ದೀಪಾವಳಿ ವಿಶೇಷಾಂಕದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ-ಲಕ್ಕಿ ಕೂಪನ್ ಡ್ರಾ-ಡಾ. ಯು.ಪಿ. ಶಿವಾನಂದರವರಿಂದ ಬೆಳ್ತಂಗಡಿಯನ್ನು ಜೀವಂತವಾಗಿಡುವ ಪ್ರಯತ್ನ; ಬಿ.ಕೆ. ಧನಂಜಯ ರಾವ್

0

ಬೆಳ್ತಂಗಡಿ: ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ಡಾ.ಯು.ಪಿ ಶಿವಾನಂದರವರು ಬೆಳ್ತಂಗಡಿಯನ್ನು ಜೀವಂತವಾಗಿಡಲು ಪ್ರಯತ್ನ ಮಾಡಿದ್ದಾರೆ. ಬೇರೆ ಬೇರೆ ಹವ್ಯಾಸಿಗಳನ್ನು ಬೆಳೆಸುವ ಕೆಲಸವನ್ನು ಸುದ್ದಿ ಬಿಡುಗಡೆ ಪತ್ರಿಕೆ ಮಾಡಿದೆ ಎಂದು ಖ್ಯಾತ ವಕೀಲ ಬಿ.ಕೆ. ಧನಂಜಯ್ ರಾವ್ ಹೇಳಿದರು.

ಸುದ್ದಿ ಬಳಗದ ವತಿಯಿಂದ ಡಿ.೨೦ರಂದು ಸುದ್ದಿ ಬಿಡುಗಡೆ ಸ್ಟುಡಿಯೋದಲ್ಲಿ ಆಯೋಜಿಸಿದ ಸುದ್ದಿ ಬಿಡುಗಡೆ ದೀಪಾವಳಿ ವಿಶೇಷಾಂಕ-೨೦೨೫ರ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬನಿಗೂ ಅವನವನ ಹವ್ಯಾಸ ಶ್ರೇಷ್ಠ. ಅದನ್ನು ನಾವು ಗೌರವಿಸಬೇಕು. ಕೆಲವು ಮನೆಯಲ್ಲಿ ಕೃಷಿ ಮಾಡುತ್ತಾರೆ. ಆದರೆ ಎಷ್ಟೇ ಬ್ಯುಸಿ ಇದ್ದರೂ ಮಲಗುವ ಕೊನೆಯ ಸಮಯದಲ್ಲಿ ಸಿಗುವ ಆತ್ಮತೃಪ್ತಿ ಅಮೂಲ್ಯವಾದದ್ದು. ನಮಗೆ ಪ್ರೀತಿ ಇರುವ ಕೆಲಸ ಮಾಡಿದಾಗ ಮಾತ್ರ ಆತ್ಮ ತೃಪ್ತಿ ಸಿಗುತ್ತದೆ. ನಾವು ಅದನ್ನು ಬೆಳ್ತಂಗಡಿ ತಾಲೂಕಿನಲ್ಲಿ ಕಳೆದುಕೊಂಡಿದ್ದೆವು ಎಂದು ಹೇಳಿದರು. ಒಳ್ಳೆಯ ಕವಿಗಳು, ಬರಹಗಾರರು, ಫೋಟೋಗ್ರಾಫರ್ ಇದ್ದರು. ಮನೆಯಲ್ಲಿದ್ದ ಗೃಹಿಣಿಯರಿಗೆ ದೊಡ್ಡ ದೊಡ್ಡ ಕನಸುಗಳು, ಆಸೆಗಳಿತ್ತು. ಅಂತಹವರಿಗೆ ಸುದ್ದಿ ಬಿಡುಗಡೆ ಅವಕಾಶ ಕೊಟ್ಟಿದೆ. ಸುದ್ದಿ ಬಿಡುಗಡೆ ಕೇವಲ ಡಾ. ಯು.ಪಿ. ಶಿವಾನಂದ ಅವರದ್ದು ಅಲ್ಲ. ಅಥವಾ ಆ ಪತ್ರಿಕೆಯಲ್ಲಿ ಕೆಲಸ ಮಾಡುವವರದ್ದು ಅಲ್ಲ. ಅದು ಬೆಳ್ತಂಗಡಿಯವರಾದ ನಿಮ್ಮ ಪತ್ರಿಕೆ ಎಂದು ಹೇಳಿದ ಧನಂಜಯ ರಾವ್ ಅವರು ಸುದ್ದಿ ಬಿಡುಗಡೆ ಪತ್ರಿಕೆ ಎನ್ನುವ ಖಜಾನೆ ತುಂಬಿಸಿದ್ದು ಬೆಳ್ತಂಗಡಿಯ ಜನತೆ. ಇವತ್ತು ಈ ಪತ್ರಿಕೆಗೆ ೪೦ ವರ್ಷ ತುಂಬಿದೆ ಎಂದರೆ ಅದನ್ನು ಆಹಾರ ಕೊಟ್ಟು ಬೆಳೆಸಿದವರು ಓದುಗರಾದ, ಬರಹಗಾರರಾದ ನೀವು ಎಂದು ಹೇಳಿದರು.

ನನಗೆ ಪ್ರತಿಬಾರಿ ದೀಪಾವಳಿ ಸಂಚಿಕೆ ನೋಡುವಾಗ ಅದರ ಮುಖಪುಟದಲ್ಲಿ ದೀಪ ಹಿಡಿದ ಹೆಣ್ಣಿನ ಭಾವಚಿತ್ರ ಕಾಣಿಸುತ್ತಿತ್ತು. ಆಗ ನಾನು ಯಾಕೆ ಪ್ರತೀ ಪತ್ರಿಕೆಯವರೂ ಬದಲಾವಣೆಯ ದೃಷ್ಠಿಕೋನದಲ್ಲಿ ನೋಡುವುದಿಲ್ಲ ಎಂದು ಆಲೋಚನೆ ಉಂಟಾಗುತ್ತಿತ್ತು. ಆದರೆ ಈ ವರ್ಷದ ಸುದ್ದಿ ಬಿಡುಗಡೆಯ ದೀಪಾವಳಿ ಸಂಚಿಕೆಯ ಮುಖಪುಟ ನೋಡಿದಾಗ ನನಗೆ ಬಹಳ ಇಷ್ಟವಾಯಿತು. ಪ್ರತಿಯೊಬ್ಬರ ಜೀವನದ ಹಣತೆ, ಬೆಳಕು ಎಂದರೆ ಮಕ್ಕಳು. ಜೀವನದಲ್ಲಿ ದೀಪಾವಳಿ ತರುವುದೇ ನಮ್ಮ ಮನೆಯ ಮಕ್ಕಳು. ಹಾಗಾಗಿ ಸುದ್ದಿ ಬಿಡುಗಡೆಯ ಕಲ್ಪನೆ ನನಗೆ ಇಷ್ಟವಾಯಿತು. ಇಂತಹ ಹೊಸತನಗಳು ಬರುತ್ತಿರಬೇಕು. ಓದುಗರ, ಹವ್ಯಾಸಿಗಳ ಹಸಿವನ್ನು ಇಂಗಿಸುವ ಪತ್ರಿಕೆ ಸುದ್ದಿ ಬಿಡುಗಡೆ ಎಂದು ಬಿ.ಕೆ ಧನಂಜಯ್ ರಾವ್ ಶ್ಲಾಘಿಸಿದರು.

ದೀಪಾವಳಿ ವಿಶೇಷಾಂಕದ ಸ್ಪಧಾ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಅಲ್ಲದೆ ಲಕ್ಕಿ ಕೂಪನ್ ಡ್ರಾ ನೆರವೇರಿಸಲಾಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಸಿಇಒ ಸಿಂಚನ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಆರ್‌ಓ ರಾಘವ ಶರ್ಮಾ ನಿಡ್ಲೆ ದೀಪಾವಳಿ ಸಂಚಿಕೆಯ ಕುರಿತಾಗಿ ಮಾಹಿತಿ ನೀಡಿದರು. ಪ್ರಧಾನ ನಿರೂಪಕಿ ಶ್ರೇಯಾ ಪಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುದ್ದಿ ಬಳಗದ ಸಂದೀಪ್ ಶೆಟ್ಟಿ, ನೈನಾ ಪ್ರಸಾದ್, ಪುಷ್ಪರಾಜ್ ಶೆಟ್ಟಿ, ಸುವೀರ್ ಜೈನ್, ನಿಶಾನ್ ಬಂಗೇರ, ಆದಿತ್ಯ ಶೆಟ್ಟಿ, ಪ್ರತಿಮಾ, ಸೂಕ್ಷ್ಮ, ರಚನಾ, ವಿವಿನಾ ಡಿಸೋಜಾ ಮತ್ತಿತರರು ಸಹಕರಿಸಿದರು. ಸುದ್ದಿ ಚಾನೆಲ್ ಮುಖ್ಯಸ್ಥ ದಾಮೋದರ್ ದೊಂಡೋಲೆ ವಂದಿಸಿದರು.

ಪ್ರತಿ ಗ್ರಾಮದಲ್ಲಿಯೂ ನಮ್ಮೂರು ನಮ್ಮ ಹೆಮ್ಮೆ ಕಾರ್ಯಕ್ರಮ
ಗ್ರಾಮೀಣ ಭಾಗದ ಸಾಮಾನ್ಯ ಜನರ ವಿಷಯಗಳು, ಅವರ ವರದಿಗಳು ಪತ್ರಿಕೆಯಲ್ಲಿ ಬರಬೇಕು ಎನ್ನುವ ಉದ್ದೇಶದಿಂದ ೪೦ ವರ್ಷಗಳ ಹಿಂದೆ ಬೆಳ್ತಂಗಡಿಗೆ ಸುದ್ದಿ ಬಿಡುಗಡೆ ಪತ್ರಿಕೆ ಬಂತು. ವೈದ್ಯನಾಗಿದ್ದ ನಾನು ಪತ್ರಿಕೆ ಮಾಡಿದಾಗ ಅನೇಕ ಪ್ರಶ್ನೆಗಳು ಬಂದಿತ್ತು. ಆದರೆ ಈಗ ಪತ್ರಿಕೆ ಬಂದ ನಂತರ ಜನರು ನನ್ನನ್ನು ಸುದ್ದಿ ಬಿಡುಗಡೆಯ ಹೆಸರಿನಿಂದಲೇ ಗುರುತಿಸುತ್ತಾರೆ. ಜಗತ್ತಿನಲ್ಲಿರುವ ಬೆಳ್ತಂಗಡಿಯವರ ದೊಡ್ಡ ಪತ್ರಿಕೆಯಾಗಿ ಸುದ್ದಿ ಬಿಡುಗಡೆ ಇದೆ. ಅದೇ ರೀತಿ ಸುಳ್ಯ ಹಾಗೂ ಪುತ್ತೂರಿನಲ್ಲಿಯೂ ಪತ್ರಿಕೆ, ವೆಬ್‌ಸೈಟ್ ಮತ್ತು ಚಾನೆಲ್ ಇದೆ. ಪ್ರತಿಯೊಬ್ಬರಿಗೂ ಊರಿನ ನ್ಯೂಸ್ ಬೇಕು. ಹುಟ್ಟಿನಿಂದ ಸಾಯುವವರೆಗೆ ಜನರೊಂದಿಗೆ ಸುದ್ದಿ ಬಿಡುಗಡೆ ಇರುತ್ತದೆ. ನಮ್ಮ ಪತ್ರಿಕೆಯ ನಂತರವೇ ರಾಜ್ಯದ ಪತ್ರಿಕೆಗಳು ಲೋಕಲ್ ಎಡಿಷನ್ ಆರಂಭ ಮಾಡಿರುವುದು. ಬೆಳ್ತಂಗಡಿಯ ಸುದ್ದಿ ಪತ್ರಿಕೆ ನನ್ನದಲ್ಲ. ಅದು ಬೆಳ್ತಂಗಡಿಯವರದ್ದು. ಪ್ರತಿ ಗ್ರಾಮದಲ್ಲಿಯೂ ನಮ್ಮೂರು ನಮ್ಮ ಹೆಮ್ಮೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ಗ್ರಾಮದ ಜನರ ಜೊತೆ ನಾವು ಇದ್ದೇವೆ. ನಮ್ಮೊಂದಿಗೆ ತಾಲೂಕಿನ ಜನರಿದ್ದಾರೆ.
-ಡಾ.ಯು.ಪಿ. ಶಿವಾನಂದ , ಆಡಳಿತ ನಿರ್ದೇಶಕರು ಸುದ್ದಿ ಸಮೂಹ ಸಂಸ್ಥೆ

LEAVE A REPLY

Please enter your comment!
Please enter your name here