






ಗುರುವಾಯನಕೆರೆ: ಹಿರಿಯರ ಮಾರ್ಗದರ್ಶನ ಪಡೆದಾಗ ಉತ್ತಮ ಕಾರ್ಯಗಳನ್ನು ನಡೆಸಲು ಸಾಧ್ಯವಾಗುತ್ತದೆ. ಸಮುದಾಯದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ವಿವಿಧ ರೀತಿಯ ಕೊಡುಗೆಯನ್ನು ನೀಡಿದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ. ಮಂಗಳೂರು ವಿಭಾಗದ ಹೆಚ್ಚುವರಿ ಭದ್ರತಾ ಅಧೀಕ್ಷಕ ಮಧುಸೂದನ ನಾಯ್ಕ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಗುರುವಾಯನಕೆರೆ, ಬದ್ಯಾರು, ದೈಕುಕ್ಕು ಬಳಿ ಹಮ್ಮಿಕೊಂಡಿದ್ದ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ದೇವರ ಪೂಜೆ, ವಾರ್ಷಿಕ ಮಹಾಸಭೆ, 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮುದಾಯದ ಅಭಿವೃದ್ಧಿಗಾಗಿ ಜಾಗವನ್ನು ನೀಡಲಾಗಿದ್ದು, ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮುಂದೆ ಮಂಗಲಕರ ಕಾರ್ಯಗಳಿಗೆ ಈ ಪ್ರದೇಶ ಬಳಕೆಯಾದಾಗ ಸಾರ್ಥಕತೆಯ ಭಾವ ಹಾಗೂ ಹಿರಿಯರ ಆಶಯಗಳು ಈಡೇರುತ್ತದೆ, ಮುಂದಿನ ತಲೆಮಾರಿಗೂ ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೇಮೋರಿಯಲ್ ಕಾಲೇಜಿನ ಉಪನ್ಯಾಸಕಿ ಡಾ. ಪ್ರವೀಣಾ ಕುಮಾರಿ ಎಂ.ಕೆ. ಮಾತನಾಡಿ, ಸಮುದಾಯದ ಯುವ ಜನತೆ ಆತ್ಮವಿಶ್ವಾಸ, ಧೈರ್ಯ, ಶಿಸ್ತು, ಜ್ಞಾನ ಮೊದಲಾದ ಉತ್ತಮ ಗುಣ ನಡತೆಗಳನ್ನು ರೂಪಿಸಿಕೊಂಡಲ್ಲಿ ವಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜದಲ್ಲಿ ಯಶಸ್ವಿ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ, ವಿಫಲತೆ ಮೀರಿ ನಿಂತಾಗ ನಮ್ಮನ್ನು ಯಶಸ್ಸು ಅರಸಿಕೊಂಡು ಬರುತ್ತದೆ ಎಂದರು.
ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಹಾಗೂ ಜಿಲ್ಲಾ ಕೆ.ಡಿ.ಪಿ. ಸದಸ್ಯ ಸಂತೋಷ್ ಕುಮಾರ್ ಲಾಯಿಲಾ ಮಾತನಾಡಿ, ಸಮುದಾಯ ನಮಗೆ ಏನು ನೀಡಿದೆ ಎಂಬುದಷ್ಟೇ ಪ್ರತಿಯೊಬ್ಬರೂ ಚಿಂತಿಸುತ್ತಾರೆ, ಆದರೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎಂಬ ಕುರಿತೂ ಆತ್ಮ ವಿಮರ್ಷೆ ಮಾಡಿಕೊಳ್ಳುವುದೂ ಅತ್ಯಗತ್ಯ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಉತ್ತಮ ಬದಲಾವಣೆ ಮೂಡಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.


ಮಾಜಿ ಅಧ್ಯಕ್ಷ ಉಮೇಶ್ ನಾಯ್ಕ್ ಕೇಲ್ತಡ್ಕ ಮಾತನಾಡಿ, ಮಾನವ ಜನ್ಮದಲ್ಲಿ ಅತ್ಯಂತ ದಾನ- ಧರ್ಮ ಅತ್ಯಂತ ಶ್ರೇಷ್ಠವಾದ ಕಾರ್ಯ. ದಾನದಲ್ಲಿ ಪೂರ್ಣ ಮನಸ್ಸಿನಿಂದ ನಮ್ಮಿಂದಾಗುವ ಸಹಾಯ, ಸಹಕಾರ ನೀಡಬೇಕು. ಈ ಮೂಲಕ ಸಮಾಜಕ್ಕಾಗಿ ಮಧುಸೂಧನ್ ಅವರ ಕುಟುಂಬ ಜಾಗವನ್ನೇ ದಾನ ನೀಡಿರುವುದು ಶ್ರೇಷ್ಠವಾದದ್ದು, ಇದೇ ರೀತಿ ನಮ್ಮಿಂದಾಗುವ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಹೆಚ್.ಎಲ್., ಸಮುದಾಯದ ಅಭಿವೃದ್ಧಿಗೆ ಈಗಾಗಲೇ ಹಲವಾರು ಕಾರ್ಯಗಳನ್ನು ರೂಪಿಸಲಾಗಿದ್ದು, ಮುಂದೆ ಶೀಘ್ರವಾಗಿ ಈ ಹೊಸ ಜಾಗದಲ್ಲಿ ಸಭಾಭವನ ನಿರ್ಮಾಣ ಮಾಡುವ ಕಾರ್ಯ ನಡೆಸಲಾಗುವುದು. ಸಮುದಾಯದ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ ಎಂದರು.
ಜಾಗ ದಾನವಾಗಿ ನೀಡಿದ ಮಧುಸೂದನ್ ನಾಯ್ಕ್, ಬಡಕೋಡಿ ಮಹಮ್ಮಾಯಿ ದರ್ಶನಪಾತ್ರಿ ಗಂಗಾಧರ ನಾಯ್ಕ್ ಹಾಗೂ ಸ್ನಾತಕೋತ್ತರ ವಿಭಾಗದ ಇಂಗ್ಲೀಷ್ ಎಂ.ಎ.ನಲ್ಲಿ ರಾಜ್ಯಕ್ಕೆ 5ನೇ ರಾಂಕ್ ಪಡೆದ ಮಂಜುಶ್ರೀ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸೌಜನ್ಯ ಎಸ್. ನಾಯ್ಕ್, ಸುಜಿತ್ ನಾಯ್ಕ್, ನಿಶ್ಮಿತ್ ಎಸ್. ನಾಯ್ಕ್, ರಕ್ಷಿತಾ, ಸಿಂಚನ, ಅಂಕಿತ್ ನಾಯ್ಕ್, ಮನಿಷ ಬಿ.ಎನ್., ಸಮೀಕ್ಷಾ ಎಸ್., ಸ್ಪರ್ಶ ಅವರನ್ನು ಗೌರವಿಸಲಾಯಿತು. ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವರ್ಷಿಣಿ ಆರ್., ಮಧುಶ್ರೀ, ದಿವ್ಯಶ್ರೀ, ತೇಜಸ್ವಿನಿ ಅವರನ್ನು ಪುರಸ್ಕರಿಸಲಾಯಿತು.
ಅರ್ಚಕರಾದ ರತ್ನಾಕರ ನೂರಿತ್ತಾಯ ನೇತೃತ್ವದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನೆರವೇರಿತು.
ಸಂಘದ ಮಹಾ ಪೋಷಕರಾದ ಅಬಕಾರಿ ಇಲಾಖೆ ಬಂಟ್ವಾಳ ವಿಭಾಗದ ಡಿ.ವೈ.ಎಸ್.ಪಿ. ಸೌಮ್ಯಲತಾ ನಾಯ್ಕ್, ನಿವೃತ್ತ ಸೈನಿಕ ಮಂಜುನಾಥ ನಾಯ್ಕ್, ನ್ಯೂ ಇಂಡಿಯಾ ಇನ್ಶ್ಯೂರೆನ್ಸ್ ಕಂಪನಿ ನಿವೃತ್ತ ಅಧಿಕಾರಿ ಪಿ.ಕುಮಾರಯ್ಯ ನಾಯ್ಕ್, ಕೃಷಿ ಇಲಾಖೆ ನಿವೃತ್ತ ನಿರ್ದೇಶಕ ಡಾ. ಎ. ಪದ್ಮಯ ನಾಯ್ಕ್, ಸಂಘದ ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ್, ಪದಾಧಿಕಾರಿಗಳು, ಗ್ರಾಮಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದ್ಯರು, ಜಾಗ ದಾನವಾಗಿ ನೀಡಿದ ಮಧುಸೂದನ್ ನಾಯ್ಕ್ ಅವರ ಕುಟುಂಬಸ್ಥರಾದ ಸುಧಾಕರ ನಾಯ್ಕ್, ಪ್ರಭಾಕರ ನಾಯ್ಕ್, ಕಸ್ತೂರಿ, ಉಷಾ ಉಪಸ್ಥಿತರಿದ್ದರು.
ಸಂಘದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್ ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಪವಿತ್ರ ಲೋಕೇಶ್ ಪ್ರತಿಭಾ ಪುರಸ್ಕೃತರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷ ವಸಂತ ನಾಯ್ಕ್ ಹಾಗೂ ಕ್ರೀಡಾ ಕಾರ್ಯದರ್ಶಿ ರವಿ ನಾಯ್ಕ್ ನಿರೂಪಿಸಿದರು. ನಿತ್ಯೂಷಾ ಹಾಗೂ ನಿರೀಕ್ಷಾ ಪ್ರಾರ್ಥಿಸಿದರು. ಮಾಧ್ಯಮ ಕಾರ್ಯದರ್ಶಿ ಹರ್ಷಿತ್ ಪಿಂಡಿವನ ವಂದಿಸಿದರು.









