗಳು, ಮಹಿಳಾ ಹಕ್ಕುಗಳು, ಕಾರ್ಮಿಕರ ಹಕ್ಕುಗಳು ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಾನವ ಹಕ್ಕುಗಳ ಚಳವಳಿ ಬಲ ಪಡೆಯುತ್ತಿದೆ. ಟ್ರಾನ್ಸ್ಜೆಂಡರ್ ಸಮುದಾಯಕ್ಕೆ 2014ರ ಮೊದಲು ಸಮಾನ ಸ್ಥಾನಮಾನ, ಮಾನ್ಯತೆ ಇರಲಿಲ್ಲ. ಆದರೆ 2014ರ ಐತಿಹಾಸಿಕ ತೀರ್ಪು, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ‘ತೃತೀಯ ಲಿಂಗ’ ಎಂಬ ಕಾನೂನುಬದ್ಧ ಸ್ಥಾನಮಾನ ನೀಡಿತು. ಇದರಿಂದ ಅವರಿಗೆ ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಸೇವೆಗಳಲ್ಲಿಯೂ ಸಮಾನ ಅವಕಾಶ ದೊರೆಯುವಂತಾಯಿತು ಎಂದು ಅವರು ವಿವರಿಸಿದರು.
ಮಾನವ ಹಕ್ಕುಗಳನ್ನು ಅನುಭವಿಸೋಣ. ಜವಾಬ್ದಾರಿಗಳನ್ನು ಸಂವಿಧಾನಬದ್ಧವಾಗಿ ನಿರ್ವಹಿಸೋಣ. ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿಯಾಗೋಣ. ಸಂವಿಧಾನದ ಆಶಯಗಳನ್ನು ಗೌರವಿಸೋಣ. ಜಾತಿ, ಧರ್ಮ, ಜನಾಂಗವನ್ನು ಮೀರಿದ ಮಾನವೀಯ ಸಮಾಜವನ್ನು ನಾವೆಲ್ಲರೂ ಸೇರಿ ಕಟ್ಟೋಣ ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀ ಧ. ಮಂ. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ನಟರಾಜ್ ಎಚ್.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ನೋಡುತ್ತಾ ಸುಮ್ಮನೆ ಇರಬಾರದು; ಅದನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ. ಯಾಕೆಂದರೆ ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಸಮಾನವಾಗಿ ಸೇರಿವೆ ಎಂದರು.
ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನತೆ ದೊರಕಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ನಿಜವಾದ ಮಾನವ ಹಕ್ಕುಗಳ ಆಶಯ. ಈ ಆಶಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಚಾಲ್ತಿಗೆ ತರುವಂಥ ಪ್ರಯತ್ನ ಮಾಡೋಣ ಎಂದರು. ವಿಭಾಗದ ಪ್ರಾಧ್ಯಾಪಕ ಡಾ. ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶರಣಪ್ಪ ಸ್ವಾಗತಿಸಿದರು. ಪದ್ಮಶ್ರೀ ಅತಿಥಿ ಪರಿಚಯಿಸಿದರು. ಅಚಲ ಕಾರ್ಯಕ್ರಮ ನಿರೂಪಿಸಿದರು. ಧನುಷ್ ವಂದಿಸಿದರು.









