ಬುರುಡೆ ಪ್ರಕರಣ: ಎಸ್‌ಐಟಿಯ ಮಧ್ಯಂತರ ವರದಿ ಪರಿಗಣಿಸಲು ಕೋರ್ಟ್ ನಕಾರತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲು ನ್ಯಾಯಾಧೀಶರಿಂದ ನಿರ್ದೇಶನ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಪರಿಗಣಿಸಲು ನಿರಾಕರಿಸಿರುವ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ನಿರ್ದೇಶನ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಅವರು ಜ.೨೩ಕ್ಕೆ ನಿಗದಿ ಪಡಿಸಿದ್ದಾರೆ. ಇದರೊಂದಿಗೆ ಧರ್ಮಸ್ಥಳ ಕ್ಷೇತ್ರವನ್ನು ಸಂತ್ರಸ್ತ ಎಂದು ಪರಿಗಣಿಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿ ಹಾಗೂ ಎಸ್‌ಐಟಿ ವರದಿ ಹಾಗೂ ಧರ್ಮಸ್ಥಳ ಕ್ಷೇತ್ರವನ್ನು ಸಂತ್ರಸ್ತ ಎಂದು ಪರಿಗಣಿಸಲು ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಪ್ರಶ್ನಿಸಲಾಗಿರುವ ತಕರಾರು ಅರ್ಜಿಯ ವಿಚಾರಣೆಯೂ ನಡೆಯಲಿದೆ.

ನ್ಯಾಯಾಲಯದ ನಿರ್ದೇಶನ: ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪರಿಸರದಲ್ಲಿ ಕೊಲೆಯಾದವರ ಮೃತದೇಹಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂಬ ದೂರಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದರಲ್ಲದೆ ಮುಂದಿನ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ನ. ೨೦ರಂದು ನ್ಯಾಯಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದ ಎಸ್‌ಐಟಿ ಅಧಿಕಾರಿಗಳು ಪ್ರಾರಂಭದಲ್ಲಿ ಸಾಕ್ಷಿ ದೂರುದಾರನಾಗಿದ್ದು ಆ ಬಳಿಕ ಆರೋಪಿಯಾಗಿ ಪರಿಗಣಿಸಲ್ಪಟ್ಟು ಬಂಧಿತನಾಗಿದ್ದ ಮಂಡ್ಯ ಮೂಲದ ಚಿನ್ನಯ್ಯ ಮತ್ತು ಚಿನ್ನಯ್ಯನಿಗೆ ಸಹಕಾರ ನೀಡಿದ ಕಾರಣಕ್ಕಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ ಗೌಡ ಹಾಗೂ ಸುಜಾತ ಭಟ್ ಅವರನ್ನು ಆರೋಪಿಗಳನ್ನಾಗಿ ಉಲ್ಲೇಖಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳೊಂದಿಗೆ ೩೯೨೩ ಪುಟಗಳ ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಎಸ್‌ಐಟಿ ಅಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ ೨೧೫ರಡಿ ಸುಳ್ಳು ಸಾಕ್ಷಿಯ ಅಪರಾಧಕ್ಕಾಗಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಎಸ್‌ಐಟಿ ಪರ ವಾದ ಮಂಡಿಸುತ್ತಿರುವ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ಕೆಲವೊಂದು ಮಹತ್ವದ ಅಂಶಗಳನ್ನು ನ್ಯಾಯಾಲಯದ ಮುಂದಿಟ್ಟು ಮುಂದಿನ ಕಾನೂನು ಕ್ರಮಕ್ಕಾಗಿ ವಿನಂತಿಸಿದ್ದರು.

ಡಿ. ೯ರಂದು ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿದ್ದು ಡಿ. ೨೬ರಂದು ಈ ಕುರಿತು ಆದೇಶ ನೀಡುವುದಾಗಿ ನ್ಯಾಯಾಧೀಶರು ಪ್ರಕಟಿಸಿದ್ದರು. ಬಳಿಕ ಅದನ್ನು ಡಿ. ೨೯ ಹಾಗೂ ಜ. ೩ಕ್ಕೆ ಮುಂದೂಡಿದ್ದರು.
ಜ.೩ರಂದು ಪ್ರಕರಣವನ್ನು ಕೈಗೆತ್ತಿಕೊಂಡ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ಎಸ್‌ಐಟಿಯು ವರದಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ.

ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಅಂಶದ ಆಧಾರದಲ್ಲಿ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ. ಎಸ್‌ಐಟಿಯ ಅಂತಿಮ ವರದಿಗೆ ಸಂಬಂಧಿಸಿ ಜ. ೨೩ಕ್ಕೆ ವಿಚಾರಣೆ ನಡೆಯಲಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಮತ್ತೆ ತನಿಖೆ ಆರಂಭಿಸಿ ಜ. ೨೩ಕ್ಕೆ ಅಂತಿಮ ವರದಿ ಸಲ್ಲಿಸುತ್ತಾರೆಯೋ ಅಥವಾ ಮತ್ತೆ ಸಮಯಾವಕಾಶ ಕೇಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಮುಖ್ಯ ತನಿಖಾಧಿಕಾರಿಯಾಗಿರುವ ಎಸ್‌ಐಟಿಯ ಎಸ್‌ಪಿ ಜಿತೇಂದ್ರ ಕುಮಾರ್ ಅವರು ನ್ಯಾಯಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದು ನ್ಯಾಯಾಲಯದ ವಿಚಾರಣೆಯ ವೇಳೆ ಎಸ್‌ಐಟಿಯ ಇನ್ನೋರ್ವ ಎಸ್‌ಪಿ ಸೈಮನ್ ಮತ್ತಿತರರು ಹಾಜರಿದ್ದರು.

ಬಂಟ್ವಾಳದಲ್ಲಿ ಮುಂದಿನ ವಿಚಾರಣೆ:ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ನಾಲ್ಕು ತಿಂಗಳು ತರಬೇತಿಗೆ ತೆರಳುತ್ತಿರುವುದರಿಂದ ಅವರು ವಿಚಾರಣೆ ನಡೆಸುತ್ತಿರುವ ಎಲ್ಲ ಪ್ರಕರಣಗಳು ಬಂಟ್ವಾಳ ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳಲಿದೆ. ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿಯ ವರದಿ ಹಾಗೂ ಇತರ ಅರ್ಜಿಗಳು ಬಂಟ್ವಾಳ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿದೆ.

ಬೆಳ್ತಂಗಡಿಯಲ್ಲಿ ಖ್ಯಾತ ವಕೀಲರು: ಸಾರ್ವಜನಿಕರಲ್ಲಿ ಕುತೂಹಲ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ರಾಜ್ಯದ ಖ್ಯಾತ ವಕೀಲರು ಆಗಮಿಸುತ್ತಿರುವುದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ತಮ್ಮ ಸಮರ್ಥ ಮತ್ತು ತರ್ಕಬದ್ಧ ವಾದ ಮಂಡನೆಯ ಮೂಲಕ ಹಲವು ಕ್ಲಿಷ್ಟಕರ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ನ್ಯಾಯ ಒದಗಿಸಿರುವ ಸಿ.ವಿ.ನಾಗೇಶ್ ಮತ್ತು ದೊರೆರಾಜು ಅವರು ರಾಜ್ಯದ ಪ್ರಸಿದ್ಧ ವಕೀಲರು. ತಮ್ಮ ವಾಕ್ಚಾತುರ್ಯ, ಆಳವಾದ ಅಧ್ಯಯನ, ಎದುರುವಾದಿಗಳನ್ನು ಇಕ್ಕಟ್ಟಿಗೆ ಸಿಲುಕಿಸಬಲ್ಲ ಚಾಣಾಕ್ಷತನ, ತಂತ್ರಗಾರಿಕೆ ಇತ್ಯಾದಿಗಳಿಂದಲೇ ಖ್ಯಾತರಾಗಿರುವ ಸಿ.ವಿ. ನಾಗೇಶ್ ಮತ್ತು ದೊರೆರಾಜು ಅವರು ಎದುರು ಬದುರು ಆಗುವುದೇ ವ್ಯಾಪಕ ಕುತೂಹಲ ಉಂಟು ಮಾಡಿದೆ.

ಧರ್ಮಸ್ಥಳ ಕ್ಷೇತ್ರದ ಪರ ವಾದಿಸುತ್ತಿರುವ ಸಿ.ವಿ.ನಾಗೇಶ್ ಅವರ ತಂಡದಲ್ಲಿ ಧರ್ಮಸ್ಥಳ ಕ್ಷೇತ್ರದ ಪರ ಕಾನೂನು ಹೋರಾಟ ಮಾಡುತ್ತಿರುವ ಹೈಕೋರ್ಟ್ ವಕೀಲ ರಾಜಶೇಖರ ಇಲ್ಯಾರ್ ಮತ್ತು ಇ.ಡಿ. ಪರ ನ್ಯಾಯವಾದಿಯೂ ಆಗಿರುವ ಖ್ಯಾತ ಕ್ರಿಮಿನಲ್ ನ್ಯಾಯವಾದಿ ಮಹೇಶ್ ಕಜೆ ಇದ್ದಾರೆ. ಇವರೊಂದಿಗೆ ಕೇಶವ ಗೌಡ ಬೆಳಾಲು, ಸುನಿಲ್, ಪ್ರದೀಪ್ ಮತ್ತಿತರರು ಕೈಜೋಡಿಸಿದ್ದಾರೆ. ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಜಯಂತ್ ಟಿ. ಪರ ವಾದ ಮಂಡಿಸುತ್ತಿರುವ ದೊರೆರಾಜು ಅವರೊಂದಿಗೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡೀಪಾರು ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ವಿಜಯ ವಾಸು ಪೂಜಾರಿ ಮತ್ತು ಉಡುಪಿಯ ಅಂಬಿಕಾ ಪ್ರಭು ಇದ್ದಾರೆ.

ಸ್ಥಳೀಯವಾಗಿ ಬೆಳ್ತಂಗಡಿಯ ಯುವ ನ್ಯಾಯವಾದಿ ಸಿರಾಜುದ್ದೀನ್ ಕೈಜೋಡಿಸಿದ್ದಾರೆ. ಎಸ್‌ಐಟಿ ಪರ ಈಗಾಗಲೇ ಬೆಳ್ತಂಗಡಿ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಪುತ್ತೂರು ಅವರು ವಾದ ಮಂಡಿಸಿ ಗಮನ ಸೆಳೆಯುತ್ತಿದ್ದಾರೆ. ಈ ಮೂರು ತಂಡಗಳ ವಕೀಲರ ವಾದ ಪ್ರತಿವಾದ ಆಲಿಸಲು ಹಿರಿಯ ಕಿರಿಯ ವಕೀಲರು ಮಾತ್ರವಲ್ಲದೆ ಸಾರ್ವಜನಿಕರೂ ಕುತೂಹಲಿಗರಾಗಿದ್ದಾರೆ.

ಬೆಳಗ್ಗೆ ಸಲ್ಲಿಸಿದ್ದ ಅರ್ಜಿ ಮಧ್ಯಾಹ್ನ ವಾಸಪ್: ಇನ್ನೊಂದು ಅರ್ಜಿ ಸಲ್ಲಿಸಲು ಸಿದ್ಧತೆ -ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಕೋರಿ ಧರ್ಮಸ್ಥಳ ಕ್ಷೇತ್ರದ ಪರ ವಕೀಲರು ಸಲ್ಲಿಸಿರುವ ಅರ್ಜಿಗೆ ಮತ್ತು ಎಸ್‌ಐಟಿ ಸಲ್ಲಿಕೆ ಮಾಡಿರುವ ಮಧ್ಯಂತರ ವರದಿಗೆ ಆಕ್ಷೇಪಣೆ ಸಲ್ಲಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಜಯಂತ್ ಟಿ. ಅವರ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ದೊರೆರಾಜು ಅವರು ಜ.೩ರಂದು ಬೆಳಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ ಮಧ್ಯಾಹ್ನ ವಾಪಸ್ ಪಡೆದ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದೇ ನ್ಯಾಯಾಲಯದಲ್ಲಿ ವಾದ ಮಂಡನೆಗೆ ನಮಗೆ ಅವಕಾಶ ಕೊಡಬೇಕು. ಇಲ್ಲಿ ವಾದ ಮಂಡನೆಗೆ ಅವಕಾಶ ಕೊಡದೇ ಹೋದರೆ ನಾವು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಬೇಕಾಗುತ್ತದೆ. ಇದಕ್ಕೆ ಬೇಕಾದ ಖರ್ಚು ಭರಿಸಲು ನಮ್ಮ ಅರ್ಜಿದಾರರಿಗೆ ಸಾಧ್ಯವಿಲ್ಲ. ಎಸ್‌ಐಟಿ ತನಿಖೆಗೆ ಸಂಬಂಧಿಸಿದಂತೆ ನಮ್ಮ ಕಕ್ಷಿದಾರರ ಹೆಸರೂ ಉಲ್ಲೇಖ ಆಗಿರುವುದರಿಂದ ನಮಗೆ ಈ ನ್ಯಾಯಾಲಯದಲ್ಲಿಯೇ ವಾದ ಮಂಡನೆಗೆ ಅವಕಾಶ ನೀಡಬೇಕು ಎಂದು ಮೌಖಿಕವಾಗಿ ಮನವಿ ಮಾಡಿದ್ದ ದೊರೆರಾಜು ಅವರು ಇದೇ ವೇಳೆ ಲಿಖಿತ ಅರ್ಜಿಯೊಂದನ್ನು ಸಲ್ಲಿಸಿದರು. ಮಧ್ಯಾಹ್ನದ ವೇಳೆ ಯಾವುದೇ ಕಾರಣ ನೀಡದೆ ಈ ಅರ್ಜಿಯನ್ನು ವಾಪಸ್ ಪಡೆದರು. ಇದು ಬಹಳಷ್ಟು ಕುತೂಹಲ ಕೆರಳಿಸಿತ್ತಲ್ಲದೆ ವ್ಯಾಪಕ ಚರ್ಚೆಗೆ ಗ್ರಾಸ ಒದಗಿಸಿದೆ. ಪರಿಷ್ಕೃತ ಅರ್ಜಿ ಸಲ್ಲಿಸಲು ಬಯಸಿದ್ದರಿಂದ ಆ ಅರ್ಜಿಯನ್ನು ವಾಪಸ್ ಪಡೆದುಕೊಂಡ ಅವರು ಮುಂದಿನ ವಿಚಾರಣೆಯ ವೇಳೆ ಮತ್ತೊಂದು ಅರ್ಜಿ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಧರ್ಮಸ್ಥಳ ಕ್ಷೇತ್ರದ ಪರ ಅರ್ಜಿ-ಜ. ೨೩ಕ್ಕೆ ವಿಚಾರಣೆ-ಬುರುಡೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬ ಅಂಶಗಳು ಎಸ್‌ಐಟಿ ತನಿಖೆಯ ವರದಿಯಲ್ಲಿ ದಾಖಲಾಗಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು `ಸಂತ್ರಸ್ತ’ ಎಂದು ಪರಿಗಣಿಸುವಂತೆ ಆಗ್ರಹಿಸಿ ಧರ್ಮಸ್ಥಳ ಕ್ಷೇತ್ರದ ಪರ ವಕೀಲರ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಮುಂದಿನ ವಿಚಾರಣೆ ಜ.೨೩ಕ್ಕೆ ಮುಂದೂಡಲ್ಪಟ್ಟಿದೆ. ಡಿ. ೩೧ರಂದು ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಅವರು ಧರ್ಮಸ್ಥಳದ ಪರ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ಸಿ.ವಿ. ನಾಗೇಶ್ ಅವರ ಸುಧೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ವಿಚಾರಣೆಯನ್ನು ಜ. ೩ಕ್ಕೆ ಮುಂದೂಡಿದ್ದರು. ಜ.೩ರಂದು ಧರ್ಮಸ್ಥಳ ಪರ ನ್ಯಾಯವಾದಿ ರಾಜಶೇಖರ್ ಇಲ್ಯಾರ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜ.೨೩ಕ್ಕೆ ಮುಂದೂಡಿದ್ದಾರೆ. ನ್ಯಾಯಾಲಯದ ಕಲಾಪ ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಧರ್ಮಸ್ಥಳದ ಪರ ನ್ಯಾಯವಾದಿ ಕೇಶವ ಗೌಡ ಬೆಳಾಲು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತ ಎಂದು ಪರಿಗಣಿಸುವಂತೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ ದಿನಾಂಕ ನೀಡಿದೆ. ಧರ್ಮಸ್ಥಳ ಕ್ಷೇತ್ರವು ಆರೋಪಗಳಿಂದ ಸಾಕಷ್ಟು ನೊಂದಿದೆ. ಹೀಗಾಗಿ ಸಂತ್ರಸ್ತ ಎಂದು ಪರಿಗಣಿಸಿ ವಿಚಾರಣೆಯಲ್ಲಿ ನಮಗೂ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿzವೆ. ವಿಚಾರಣೆಯ ಬಳಿಕ ನ್ಯಾಯಾಲಯ ಆದೇಶ ನೀಡಲಿದೆ. ಜತೆಗೆ ಎಸ್‌ಐಟಿಯು ಹಾಲಿ ಸಲ್ಲಿಕೆ ಮಾಡಿರುವ ಬಿಎನ್‌ಎಸ್‌ಎಸ್ ಸೆಕ್ಷನ್ ೨೧೫ರಡಿ ವರದಿಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿರುವ ನ್ಯಾಯಾಧೀಶರು ತನಿಖೆ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ. ಶನಿವಾರ ಬೆಳಗ್ಗೆ ಬೆಂಗಳೂರಿನ ಹಿರಿಯ ವಕೀಲರೊಬ್ಬರು ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದು ಅರ್ಜಿ ಹಾಕಿ ಮಧ್ಯಾಹ್ನ ಅರ್ಜಿ ಹಿಂದಕ್ಕೆ ಪಡೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದೆ ಅರ್ಜಿ ಹಿಂದಕ್ಕೆ ಪಡೆದಿರುವುದು ಯಾಕೆ ಎಂಬುದು ಗೊತ್ತಾಗಿಲ್ಲ ಎಂದು ಕೇಶವ ಗೌಡ ತಿಳಿಸಿದರು.

ಧರ್ಮಸ್ಥಳ ಪರ ಅರ್ಜಿ ಮತ್ತು ಎಸ್‌ಐಟಿ ವರದಿಗೆ ದೊರೆರಾಜು ತರಕಾರು: ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ತಕರಾರು ಅರ್ಜಿಯ ವಿಚಾರಣೆ ಜ.೨೩ಕ್ಕೆ ನಿಗದಿಯಾಗಿದೆ. ಎಸ್‌ಐಟಿ ಅಪೂರ್ಣ ವರದಿ ಸಲ್ಲಿಕೆ ಮಾಡಿದೆ ಎಂದು ಆಕ್ಷೇಪಿಸಿ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಜಯಂತ್ ಟಿ. ಸಲ್ಲಿಸಿರುವ ತಕರಾರು ಅರ್ಜಿಯ ಕುರಿತು ಹಿರಿಯ ನ್ಯಾಯವಾದಿ ದೊರೆರಾಜು ಅವರು ಜ.೩ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ವಾದ ಮಂಡಿಸಿದ್ದರು. ಬಳಿಕ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಡಿ. ೨೯ಕ್ಕೆ ನಾವು ಅರ್ಜಿ ಹಾಕಿ ವಾದ ಮಂಡನೆಗೆ ಅವಕಾಶ ಕೇಳಿದ್ದೆವು. ನಮ್ಮ ಅರ್ಜಿ ಸ್ವೀಕಾರವೂ ಆಗಿಲ್ಲ ತಿರಸ್ಕಾರವೂ ಆಗಿಲ್ಲ. ಹೀಗಾಗಿ ವಾದ ಮಂಡಿಸಲು ನ್ಯಾಯಾಧೀಶರಲ್ಲಿ ಸಮಯಾವಕಾಶ ಕೇಳಿದ್ದೆವು. ಪ್ರಾರಂಭದಲ್ಲಿ ಅವಕಾಶ ನಿರಾಕರಣೆಯಾದರೂ ಮತ್ತೆ ವಾದ ಮಂಡಿಸಲು ಶನಿವಾರ ಅವಕಾಶ ನೀಡಿದ್ದರು. ಶನಿವಾರ ನಮ್ಮ ವಾದ ಮಂಡಿಸಲಾಗಿದ್ದು ಮುಂದಿನ ವಿಚಾರಣೆ ಜ. ೨೩ಕ್ಕೆ ಮುಂದೂಡಲ್ಪಟ್ಟದೆ ಎಂದು ತಿಳಿಸಿದರು. ಧರ್ಮಸ್ಥಳವನ್ನು ಸಂತ್ರಸ್ತ ಎಂದು ಪರಿಗಣಿಸುವ ಅರ್ಜಿ ಹಾಗೂ ಸಾಕ್ಷಾಧಾರಗಳ ಕೊರತೆ ಇರುವ ಎಸ್‌ಐಟಿಯ ಅಪೂರ್ಣ ವರದಿಗೆ ನಮ್ಮ ತಕರಾರು ಇದೆ ಎಂದು ತಕರಾರು ಅರ್ಜಿ ಸಲ್ಲಿಸಿzನೆ ಎಂದು ದೊರೆರಾಜು ತಿಳಿಸಿದರು.

ಗಡೀಪಾರು ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ: ಬೆಳ್ತಂಗಡಿ: ತಮ್ಮನ್ನು ಮತ್ತೆ ೯ ತಿಂಗಳ ಕಾಲ ಗಡೀಪಾರು ಮಾಡಿರುವ ಸರಕಾರದ ಕ್ರಮ ಪ್ರಶ್ನಿಸಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ತನ್ನನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಸರಹದ್ದಿಗೆ ಗಡೀಪಾರು ಮಾಡಿರುವ ಕ್ರಮ ಪ್ರಶ್ನಿಸಿ ಮಹೇಶ್ ಶೆಟ್ಟಿ ಅರ್ಜಿ ಸಲ್ಲಿಸಿದ್ದು ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ. ಅರ್ಜಿಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ, ಪುತ್ತೂರು ಉಪವಿಭಾಗಾಧಿಕಾರಿ, ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಅರ್ಜಿದಾರರ ವಿರುದ್ಧ ಕಾನೂನು ಪ್ರಕಾರ ಅಗತ್ಯವಿರುವ ಎಲ್ಲ ನಿಯಮ ಅನುಸರಿಸಿ ಮತ್ತೆ ಗಡೀಪಾರು ಆದೇಶ ಮಾಡಬಹುದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ ಅರ್ಜಿದಾರರ ವಿರುದ್ಧ ೧೯೯೨ರಿಂದ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಕುರಿತು ವಸ್ತು ಸ್ಥಿತಿಯ ವಿವರಣೆ ನೀಡದೆ ಖುಲಾಸೆ ಆಗಿರುವ, ವಿಚಾರಣೆ ಹಾಗೂ ತನಿಖಾ ಹಂತದಲ್ಲಿರುವ ಪ್ರಕರಣ ಉಲ್ಲೇಖಿಸಲಾಗಿದೆ ಎಂದು ಈ ಹಿಂದೆ ಹೊರಡಿಸಿದ್ದ ಗಡೀಪಾರು ಆದೇಶ ರದ್ದು ಪಡಿಸಿದ ಸಂದರ್ಭ ಹೈಕೋರ್ಟ್ ಹೇಳಿತ್ತು. ಈ ನಡುವೆ ತಮ್ಮ ನಡವಳಿಕೆ ಮತ್ತು ಚಟುವಟಿಕೆಗಳು ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯುಂಟು ಮಾಡುತ್ತದೆ ಎಂಬುದನ್ನು ತೀರ್ಮಾನಿಸುವುದಕ್ಕೆ ಅಗತ್ಯ ಸಾಕ್ಷ್ಯಗಳ ಆಧಾರದ ಮೇಲೆ ಆದೇಶ ಹೊರಡಿಸುವಲ್ಲಿ ಸರಕಾರ ವಿಫಲವಾಗಿದೆ. ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುವುದು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳಲಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ದಾಖಲೆ ನೀಡಿಲ್ಲ.

ತಮ್ಮನ್ನು ಗಡೀಪಾರು ಮಾಡಿ ಆದೇಶಿಸುವುದಕ್ಕಾಗಿ ಪೂರ್ವಭಾವಿಯಾಗಿ ಪೊಲೀಸರು ಸರಣಿ ಪ್ರಕರಣ ದಾಖಲಿಸಿದ್ದಾರೆ. ಕ್ರಿಮಿನಲ್ ಪ್ರಕರಣಗಳನ್ನು ಉಲ್ಲೇಖಿಸಿ ಗಡೀಪಾರು ಆದೇಶ ಮಾಡಿದ್ದು ಈ ಆದೇಶವು ಸಂವಿಧಾನದಲ್ಲಿ ಲಭ್ಯವಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಗಡೀಪಾರು ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮಹೇಶ್ ಶೆಟ್ಟಿ ಕೋರಿದ್ದಾರೆ.

LEAVE A REPLY

Please enter your comment!
Please enter your name here