






ಬೆಳ್ತಂಗಡಿ: ‘ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಡಿಜಿಟಲ್ ಶಿಕ್ಷಣವು ಕಲಿಕೆಯನ್ನು ಪರಿಣಾಮಕಾರಿಯಾಗಿ ಮಾಡಬಲ್ಲದು. ಸ್ಮಾರ್ಟ್ ಬೋರ್ಡ್ ಬಳಕೆಯಿಂದ ದೃಶ್ಯಾತ್ಮಾಕ ಶಿಕ್ಷಣವು ದೊರೆಯುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯು ಸುಲಭ ಮತ್ತು ಆಸಕ್ತಿದಾಯಕವಾಗುತ್ತದೆ. ಪ್ರತಿಯೊಂದು ವಿದ್ಯಾರ್ಥಿಗೂ ಕಲಿಕೆಯಲ್ಲಿ ಸಮಾನ ಅವಕಾಶ ದೊರೆಯಬೇಕು ಎಂಬುದೇ ನಮ್ಮ ಧ್ಯೇಯ ವಾಕ್ಯವಾಗಿದೆ’ ಎಂದು ಯುವ ಚಾರಿಟೇಬಲ್ ಟ್ರಸ್ಟ್ ಬೆಂಗಳೂರಿನ ಸಂಸ್ಥಾಪಕ ಜಿ. ಕಿರಣ್ ಸಾಗರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಬದನಾಜೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಶಾಲೆಯಲ್ಲಿ ತಮ್ಮ ಟ್ರಸ್ಟಿನ ವತಿಯಿಂದ ಸ್ಮಾರ್ಟ್ ಬೋರ್ಡನ್ನು ಹಸ್ತಾಂತರಿಸಿ ಮಾತನಾಡಿದರು.


ಟ್ರಸ್ಟಿನ ಪರಿಚಯವನ್ನು ಮಾಡಿಕೊಟ್ಟ ಟ್ರಸ್ಟ್ ನ ಅಧ್ಯಕ್ಷ ಬಿ.ವಿ. ಸುನಿಲ್ ಅವರು ಮಾತನಾಡಿ ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಇರಿಸಿಕೊಂಡು ಯುವ ಟ್ರಸ್ಟ್ ಈ ಬಾರಿ ಹೆಚ್ಚಿನ ವಿದ್ಯಾರ್ಥಿಗಳು ಇರುವ ದಕ್ಷಿಣ ಕನ್ನಡ ಜಿಲ್ಲೆಯ ಹನ್ನೊಂದು ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮೊದಲ ಹಂತದಲ್ಲಿ ತಲಾ ಒಂದು ಸ್ಮಾರ್ಟ್ ಬೋರ್ಡನ್ನು ನೀಡುತ್ತಿದ್ದೇವೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕೌಶಲ್ಯಾಭಿವೃದ್ಧಿ ತರಬೇತಿಗಳು. ಆರೋಗ್ಯ ಮತ್ತು ಸ್ವಾಸ್ಥ್ಯ ಕಾರ್ಯಾಗಾರಗಳು, ರಕ್ತದಾನ ಶಿಬಿರಗಳು, ಸಾಹಿತ್ಯ ಚಟುವಟಿಕೆಗಳಂತಹ ಹಲವು ಸಮಾಜಮುಖಿ ಕಾರ್ಯಗಳನ್ನು ಟ್ರಸ್ಟ್ ನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಜಮುನಾ ‘ಯುವ ಟ್ರಸ್ಟ್ ನ ಸಹಾಯವನ್ನು ನಮ್ಮ ವಿದ್ಯಾರ್ಥಿಗಳು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಪರಿಣಾಮಕಾರಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರೆ’ ಎಂಬ ವಿಶ್ವಾಸದ ಮಾತುಗಳೊಂದಿಗೆ ಈ ಕಾರ್ಯಕ್ರಮಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಉಭಯ ಶಾಲೆಗಳ ಎಸ್. ಡಿ. ಎಂ. ಸಿ ಮುಖ್ಯಸ್ಥ ಅನಿಲ್ ಡಿಸೋಜ ಮತ್ತು ಅರುಣಾಕ್ಷಿ ಉಪಸ್ಥಿತರಿದ್ದರು. ಜಯ ಸ್ವಾಗತಿಸಿದರು. ಶಿಕ್ಷಕರಾದ ರಾಮಕೃಷ್ಣ ಎಸ್. ಕೆ. ನಿರೂಪಿಸಿದರು.









